ADVERTISEMENT

‘ಎರಡು ದಶಕದ ಸಮಸ್ಯೆಗೆ ತಿಂಗಳಲ್ಲಿ ಪರಿಹಾರ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:06 IST
Last Updated 4 ಜೂನ್ 2019, 20:06 IST
   

ಬೆಂಗಳೂರು: ‘ನಗರದ ಸಿಲ್ಕ್‌ ಬೋರ್ಡ್‌ ಜಂಕ್ಷನ್ ಹಾಗೂ ಟಿನ್‌ ಫ್ಯಾಕ್ಟರಿ ಬಳಿ ಸಂಚಾರ ದಟ್ಟಣೆ ಸಮಸ್ಯೆ 20 ವರ್ಷಗಳಿಂದ ಇದೆ. ಅದರ ಪರಿಹಾರಕ್ಕೆ ಈಗಾಗಲೇ ಕ್ರಮ ಕೈಗೊಂಡಿದ್ದು, ಇನ್ನೊಂದು ತಿಂಗಳಿನಲ್ಲಿ ನನ್ನ ಕೈಯಲ್ಲಾದಷ್ಟು ಪರಿಹಾರ ನೀಡುತ್ತೇನೆ’ ಎಂದು ಪಿ. ಹರಿಶೇಖರನ್ ಹೇಳಿದರು.

ತುಮಕೂರು, ಮೈಸೂರು, ಹೊಸೂರು ಹಾಗೂ ವಿಮಾನ ನಿಲ್ದಾಣ ಕಡೆಗೆ ಹೋಗುವ ರಸ್ತೆಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ ಬಗ್ಗೆ ಸಾರ್ವಜನಿಕರಿಂದ ಹೆಚ್ಚು ಕರೆಗಳು ಬಂದವು. ದಟ್ಟಣೆಗೆ ಕಾರಣವೇನು, ಪರಿಹಾರ ಏನು, ಸಮಸ್ಯೆ ಹೀಗೆ ಮುಂದುವರಿದರೆ ಮುಂದೆ ಏನಾಗುತ್ತದೆ ಎಂಬ ಬಗ್ಗೆ ಉದಾಹರಣೆ ಸಮೇತ ಅವರು ವಿವರಿಸಿದರು.

ಎಲೆಕ್ಟ್ರಾನಿಕ್ ಸಿಟಿಯ ಹೊಸರಸ್ತೆ ನಿವಾಸಿ ರಾಮಚಂದ್ರ, ‘ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಎಲ್ಲೆಂದರಲ್ಲಿ ತಮಿಳುನಾಡಿನಿಂದ ಬರುವ ಬಸ್‌ಗಳು ನಿಲ್ಲುತ್ತಿದ್ದು, ಅಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಇದು ದಟ್ಟಣೆಗೆ ಕಾರಣವಾಗುತ್ತಿದ್ದು, ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ಬರುತ್ತಿದೆ. ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ’ ಎಂದರು.

ADVERTISEMENT

ಹರಿಶೇಖರನ್, ‘ಇದು 20 ವರ್ಷದ ಸಮಸ್ಯೆ. ದಿಢೀರ್ ಬದಲಾವಣೆ ಮಾಡಲು ಆಗಲ್ಲ. ಕಾಲಾವಕಾಶ ಕೊಡಿ. ಸ್ವಲ್ಪವಾದರೂ ಬದಲಾವಣೆ ತರುತ್ತೇನೆ’ ಎಂದರು.

‘ಖಾಸಗಿ ಬಸ್‌ ಬಳಸುವವರೂ ಸಾರ್ವಜನಿಕರೇ. ಅಂಥ ಬಸ್‌ಗಳಿಗೆ ನಾವು ನಿಲ್ದಾಣ ಕೊಟ್ಟಿಲ್ಲ. ಜಾಗವೂ ಇಲ್ಲ. ಹೀಗಾಗಿ ಈ ಸಮಸ್ಯೆ ಎದುರಾಗಿದೆ. ಈ ಹಿಂದೆ ನಾನೇ ಹೊಸೂರು ರಸ್ತೆಯಲ್ಲಿ ಒಂದು ಎಕರೆ ಜಾಗದಲ್ಲಿ ನಿಲ್ದಾಣ ಮಾಡಿದ್ದೆ. ದೇವರು ಬಂದರೂ ಸಿಲ್ಕ್‌ಬೋರ್ಡ್‌ ಜಂಕ್ಷನ್ ದಟ್ಟಣೆ ಕಡಿಮೆ ಮಾಡಲು ಆಗುವುದಿಲ್ಲ ಎಂಬ ಮಾತಿದೆ. ಈಗ ನಾನು ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇನೆ’ ಎಂದರು.

