ADVERTISEMENT

ಅಭಿವೃದ್ಧಿ ಕೆಲಸಗಳಾಗಿದ್ದರೂ ಸಿಗದ ಜಯ

​ಪ್ರಜಾವಾಣಿ ವಾರ್ತೆ
Published 17 ಮೇ 2018, 6:34 IST
Last Updated 17 ಮೇ 2018, 6:34 IST
ಅಭಿವೃದ್ಧಿ ಕೆಲಸಗಳಾಗಿದ್ದರೂ ಸಿಗದ ಜಯ
ಅಭಿವೃದ್ಧಿ ಕೆಲಸಗಳಾಗಿದ್ದರೂ ಸಿಗದ ಜಯ   

ತುಮಕೂರು:  ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿ, ಬಿಜೆಪಿ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಖಚಿತ ಎಂಬ ನಿರೀಕ್ಷೆಯಲ್ಲಿದ್ದ ಶಾಸಕ ಬಿ.ಸುರೇಶ್‌ಗೌಡ ಪರಾಭವಗೊಂಡಿದ್ದಾರೆ.

ಕ್ಷೇತ್ರದ ಮತದಾರರು ಈ ಬಾರಿ ತಮ್ಮ ಕೈ ಬಿಡುವುದಿಲ್ಲ. ಹಿಂದಿನ ಎರಡು ಅವಧಿಗಿಂತ ಹೆಚ್ಚಿನ ಮತಗಳನ್ನು ನೀಡಲಿದ್ದಾರೆ ಎಂಬ ಚುನಾವಣಾ ಪೂರ್ವ ನಂಬಿಕೆ ಹುಸಿಯಾಗಿದೆ.

ಎರಡು ಅವಧಿಯ ಉದ್ದಕ್ಕೂ ಕ್ಷೇತ್ರದಲ್ಲಿ ಸುರೇಶ್‌ ಗೌಡ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಮಸ್ಕಲ್, ನಾಗವಲ್ಲಿ, ಹಿರೇಹಳ್ಳಿ, ಹೊನಸಿಗೆರೆ, ಗೂಳೂರು, ಬೆಳ್ಳಾವಿ, ಹೆತ್ತೇನಹಳ್ಳಿ, ಬುಗುಡನಹಳ್ಳಿ ಹೀಗೆ ಕ್ಷೇತ್ರದ ಹಲವು ಗ್ರಾಮಗಳಲ್ಲಿ 15ಕ್ಕೂ ಹೆಚ್ಚು ಹಳೆಯ ಸರ್ಕಾರಿ ಶಾಲೆ, ಕಾಲೇಜುಗಳನ್ನು ಮರು ನಿರ್ಮಾಣ ಮಾಡಿ ಹೈಟೆಕ್ ಸ್ಪರ್ಶ ನೀಡಿದ್ದರು.

ADVERTISEMENT

ಈ ಶಾಲೆ, ಕಾಲೇಜುಗಳ ಕಟ್ಟಡ, ಇಲ್ಲಿ ಮಕ್ಕಳಿಗೆ ಕಲ್ಪಿಸಿರುವ ಅನುಕೂಲಗಳು, ಸೌಕರ್ಯಗಳನ್ನು ಕಂಡು ಬೇರೆ ಗ್ರಾಮದವರು ತಮ್ಮ ಗ್ರಾಮದಲ್ಲೂ ಅಂತಹ ಶಾಲೆಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದ್ದೂ ಉಂಟು. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಈ ಶಾಲೆಗಳು ತಲೆ ಎತ್ತಿ ನಿಂತಿವೆ.

ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ 25 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು ಒದಗಿಸಿದ್ದು, ತುಮಕೂರಿಂದ ಹೆಬ್ಬೂರು ಮಾರ್ಗವಾಗಿ ಕುಣಿಗಲ್ ತಲುಪುವ ಹೆದ್ದಾರಿ ನಿರ್ಮಾಣ, ಚೆಕ್ ಡ್ಯಾಮ್ ಗಳ ನಿರ್ಮಾಣ, ವಸತಿ ಶಾಲೆ ನಿರ್ಮಾಣ, ಬಸ್ ನಿಲ್ದಾಣ, ಸಮುದಾಯ ಭವನ– ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಜಿಲ್ಲೆಯ ಬೇರೆ ಕ್ಷೇತ್ರದ ಶಾಸಕರಿಗೆ ಈ ಕ್ಷೇತ್ರ ಮಾದರಿ ಕ್ಷೇತ್ರ ಎಂಬುವಂತೆ ಮಾಡಿದ್ದರು. ಹೀಗೆ, ಕೈಗೊಂಡ ಅಭಿವೃದ್ಧಿ ಪರ್ವಕ್ಕೆ ಈ ಬಾರಿ ಮತದಾರ ಪ್ರಭು ಒಲಿದಿಲ್ಲ.

