ADVERTISEMENT

ಶಿಕ್ಷಕರ ಸೇವೆಗಿಂತ ಮಿಗಿಲಾದುದು ಮತ್ತೊಂದಿಲ್ಲ: ಜಿ.ಟಿ.ದೇವೇಗೌಡ ಹೇಳಿಕೆ

ಶಿಲಾನ್ಯಾಸ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 15:41 IST
Last Updated 21 ಜೂನ್ 2019, 15:41 IST
ಮೈಸೂರಿನ ರಾಜೀವ್‌ ನಗರದ ಸೂರ್ಯನಾರಾಯಣ ದೇಗುಲದ ಸನಿಹ ಛಾಯಾದೇವಿ ವಿದ್ಯಾನಿಕೇತನ ಟ್ರಸ್ಟ್‌ ನೂತನವಾಗಿ ನಿರ್ಮಿಸಲುದ್ದೇಶಿಸಿರುವ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿದರು
ಮೈಸೂರಿನ ರಾಜೀವ್‌ ನಗರದ ಸೂರ್ಯನಾರಾಯಣ ದೇಗುಲದ ಸನಿಹ ಛಾಯಾದೇವಿ ವಿದ್ಯಾನಿಕೇತನ ಟ್ರಸ್ಟ್‌ ನೂತನವಾಗಿ ನಿರ್ಮಿಸಲುದ್ದೇಶಿಸಿರುವ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿದರು   

ಮೈಸೂರು: ‘ಶಿಕ್ಷಕರ ಸೇವೆಗಿಂತ ಮಿಗಿಲಾದುದು ಮತ್ತೊಂದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಇಲ್ಲಿನ ರಾಜೀವ್‌ ನಗರದ ಸೂರ್ಯನಾರಾಯಣ ದೇಗುಲದ ಸನಿಹ ಛಾಯಾದೇವಿ ವಿದ್ಯಾನಿಕೇತನ ಟ್ರಸ್ಟ್‌ ನಿರ್ಮಿಸಲಿರುವ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದ ಸಚಿವರು, ‘ಶಿಕ್ಷಕರು ಪ್ರಸ್ತುತ ಆತ್ಮಾವಲೋಕನ ಮಾಡಿಕೊಂಡು ತಮ್ಮ ವೃತ್ತಿಯಲ್ಲಿ ಸೇವೆ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಲಂಚವಿಲ್ಲದ ಕ್ಷೇತ್ರ ಎಂದರೇ ಶಿಕ್ಷಕರ ಕ್ಷೇತ್ರ ಮಾತ್ರ. ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭ ಗರ್ಭಿಣಿ ಶಿಕ್ಷಕಿಯ ವರ್ಗಾವಣೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರೊಬ್ಬರು ನನ್ನ ಬಳಿ ಬಂದಿದ್ದರು. ಮೂರು ದಿನವಾದರೂ ವರ್ಗಾವಣೆ ಮಾಡದಿದ್ದುದಕ್ಕೆ ಕವರ್‌ನಲ್ಲಿ ₹ 10,000 ಕೊಟ್ಟು ಹೋಗಿದ್ದರು. ಕಚೇರಿಗೆ ಬಂದು ಕವರ್‌ನಲ್ಲಿ ಹಣ ನೋಡಿದ ನಾನು ದಿಗಿಲುಗೊಂಡು, ಅವರನ್ನು ಜಿಲ್ಲಾ ಪಂಚಾಯಿತಿಗೆ ಕರೆಸಿಕೊಂಡು ಕಾಸು ವಾಪಸ್‌ಕೊಟ್ಟು ವರ್ಗಾವಣೆ ಮಾಡಿಕೊಟ್ಟಿದ್ದೆ’ ಎಂದು ಹಳೆಯ ಘಟನೆಯೊಂದನ್ನು ಸಮಾರಂಭದಲ್ಲಿ ನೆನಪಿಸಿಕೊಂಡರು.

ADVERTISEMENT

‘ಉತ್ತಮ ಸಮಾಜ, ವ್ಯಕ್ತಿ ರೂಪಿಸುವ ಜವಾಬ್ದಾರಿ ಗುರು ಸ್ಥಾನದಲ್ಲಿರುವ ಶಿಕ್ಷಕರದ್ದಾಗಿದೆ. ಪ್ರತಿಯೊಬ್ಬರಿಗೂ ಪ್ರಾಥಮಿಕ ಶಿಕ್ಷಣ ನೀಡುವ ಶಿಕ್ಷಕರೇ ಗುರುಗಳು’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಡಾ.ಶ್ರೀಕಂಠಸ್ವಾಮಿ ಎಸ್, ಭಗವಾನ್ ಬುದ್ಧ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ನ ಅಧ್ಯಕ್ಷ ವೈ.ಎಸ್.ಸಿದ್ದರಾಜು, ಛಾಯಾದೇವಿ ವಿದ್ಯಾನಿಕೇತನ ಟ್ರಸ್ಟ್‌ ಕಾರ್ಯದರ್ಶಿ ಡಾ.ಭಾನು ಪ್ರಕಾಶ್, ಮಂಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.