ಕೆ.ಆರ್.ಪುರದ ಶ್ರೀನಿವಾಸ್, ‘ಟಿನ್‌ ಫ್ಯಾಕ್ಟರಿ ದಟ್ಟಣೆಗೆ ಪರಿಹಾರ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಇದು ಕೂಡಾ 20 ವರ್ಷಗಳ ಹಿಂದಿನ ಸಮಸ್ಯೆ. ಇದನ್ನೂ ಸವಾಲಾಗಿ ಸ್ವೀಕರಿಸಿ ಕೆಲಸ ಶುರು ಮಾಡಿದ್ದೇನೆ. ಸಂಚಾರಕ್ಕೆ ಅಡ್ಡಿಯಾಗಿರುವ ಆಟೊ ತಂಗುದಾಣ ತೆರವು ಮಾಡಿ ರಸ್ತೆ ವಿಸ್ತರಣೆ ಮಾಡಿಸುತ್ತಿದ್ದೇನೆ. ತಿಂಗಳ ಒಳಗಾಗಿ ನಿಮಗೆ ಫಲಿತಾಂಶ ಕೊಡುತ್ತೇನೆ’ ಎಂದು ಹರಿಶೇಖರನ್ ತಿಳಿಸಿದರು.

ಎಲೆಕ್ಟ್ರಾನಿಕ್ ಸಿಟಿಯ ವಿಜಯಕುಮಾರ್, ‘ಸಿಲ್ಕ್‌ ಬೋರ್ಡ್‌ ಮೇಲ್ಸೇತುವೆಯಲ್ಲಿ ಖಾಸಗಿ ವಾಹನಗಳು ನಿಲ್ಲುತ್ತಿದ್ದು, ಅಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ’ ಎಂದರು.

ಕೂಡಲೇ ಡಿಸಿಪಿಗೆ ಕರೆ ಮಾಡಿದ ಹರಿಶೇಖರ್, ‘ಮೇಲ್ಸೇತುವೆಯಲ್ಲಿ ಬಸ್ ನಿಲ್ಲಿಸಬೇಡಿ ಅಂತಾ ಆದೇಶ ಮಾಡಿಲ್ವಾ? ಈಗಲೇ ಸ್ಥಳಕ್ಕೆ ಭೇಟಿ ನೀಡಿ, ಅಂಥ ಬಸ್ ಓಡಾಟ ಬಂದ್ ಮಾಡಿ. ತಪ್ಪಾಗಿದ್ದು ಕಂಡುಬಂದರೆ ಸಂಬಂಧಪಟ್ಟ ಇನ್‌ಸ್ಪೆಕ್ಟರನ್ನು ಅಮಾನತು ಮಾಡಿ’ ಎಂದು ಖಡಕ್‌ ಸೂಚನೆ ನೀಡಿದರು.

ಫುಟ್‌ಪಾತ್ ಒತ್ತುವರಿ: ಹೆಣ್ಣೂರಿನ ಮುನಿರಾಜು, ‘ಫುಟ್‌ಪಾತ್‌ ಒತ್ತುವರಿ ಮಾಡಿಕೊಂಡು ಕೆಲವರು ವ್ಯಾಪಾರ ಮಾಡುತ್ತಿದ್ದು, ದಟ್ಟಣೆಗೆ ಕಾರಣವಾಗುತ್ತಿದೆ’ ಎಂದರು.

ಹರಿಶೇಖರನ್, ‘ಅಂಗಡಿಗಳಿಗೆ ಬಿಬಿಎಂಪಿಯವರು ಪರವಾನಗಿ ಕೊಡುತ್ತಾರೆ. ಅವರನ್ನು ಈ ಬಗ್ಗೆ ವಿಚಾರಿಸಿ. ನಾನೂ ನಿಮ್ಮೊಂದಿಗಿರುತ್ತೇನೆ’ ಎಂದು ಧೈರ್ಯ ತುಂಬಿದರು.

