ADVERTISEMENT

ಡಿಕೆಶಿ – ಸಿದ್ದರಾಮಯ್ಯ ಚರ್ಚೆ: ‘ಕೈ’ ಹಿಡಿದು ಹೆಜ್ಜೆ?

ರಾಜ್ಯಸಭೆ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸುವ ವಿಚಾರದಲ್ಲಿ ಅಪಸ್ವರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 20:03 IST
Last Updated 2 ಜೂನ್ 2022, 20:03 IST
ಸಿದ್ದರಾಮಯ್ಯ– ಡಿ.ಕೆ. ಶಿವಕುಮಾರ್‌ ಚರ್ಚೆ
ಸಿದ್ದರಾಮಯ್ಯ– ಡಿ.ಕೆ. ಶಿವಕುಮಾರ್‌ ಚರ್ಚೆ   

ಬೆಂಗಳೂರು: ಪರಸ್ಪರ ಗುದ್ದಾಟ ನಡೆಸಿ, ಮೂರನೇಯವರಿಗೆ (ಬಿಜೆಪಿ, ಜೆಡಿಎಸ್‌) ಲಾಭ ಮಾಡಿಕೊಡುವ ಬದಲು, ಜೊತೆಯಲ್ಲಿ ಹೆಜ್ಜೆ ಹಾಕಿ ಪಕ್ಷವನ್ನು ಸಂಘಟಿಸಲು ಮತ್ತು ಮುಂದಿನ ಚುನಾವಣೆಗೆ ಸಜ್ಜುಗೊಳಿಸುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ‘ಸಹಮತ’ಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಪಕ್ಷ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ ನಾಯಕರ ಜೊತೆ ಚರ್ಚಿಸಲು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ದೌಡಾಯಿಸಿದ ಬೆನ್ನಲ್ಲೆ ಈ ಇಬ್ಬರು ನಾಯಕರು ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ನಗರದ ಹೊರವಲಯದ ಹೋಟೆಲ್‌ನಲ್ಲಿ ಗುರುವಾರ ನಡೆದ ‘ನವ ಸಂಕಲ್ಪ ಚಿಂತನಾ ಶಿಬಿರ’ದ ಸಂದರ್ಭದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಪಕ್ಷದ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ವೇಳೆ ಬಹುತೇಕರು ಬೆಂಬಲ ಸೂಚಿಸಲು ಅಪಸ್ವರ ಎತ್ತಿದ್ದಾರೆ. ‘ಈ ಹಿಂದೆ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದು, ದೇವೇಗೌಡ ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಲು ಬೆಂಬಲ ನೀಡಲಾಗಿದೆ. ಮತ್ತೆ ಮತ್ತೆ ನಾವ್ಯಾಕೆ ಶರಣಾಗಬೇಕು. ಅವರು (ಜೆಡಿಎಸ್‌) ನಮ್ಮ ಅಭ್ಯರ್ಥಿಗೆ (ಮನ್ಸೂರ್‌ ಖಾನ್‌) ಬೆಂಬಲ ನೀಡಲಿ’ ಎಂದು ಬಹುತೇಕ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ADVERTISEMENT

ಈ ಮಧ್ಯೆಯೇ ಹೋಟೆಲ್‌ನಲ್ಲಿ ಮಾತುಕತೆ ನಡೆಸಿರುವ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ, ರಾಜ್ಯದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಮತ್ತು ಹೈಕಮಾಂಡ್‌ ಸೂಚನೆಯಂತೆ ಒಗ್ಗಟ್ಟಿನಿಂದ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಮುಖಂಡರಾದ ಚೆಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ನಜೀರ್‌ ಅಹ್ಮದ್‌ ಅವರು ಈ ಇಬ್ಬರ ಮಧ್ಯೆ ಮಾತುಕತೆಗೆ ಕಾರಣರಾಗಿದ್ದರು ಎಂದೂ ಗೊತ್ತಾಗಿದೆ.

ಖರ್ಗೆ ದೆಹಲಿಗೆ: ತಮ್ಮ ಅಭ್ಯರ್ಥಿಯನ್ನೇ ಗೆಲ್ಲಿಸಬೇಕೆಂಬ ತವಕದಲ್ಲಿರುವಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರು, ಕಾಂಗ್ರೆಸ್‌ ಬೆಂಬಲ ನೀಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದರು. ಈ ವಿಷಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಹಮತ ತೋರಿಲ್ಲ. ಹೀಗಾಗಿ, ತಮ್ಮ ಪಕ್ಷದ ವರಿಷ್ಠರ ಮನವೊಲಿಸಲು ಖರ್ಗೆಯವರು ದಿಢೀರ್‌ ದೆಹಲಿಗೆ ತೆರಳಿದ್ದಾರೆ ಎಂದೂ ಹೇಳಲಾಗುತ್ತಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.