ADVERTISEMENT

11,540 ಹೊಸ ಶೌಚಾಲಯಗಳ ನಿರ್ಮಾಣಕ್ಕೆ ಪ್ರಸ್ತಾವ!

ವರ್ಷದ ಹಿಂದೆಯಷ್ಟೆ ಶಿವಮೊಗ್ಗಕ್ಕೆ ಬಯಲು ಶೌಚಾಲಯ ಮುಕ್ತ ಜಿಲ್ಲೆಯ ಸ್ಥಾನಮಾನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 12:48 IST
Last Updated 29 ನವೆಂಬರ್ 2018, 12:48 IST
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ಕುಮಾರ್ ಮಾತನಾಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ಕುಮಾರ್ ಮಾತನಾಡಿದರು.   

ಶಿವಮೊಗ್ಗ:ಪ್ರಾಥಮಿಕ ಹಂತದಲ್ಲಿ ಬಯಲು ಶೌಚಾಲಯ ಮುಕ್ತ ಜಿಲ್ಲೆ ಎಂದು ಘೋಷಿಸಿದ್ದರೂ, ಹೊಸದಾಗಿ 11,540 ಶೌಚಾಲಯಗಳ ನಿರ್ಮಾಣಕ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ.

ಸರ್ಕಾರದ ನಿಯಮದಂತೆ ಯಾವುದೇ ಜಿಲ್ಲೆ ಶೇ 80ಕ್ಕೂ ಅಧಿಕ ಶೌಚಾಲಯ ಸಂಪರ್ಕ ಹೊಂದಿದ್ದರೆ ಅಂತಹ ಜಿಲ್ಲೆಗಳನ್ನು ಸಂಪೂರ್ಣ ಬಯಲು ಶೌಚಾಲಯ ಮುಕ್ತ ಎಂದು ಘೋಷಿಸಲಾಗುತ್ತದೆ. ಕುಟುಂಬಗಳು ವಿಸ್ತಾರವಾದಂತೆ ಹೊಸದಾಗಿ ಶೌಚಾಲಯಗಳ ಅಗತ್ಯವಿದ್ದರೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಹುದು. ಜಿಲ್ಲೆಯಲ್ಲೂ ಅಕ್ಟೋಬರ್‌ನಲ್ಲಿ ಸಮೀಕ್ಷೆ ನಡೆಸಲಾಗಿತ್ತು ಎಂದು ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಿಇಒ ಶಿವರಾಮೇಗೌಡ ಮಾಹಿತಿ ನೀಡಿದರು.

ಮಗು ಸಾವಿಗೆ ಪರಿಹಾರ:

ADVERTISEMENT

ಹೊಸನಗರ ತಾಲೂಕು ತಮ್ಮಡಿಕೊಪ್ಪದ ಅಂಗನವಾಡಿಯಲ್ಲಿ ಹಾವು ಕಡಿದು ಮೃತಪಟ್ಟ ಮಗುವಿಮ ಕುಟುಂಬಕ್ಕೆಪರಿಹಾರ ಒದಗಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಮಗುವಿನ ಸಾವಿಗೆ ಪ್ರತಿಯೊಬ್ಬರೂ ಜವಾಬ್ದಾರರು. ಶಾಲೆಗಳಲ್ಲಿ ಈ ರೀತಿಯ ಅವಘಡ ಸಂಭವಿಸಿದರೆ ₹ 1 ಲಕ್ಷ ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಈ ಮಗುವಿಗೂ ಪರಿಹಾರ ಒದಗಿಸಲು ಕೋರಲಾಗುವುದು ಎಂದರು.

ಜಿಲ್ಲೆಯಲ್ಲಿ 220 ಅಂಗನವಾಡಿಗಳು ಶಿಥಿಲ ಬಾಡಿಗೆ ಕಟ್ಟದಲ್ಲಿ ನಡೆಯುತ್ತಿವೆ. ಇಂತಹ ಅಂಗನವಾಡಿ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಶ್ವೇತಾ ಬಂಡಿ ಒತ್ತಾಯಿಸಿದರು.

ಶಾಲಾ ಕೊಠಡಿ ದುರಸ್ತಿ:

ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕೊಠಡಿಗಳ ದುರಸ್ತಿಗಾಗಿ ₹ 1.65 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಡಿಡಿಪಿಐ ಸುಮಂಗಲಾ ಮಾಹಿತಿ ನೀಡಿದರು.