‘ವ್ಯಾಪಾರಿಯೊಬ್ಬ ಫುಟ್‌ಪಾತ್‌ ಮೇಲೆ ಇಟ್ಟಿಗೆ ಇಟ್ಟು ಮಾರುತ್ತಾನೆ, ಇನ್ನೊಬ್ಬ ಎರಡು ಲಾರಿಗಳನ್ನು ನಿಲ್ಲಿಸುತ್ತಾನೆ.ನಗರದ ಫುಟ್‌ಪಾತ್‌ಗಳಲ್ಲಿ 50 ಸಾವಿರ ಮೆಕ್ಯಾನಿಕ್‌ಗಳು ಇದ್ದಾರೆ. ಅವರನ್ನು ತೆರವು ಮಾಡಿ ಎಲ್ಲಿಗೆ ಕಳುಹಿಸಬೇಕು. ಇದು ನಮ್ಮ ಊರು, ಇವರೆಲ್ಲ ನಮ್ಮ ಜನ. ಅವರನ್ನು ಹೇಗೆ ಬಿಟ್ಟುಕೊಡುವುದು. ನಮಗೆ ಎಲ್ಲರೂ ಬೇಕು. ಹೀಗಾಗಿ, ತೆರವು ಮಾಡಿದರೆ, ಮುಂದೇನು ಎಂಬ ಬಗ್ಗೆ ನಾವು ಯೋಚನೆ ಮಾಡಬೇಕಿದೆ’ ಎಂದರು.

‘ಡ್ಯೂಟಿ’ ಬಿಟ್ಟು ಮೊಬೈಲ್ ಹಿಡಿದರೆ ಅಮಾನತು

‘ಎಂಟು ಗಂಟೆ ಮಾತ್ರ ಕೆಲಸ ಮಾಡುವ ಅವಕಾಶವನ್ನು ಸಂಚಾರ ಪೊಲೀಸರಿಗೆ ನೀಡಲಾಗಿದೆ. ಆ ಅವಧಿಯಲ್ಲೂ ಅವರು ಕರ್ತವ್ಯ ನಿರ್ವಹಿಸದೆ ಮೊಬೈಲ್‌ನಲ್ಲಿ ಕಾಲ ಕಳೆದರೆ ಅಮಾನತು ಮಾಡಲಾಗುವುದು. ಆ ಸಂಬಂಧ ಡಿಸಿಪಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಹರಿಶೇಖರನ್‌ ಹೇಳಿದರು.

‘ಕೆ.ಆರ್. ಮಾರುಕಟ್ಟೆಗೆ ಬೆಳಿಗ್ಗೆ 8.25ಕ್ಕೆ ಹೋಗಿದ್ದೆ. ಅಲ್ಲಿದ್ದ ಕಾನ್‌ಸ್ಟೆಬಲ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆತನನ್ನೂ ಸ್ಥಳದಲ್ಲೇ ಅಮಾನತು ಮಾಡಲು ಡಿಸಿಪಿಗೆ ಹೇಳಿದೆ’ ಎಂದರು.

ಕಬ್ಬನ್‌ಪೇಟೆಯ ನಿವಾಸಿ ಕೃಷ್ಣಮೂರ್ತಿ, ‘ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಅದನ್ನು ಕೇಳಬೇಕಾದ ಪೊಲೀಸರೇ ಅಲ್ಲಿರುವುದಿಲ್ಲ’ ಎಂದರು.

ಹರಿಶೇಖರನ್, ‘2ರಿಂದ 5 ಜನ ಅಲ್ಲಿ ಕೆಲಸ ಮಾಡುತ್ತಾರೆ. ಅವರು ಸ್ಥಳದಲ್ಲಿ ಇಲ್ಲದಿರುವುದು ಸಾಬೀತಾದರೂ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಆಟೊ ಚಾಲಕರೊಬ್ಬರು, ‘ಬನ್ನೇರುಘಟ್ಟ ರಸ್ತೆ, ಜಯನಗರದಲ್ಲಿ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮೊಬೈಲ್‌ನಲ್ಲಿ ವಿಡಿಯೊ ನೋಡುತ್ತ ಕುಳಿತುಕೊಳ್ಳುತ್ತಾರೆ’ ಎಂದರು.

