ಚಿಕ್ಕನಾಯಕನಹಳ್ಳಿ: ಮಳೆ ನೀರು ಸಂಗ್ರಹದ ಮೂಲಕ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪರೂಪದ ವಿದ್ಯಮಾನಕ್ಕೆ ತಾಲ್ಲೂಕಿನ ಕಂದಿಕೆರೆ ಹೋಬಳಿ ಜಾಣೆಹಾರ್ ಗ್ರಾಮ ಗುರುವಾರ ಸಾಕ್ಷಿಯಾಯಿತು.
ವಿಶಿಷ್ಟ ರೀತಿಯಲ್ಲಿ ನಡೆದ ಪ್ರಗತಿಪರ ರೈತರಾದ ಜಯಲಕ್ಷ್ಮಮ್ಮ ಮತ್ತು ನಾಗರಾಜು ಅವರ ಪುತ್ರ ರಾಮಚಂದ್ರ ಮತ್ತು ಪುಷ್ಪಾ ಅವರ ವಿವಾಹ ಮಹೋತ್ಸವ ಎಲ್ಲ ಮೆಚ್ಚುಗೆಗೆ ಪಾತ್ರವಾಯಿತು.
ಅಂತರ್ಜಲ ತಜ್ಞ ಎನ್.ಜೆ ದೇವರಾಜರೆಡ್ಡಿ ಮಾತನಾಡಿ, ಮಳೆ ನೀರು ಪೋಲು ಮಾಡಿದರೆ, ಮುಂದೊಂದು ದಿನ ನಾಡು ಜಲಕ್ಷಾಮದಿಂದ ತತ್ತರಿಸುವಂತಾಗುತ್ತದೆ. ಜಲ ಮರುಪೂರಣ ಕಾರ್ಯಕ್ರಮವನ್ನು ಸರ್ಕಾರ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕು ಎಂದರು.
ಚಿತ್ರದುರ್ಗ ಜಿಲ್ಲೆಗೆ ಹೋಲಿಸಿದರೆ ತುಮಕೂರು ಜಿಲ್ಲೆಯ ಅಂತರ್ಜಲಮಟ್ಟ ಕುಸಿದಿಲ್ಲ. ಕೃಷಿಯಲ್ಲಿ ನೀರು ಪೋಲಾಗದಂತೆ ಎಚ್ಚರವಹಿಸಬೇಕು. ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ಸಿಗಬೇಕು ಎಂದರು.
ವಿಜ್ಞಾನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ತಾಲ್ಲೂಕಿನ ಮದಲಿಂಗನ ಕಣಿವೆ ಭಾಗವು ಮಲೆನಾಡಿನ ಪಡಿಯಚ್ಚಿನಂತಿದೆ. ಈ ಭಾಗದಲ್ಲಿ ಅರಣ್ಯಗಳನ್ನು ರಕ್ಷಿಸುವುದು ನಾಗರಿಕರ ಕರ್ತವ್ಯ ಎಂದು ನುಡಿದರು.
ಕಾತ್ರಿಕೆಹಾಳ್ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಇಂದಿರಮ್ಮ ಮಾತನಾಡಿ, ಬೇಸಿಗೆಯಲ್ಲಿ ಅರಣ್ಯಕ್ಕೆ ಬೆಂಕಿಯನ್ನು ಹಾಕುವ ಪ್ರವೃತ್ತಿ ಇದೆ. ಇದನ್ನು ಕೈಬಿಡಬೇಕು ಎಂದರು.
ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ, ಸಮಾಜಸೇವಕ ಚಂದ್ರಪ್ಪ, ಶಿಕ್ಷಕ ಜಯಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜು, ಕಾತ್ರಿಕೆಹಾಳ್, ಕೆಂಪರಾಯನಹಟ್ಟಿ, ದೊಡ್ಡರಾಂಪುರ, ಅಜ್ಜಿಗುಡ್ಡೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವಧು– ವರರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.