ಮರಳು ಸಮಸ್ಯೆ ಪ್ರಸ್ತಾಪ:

ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಮನೆ ಕಟ್ಟಲು, ಆಶ್ರಯ ಮನೆ, ದೇವಸ್ಥಾನ ನಿರ್ಮಾಣ, ಶೌಚಾಲಯ ನಿರ್ಮಾಣ, ಶಾಲೆಗಳ ದುರಸ್ಥಿಗೆ ಮರಳು ಸಿಗುತ್ತಿಲ್ಲ.ಅನಧಿಕೃತ ಮರಳುಗಾರಿಕೆ ನಿರಂತರವಾಗಿ ಸಾಗಿದೆ. ಪಟ್ಟಭದ್ರರು ಮರಳು ಲೂಟಿ ಹೊಡೆಯುತ್ತಿದ್ದಾರೆ. ಇತ್ತ ಜನಸಾಮಾನ್ಯರು ಎತ್ತಿನಗಾಡಿ, ಟ್ರ್ಯಾಕ್ಟರ್ ಮರಳು ಸಾಗಿಸಿದರೆ ಹಿಡಿದು ದಂಡ ವಿಧಿಸಲಾಗುತ್ತಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಭೂ ವಿಜ್ಞಾನಿ ವಿಂಧ್ಯಾ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಮನೆ ನಿರ್ಮಾಣಕ್ಕೆ ಟ್ರ್ಯಾಕ್ಟರ್, ಎತ್ತಿನಗಾಡಿ, ಅಟೊರಿಕ್ಷಾಗಳಲ್ಲಿ ಮರಳು ಸಾಗಿಸಲು ಅಡ್ಡಿ ಮಾಡಿಲ್ಲ. ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ₹ 5ಲಕ್ಷ ದಂಡ ವಸೂಲು ಮಾಡಲಾಗಿದೆ. 2 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಪ್ರತಿಸಭೆಯಲ್ಲೂ ಗಣಿ ಇಲಾಖೆ ವಿವರಣೆ ಕೇಳುವುದೇ ಆಗಿದೆ. ಮರಳು ಮಾತ್ರ ಸಿಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊನೆಗೆ ಮರಳು ಸಮಸ್ಯೆ ಕುರಿತು ಚರ್ಚಿಸಲು ಮುಂದಿನ ವಾರದಲ್ಲಿ ವಿಶೇಷ ಸಭೆ ಕರೆಯಲು ನಿರ್ಧರಿಸಲಾಯಿತು.

ಕಲಬೆರಕೆ ಹಾಲು

ಜಿಲ್ಲೆಯಲ್ಲಿ ಕಲಬೆರಕೆ ಹಾಲು ಪ್ರಕರಣಗಳು ಬೆಳಕಿಗೆ ಬಂದಿವೆ. ಕಲಬೆರಕೆ ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಆಹಾರ ಸುರಕ್ಷತಾ ಅಧಿಕಾರಿಗಳು, ಪಶು ಸಂಗೋಪನಾ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾಗರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ದೂರಿದರು.

ಸ್ಥಾಯಿ ಸಮಿತಿ ರಚನೆಗೆ ಅಸ್ತು

ಸ್ಥಾಯಿ ಸಮಿತಿ ರಚನೆಯ ಸಂಪೂರ್ಣ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಸರ್ವಾನುಮತದ ನಿರ್ಣಯ ಅಂಗೀಕರಿಸಿತು.

ಸ್ಥಾಯಿ ಸಮಿತಿ ರಚನೆಯ ಕಾರಣಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್–ಜೆಡಿಎಸ್ ಮಧ್ಯೆ ಜಟಾಪಟಿ ನಡೆದು ಹಲವು ತಿಂಗಳು ಸಾಮಾನ್ಯ ಸಭೆ ನಡೆದಿರಲಿಲ್ಲ. ಕೊನೆಗೆ ರಾಜೀ ಸಂಧಾನ ನಡೆದು ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿಗೆ, ಒಂದು ಆಡಳಿತ ಪಕ್ಷಕ್ಕೆ ಬಿಟ್ಟು ಕೊಡಲಾಗಿತ್ತು.

ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ

ಸಭೆಯ ಆರಂಭದಲ್ಲಿ ಈಚೆಗೆ ನಿಧನರಾದ ಮಾಜಿ ಪ್ರಧಾನಿ ವಾಜಪೇಯಿ, ಕೇಂದ್ರ ಸಚಿವ ಅನಂತಕುಮಾರ್, ಚಿತ್ರನಟ ಅಂಬರೀಶ್, ಮಾಜಿ ಸಚಿವ ಜಾಫರ್ ಷರೀಫ್, ಜಿಲ್ಲಾ ಪಂಚಾಯ್ತಿ ಸದಸ್ಯ ಕಾಗೋಡು ಅಣ್ಣಾಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.