ಕತ್ರಿಗುಪ್ಪೆಯ ನವೀನ್, ‘ಆಡುಗೋಡಿ ಸಿಗ್ನಲ್‌ಗಳನ್ನು ಪೊಲೀಸರೇ ನಿರ್ವಹಣೆ ಮಾಡುತ್ತಾರೆ. ಒಮ್ಮೊಮ್ಮೆ ಪೊಲೀಸರು, ಮೊಬೈಲ್‌ ನೋಡುತ್ತಲೇ ಇರುತ್ತಾರೆ. ಸರಿಯಾಗಿ ಸಿಗ್ನಲ್‌ ಬಿಡುವುದಿಲ್ಲ. ಅದರಿಂದ ದಟ್ಟಣೆ ಉಂಟಾಗುತ್ತಿದೆ’ ಎಂದರು.

ಹರಿಶೇಖರನ್, ‘ಇದು ನನ್ನ ಗಮನಕ್ಕೂ ಬಂದಿದೆ. ಮೊಬೈಲ್‌ನಲ್ಲಿ ಯೂಟ್ಯೂಬ್ ನೋಡುತ್ತ ಕಾಲ ಕಳೆಯುವವರನ್ನು ತಕ್ಷಣ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದೇನೆ’ ಎಂದರು.

ಪ್ರತ್ಯೇಕ ‘ಬಸ್‌ ಬೇ‘ಗೆ ಒಕ್ಕೊರಲ ಮನವಿ

‘ರಾಜಧಾನಿಯ ಬಹುತೇಕ ರಸ್ತೆಗಳಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುತ್ತಿವೆ. ಅದುವೇ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ’ ಎಂದು ಹಲವರು ದೂರಿದರು.

ಕೋರಮಂಗಲದ ವೇಣು, ‘ಸೋನಿ ಜಂಕ್ಷನ್‌ನಲ್ಲಿ ಬಸ್‌ಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಬಸ್‌ಬೇ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸಿ’ ಎಂದರು.

ಆರ್‌.ಟಿ. ನಗರದ ರಾಧಾಕೃಷ್ಣ, ‘ನಿಮ್ಮ ಸಮಯದಲ್ಲೇ ಬಸ್‌ ಬೇ ಆಗಲಿ. ನಾವು ನೆನೆಸಿಕೊಳ್ಳುತ್ತೇವೆ’ ಎಂದರು.

ಪುಟ್ಟವೀರಣ್ಣ, ‘ದಯವಿಟ್ಟು ಬಸ್‌ಬೇ ಮಾಡಿ ನಿಮಗೆ ಪುಣ್ಯ ಬರುತ್ತದೆ’ ಎಂದು ಕೋರಿದರು.

ಮೂವರ ಪ್ರಶ್ನೆಗೂ ಉತ್ತರಿಸಿದ ಹರಿಶೇಖರನ್, ‘ನಗರದ 100 ಕಡೆ ಬಸ್‌ ನಿಲ್ಲಿಸಲು ಸೂಕ್ತ ತಂಗುದಾಣ ಇಲ್ಲ. ಅಲ್ಲೆಲ್ಲ ಸಿಕ್ಕಿ ಸಿಕ್ಕಲ್ಲಿ ಬಸ್‌ಗಳು ನಿಲ್ಲುತ್ತಿವೆ. ಆ ಬಗ್ಗೆ ಬಸ್‌ ಆಡಳಿತ ಮಂಡಳಿಗಳಿಗೂ ಹೇಳಿದ್ದೇವೆ. ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಬಿಎಂಟಿಸಿಗೆ ಕೋರಿದ್ದೇವೆ. ನೀವು ಅವರನ್ನು ಕೇಳಿ. ನಿಮ್ಮ ಧ್ವನಿಗೆ ನಾನೂ ಧ್ವನಿ ಆಗುತ್ತೇನೆ’ ಎಂದರು.

