ADVERTISEMENT

ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಗೆ ಪರದಾಟ

ಪದೇ ಪದೇ ಸರ್ವರ್‌ ಸಮಸ್ಯೆ: ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ

ಆರ್.ಜಿತೇಂದ್ರ
Published 21 ನವೆಂಬರ್ 2019, 4:10 IST
Last Updated 21 ನವೆಂಬರ್ 2019, 4:10 IST
ರಾಮನಗರದ ಪ್ರಕೃತಿ ಸೈಬರ್ ಕೇಂದ್ರದಲ್ಲಿ ಬುಧವಾರ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಗೆ ಕಾದಿದ್ದ ವಿದ್ಯಾರ್ಥಿಗಳು
ರಾಮನಗರದ ಪ್ರಕೃತಿ ಸೈಬರ್ ಕೇಂದ್ರದಲ್ಲಿ ಬುಧವಾರ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಗೆ ಕಾದಿದ್ದ ವಿದ್ಯಾರ್ಥಿಗಳು   

ರಾಮನಗರ: ರಾಜ್ಯ ಸರ್ಕಾರದ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಗೊಂದಲದ ಗೂಡಾಗಿದೆ. ಪದೇ ಪದೇ ಸರ್ವರ್‌ ಕೈ ಕೊಡುತ್ತಿರುವ ಕಾರಣ ವಿದ್ಯಾರ್ಥಿಗಳು ಹೈರಾಣಾಗುತ್ತಿದ್ದಾರೆ.

ಸರ್ಕಾರವು ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಕೆಯಾಗಿ ‘ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ’ ಎನ್ನುವ ವೆಬ್‌ಸೈಟ್‌ ಅನ್ನು ರೂಪಿಸಿದೆ. http://ssp.postmatric.karnataka.gov.in/ ವಿಳಾಸದ ಈ ವೆಬ್‌ಸೈಟ್‌ ಮೂಲಕ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಅಲ್ಪಸಖ್ಯಾತರ ಕಲ್ಯಾಣ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಸೇರಿದಂತೆ ಒಟ್ಟು ಆರು ಇಲಾಖೆಗಳಿಗೆ ಸಂಬಂಧಿಸಿ ಒಂದೇ ವೆಬ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇದೇ ತಿಂಗಳ 30ರವರೆಗೆ ಕಾಲಾವಕಾಶ ನೀಡಲಾಗಿದೆ.

ವಿವಿಧ ಭಾಗಗಳಿಂದ ಏಕಕಾಲಕ್ಕೆ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿರುವ ಕಾರಣ ಸರ್ವರ್‌ ಸಮಸ್ಯೆ ಇದೆ. ಅದಕ್ಕೆ ತಕ್ಕಂತೆ ವೆಬ್‌ ಸಾಮರ್ಥ್ಯ ಹೆಚ್ಚಿಸಿಲ್ಲ. ಕೆಲವೊಮ್ಮೆ 2–3 ದಿನ ಕಾಲ ವೆಬ್ ತೆರೆದುಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ADVERTISEMENT

ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ಬಳಸಿ ನೋಂದಣಿ ಮಾಡಿಕೊಂಡು ನಂತರದಲ್ಲಿ ವೆಬ್‌ ಐ.ಡಿ. ಪಡೆದು ಅರ್ಜಿ ಸಲ್ಲಿಸಬೇಕಿದೆ. ಈ ಸಂದರ್ಭ ಕಾಲೇಜಿನ ವಿಳಾಸ, ಅಗತ್ಯ ದಾಖಲೆನಮೂದಿಸಬೇಕಿದೆ. ವೆಬ್‌ನಲ್ಲಿ ಕಾಲೇಜಿನ ಹೆಸರು ಸಿಗುತ್ತಿದೆಯಾದರೂ ಕಲಾ, ವಾಣಿಜ್ಯ ಇಲ್ಲವೇ ವಿಜ್ಞಾನ ವಿಭಾಗದ ಆಯ್ಕೆ ಇನ್ನೂ ತೆರೆದುಕೊಳ್ಳುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.