ಸುರೇಶ್ ಗೌಡ ಕೈಗೊಂಡ ಅಭಿವೃದ್ಧಿ ಕೆಲಸಗಳು ರಾಜ್ಯಕ್ಕೆ ಮಾದರಿಯಾಗಿವೆ. ಬಿಜೆಪಿ ಸರ್ಕಾರದಲ್ಲಿ ಅವರಿಗೆ ಮಹತ್ವದ ಖಾತೆಯನ್ನೇ ನೀಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದ ಜನರಿಗೆ ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಆದರೆ, ಚುನಾವಣಾ ಫಲಿತಾಂಶವು ಸಚಿವರಾಗುವ ಅವಕಾಶ ಕಿತ್ತುಕೊಂಡಿದೆ.

ಸುರೇಶ್‌ ಗೌಡ ಅವರ ನೇರ ಮಾತುಗಳು ಕ್ಷೇತ್ರದ ಜನರಿಗೆ ಪಥ್ಯವಾಗಲಿಲ್ಲ. ವಿರೋಧಿಗಳು ಇದನ್ನೆ ಅಸ್ತ್ರವಾಗಿ ಬಳಸಿಕೊಂಡರು. ಅಲ್ಲದೇ, ಸರ್ಕಾರದ ಯೋಜನೆಯಡಿ ಆಗಬೇಕಾದ ಕೆಲಸ ಕಾರ್ಯಗಳನ್ನು ಕಾಲ ಮಿತಿಯಲ್ಲಿ ಹಟ ಹಿಡಿದು ಮಾಡಿಸುವಾಗ ಆಡಿದ್ದ ಎಚ್ಚರಿಕೆಯ ಮಾತುಗಳು ಚುನಾವಣೆ ಸಂದರ್ಭದಲ್ಲಿ ದರ್ಪದ ಮಾತುಗಳಾಗಿ ಬಿಂಬಿತಗೊಂಡಿದ್ದೂ ಸೋಲಿನ ಕಾರಣಗಳಲ್ಲೊಂದು ಎಂದು ಹೇಳಲಾಗುತ್ತಿದೆ.

ಅಲ್ಲದೇ, ಬೇರೆ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಬೇಕೆಂಬುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಕ್ಕೆ ಕ್ಷೇತ್ರದ ಕಡೆ ಗಮನ ಕಡಿಮೆ ಆಗಿ ಸೋಲಿಗೆ ಕಾರಣವಾಯಿತು ಎಂದು ಅವರ ಬೆಂಬಲಿಗರು ಹೇಳುವ ಮಾತು.

ಕಳೆದ ಒಂದೂವರೆ ವರ್ಷಗಳಿಂದಲೂ ಕ್ಷೇತ್ರದಲ್ಲಿ ಮನೆ ಮನೆಗೆ ಕುಮಾರಣ್ಣ ಘೋಷಣೆಯಡಿ ಜೆಡಿಎಸ್‌ನ ಡಿ.ಸಿ.ಗೌರಿಶಂಕರ್ ಕ್ಷೇತ್ರದ ಮನೆ ಮನೆಗೆ ತೆರಳಿ ಮತದಾರರಿಗೆ ಮಾಡಿದ ಮನವಿ, ಒಂದು ಬಾರಿ ಅವಕಾಶ ಕೊಟ್ಟು ನೋಡಿ ಎಂಬ ಕೋರಿಕೆಯ ಮಾತುಗಳು, ಹಿರಿಯ ರಾಜಕಾರಣಿ ಎಚ್.ನಿಂಗಪ್ಪ ಅವರು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರಿದ್ದು ಗೌರಿಶಂಕರ್ ಗೆಲುವಿಗೆ ಸಹಕಾರಿಯಾದವು.

ಅಲ್ಲದೇ, ಜಿಲ್ಲೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದ ಏಕೈಕ ಕ್ಷೇತ್ರ ಗ್ರಾಮಾಂತರ. ಅಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿಯೇ ಕಾಂಗ್ರೆಸ್‌, ಲಿಂಗಾಯಿತ ಸಮುದಾಯಕ್ಕೆ ಸೇರಿದ ರಾಯಸಂದ್ರ ರವಿಕುಮಾರ್‌ ಅವರನ್ನು ಕಣಕ್ಕಿಳಿಸಿತ್ತು ಎಂದು ವಿಶ್ಲೇಷಿಸಲಾಗಿದೆ.

ಮತ್ತೊಂದೆಡೆ ಈ ಬಾರಿ ಪುತ್ರನನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಸಿ.ಚನ್ನಿಗಪ್ಪ ಅವರು ಕ್ಷೇತ್ರದಲ್ಲಿ ಕುಳಿತು ಮತ ಬೇಟೆಯಾಡಿದ್ದು ಸುರೇಶ್‌ಗೌಡರಿಗೆ ದೊಡ್ಡ ಪೆಟ್ಟು ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.