ಆಟೊದವರಿಂದ ಹೆಚ್ಚು ವಸೂಲಿ; ವಿಶೇಷ ಕಾರ್ಯಾಚರಣೆ ಶೀಘ್ರ

‘ಮೆಜೆಸ್ಟಿಕ್, ನವರಂಗ್‌ ವೃತ್ತ, ಯಶವಂತಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ತಮ್ಮದೇ ಗುಂಪು ಕಟ್ಟಿಕೊಂಡಿರುವ ಆಟೊ ಚಾಲಕರು, ಬೇಕಾಬಿಟ್ಟಿಯಾಗಿ ಬಾಡಿಗೆ ನಿಗದಿಪಡಿಸಿ ಸುಲಿಗೆ ಮಾಡುತ್ತಿದ್ದಾರೆ. ನಮ್ಮಂಥ ಚಾಲಕರು, ಮೀಟರ್‌ ಅನ್ವಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮುಂದಾದರೆ ಜೀವಬೆದರಿಕೆ ಹಾಕುತ್ತಿದ್ದಾರೆ’ ಎಂದು ಬಸವೇಶ್ವರ ನಗರದ ಆಟೊ ಚಾಲಕರೊಬ್ಬರು ಹೇಳಿದರು.

‘ಚಾಲಕರ ಗುಂಪುಗಳಿಂದ ಹಣ ಪಡೆಯುತ್ತಿರುವ ಪೊಲೀಸರೇ ಅವರನ್ನು ಬೆಳೆಸುತ್ತಿದ್ದಾರೆ. ಹೊಸ ಚಾಲಕರು ಯಾರಾದರೂ ಆ ಪ್ರದೇಶಗಳಿಗೆ ಹೋದರೆ ಅಲ್ಲಿ ನಿಂತುಕೊಳ್ಳಲು ಸಹ ಕೊಡುವುದಿಲ್ಲ. ದಯವಿಟ್ಟು ಒಮ್ಮೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ’ ಎಂದು ಕೋರಿದರು.

ಕೆ.ಆರ್‌. ಪುರದ ಮಹಿಳೆಯೊಬ್ಬರು, ‘ಕೆ.ಆರ್. ಪುರದಿಂದ ಹೊರಮಾವು ಹೋಗಲು ಆಟೊದವರು ₹ 150 ಕೇಳುತ್ತಾರೆ. ಮೀಟರ್ ಹಾಕಿ ಎಂದರೂ ಹಾಕುವುದಿಲ್ಲ’ ಎಂದರು.

ಹರಿಶೇಖರನ್, ‘ಪೊಲೀಸರು ಶಾಮೀಲಾಗಿದ್ದಾರೆ ಎಂದು ಹೇಳಲಾಗದು. ಆಟೊ ಸಂಘದವರೇ ಆ ರೀತಿ ವರ್ತಿಸುತ್ತಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು’ ಎಂದರು.

‘‍ಪಿಕ್ ಅವರ್‌’ನಲ್ಲಿ ತಪಾಸಣೆ ಮಾಡದಂತೆ ಸೂಚನೆ

ಆಟೊ ಚಾಲಕ ವೇಣುಗೋಪಾಲ್,‘ಕಾಯ್ದೆ ಪ್ರಕಾರ ಪೊಲೀಸರು ಕೆಲಸ ಮಾಡುತ್ತಿಲ್ಲ. ಪ್ರಯಾಣಿಕರು ಆಟೊದಲ್ಲಿ ಇದ್ದಾಗಲೇ ತಡೆದು ತೊಂದರೆ ಕೊಡುತ್ತಾರೆ’ ಎಂದು ದೂರಿದರು.

ಆಗ ಹರಿಶೇಖರನ್, ‘ಆಟೊದವರನ್ನು ತಪಾಸಣೆ ಮಾಡುವುದು ತಪ್ಪಾ’ ಎಂದು ಪ್ರಶ್ನಿಸಿದರು. ‘ಜನರು ಹೆಚ್ಚು ಓಡಾಡುವ ಸಮಯದಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಟ್ಟುತಪಾಸಣೆ ಮಾಡದಂತೆ ಸೂಚನೆ ನೀಡಿದ್ದೇನೆ. ಯಾರಾದರೂ ತೊಂದರೆ ಕೊಟ್ಟರೆ ನಿರ್ದಿಷ್ಟವಾಗಿ ದೂರು ನೀಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.