ADVERTISEMENT

ಅವ್ಯವಹಾರ: ಸಭೆಯಲ್ಲಿ ಚಪ್ಪಲಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 29 ಮೇ 2014, 6:06 IST
Last Updated 29 ಮೇ 2014, 6:06 IST
ತಿಪಟೂರು ನಗರಸಭೆಯಲ್ಲಿ ಸಾಮಗ್ರಿ ಖರೀದಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪೌರಕಾರ್ಮಿಕರ ಪರಿಕರ ಪ್ರದರ್ಶಿಸಿ ನೈಜ ಬೆಲೆ ಬಹಿರಂಗಪಡಿಸಿದರು.
ತಿಪಟೂರು ನಗರಸಭೆಯಲ್ಲಿ ಸಾಮಗ್ರಿ ಖರೀದಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪೌರಕಾರ್ಮಿಕರ ಪರಿಕರ ಪ್ರದರ್ಶಿಸಿ ನೈಜ ಬೆಲೆ ಬಹಿರಂಗಪಡಿಸಿದರು.   

ತಿಪಟೂರು: ನಗರಸಭೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸಾಕ್ಷ್ಯ ಮುಂದಿಡಲು ಸದಸ್ಯರು ಹೊಸ ಚಪ್ಪಲಿ, ಬೂಟ್, ಗ್ಲೌಸ್ ಪ್ರದರ್ಶಿಸಿದ ಘಟನೆ ಮಂಗಳವಾರ ನಡೆಯಿತು.

ನಗರಸಭೆ ಅಧ್ಯಕ್ಷೆ ಗೀತಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ, ಕೆಲ ತಿಂಗಳಿಂದ ನಗರಸಭೆಯಲ್ಲಿ ನಡೆದಿ­ರುವ ಅವ್ಯವಹಾರಗಳ ಕುರಿತು ಕಾವೇರಿದ ಚರ್ಚೆ ನಡೆಯಿತು.

ಪೌರ ಕಾರ್ಮಿಕರಿಗೆ ನೀಡುವ ಪರಿಕರಗಳ ಖರೀದಿ ಅವ್ಯವಹಾರ ಕುರಿತು ನಡೆದ ಚರ್ಚೆಯಲ್ಲಿ ಕೆಲ ಸದಸ್ಯರು ಚಪ್ಪಲಿ, ಬೂಟ್ ಪ್ರದರ್ಶಿಸಿ ಅವುಗಳ ನಿಜ ಬೆಲೆಯನ್ನು ಬಹಿರಂಗ ಪಡಿಸಿದರು.

ನಗರಸಭೆ ಆರೋಗ್ಯ ಇಲಾಖೆ ವಿಭಾಗದಿಂದ ಪೌರ ಕಾರ್ಮಿಕರಿಗೆ ಐಎಸ್ಐ ಮುದ್ರೆ ಇಲ್ಲದ ಪರಿಕರಿಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆ ಕೊಟೇ­ಷನ್ ಮೂಲಕ ಕೊಳ್ಳಲಾಗಿದೆ. ಎಂಆರ್‌ಪಿಗಿಂತ ಎರಡು ಪಟ್ಟು ಹಣ ಪಾವತಿಸಲಾಗಿದೆ ಎಂದು ಸದಸ್ಯ­ರಾದ ಲಿಂಗರಾಜು, ಗಣೇಶ್, ಪ್ರಕಾಶ್ ಆರೋಪಿಸಿದರು.

ಖರೀದಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸ­ಲಾಗಿದೆ. ಕಳೆದ ಮಾರ್ಚ್ 10ರಂದು ನಗರಸಭೆಯ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರವೂ ಅಧ್ಯಕ್ಷರ ಗಮನಕ್ಕೆ ತರದೆ ವಿವಿಧ ಬಾಬತ್ತುಗಳಿಗೆ ಹಣ ಪಾವತಿಸಲಾಗಿದೆ ಎಂದು ಆರೋಪಿಸಿದರು.

ಪರಿಸರ ಇಲಾಖೆಯ ಅಧಿಕಾರಿಗಳು ತಮ್ಮ­ದಲ್ಲದ ವಿದ್ಯುತ್ ಸಾಮಗ್ರಿ ಖರೀದಿ ಪ್ರಕ್ರಿಯೆಯಲ್ಲಿ ಮೂಗು ತೂರಿಸಿದ್ದಾರೆ ಎಂಬ ಬಹುತೇಕ ಸದಸ್ಯರು ಆಕ್ಷೇಪಿಸಿದರು. ನಿಯಮ ಉಲ್ಲಂಘಿಸಿರುವ ಎಲ್ಲ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿರ್ಣಯ ಕೈಗೊಂಡರು. ಕೆಲ ಅವ್ಯವಹಾರ­ಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆ­ಯಿತು. ಈ ಕುರಿತು ತನಿಖೆ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.

ಸುದೀರ್ಘ: ಸಾಮಾನ್ಯ ಸಭೆ ಮೇ 12ರಂದು ಆರಂಭವಾಗಿ ನಾಲ್ಕು ದಿನ ನಡೆದರೂ ಪೂರ್ಣ­ಗೊಳ್ಳದೆ ಮೊತ್ತೊಂದು ದಿನಕ್ಕೆ ಮುಂದೂಡಲ್ಪಟ್ಟು ದಾಖಲೆ ಬರೆಯಿತು. 120 ವಿಷಯ, ಏಳು ತಿಂಗಳ ಜಮಾ ಖರ್ಚಿನ ಜತೆಗೆ 2014–-15ನೇ ಸಾಲಿನ ಆಯ-ವ್ಯಯ ಮಂಡನೆ ವಿಚಾರಗಳು ಸಭೆಯಲ್ಲಿ ನಿಗದಿಯಾಗಿದ್ದವು.

ಮೂರು ದಿನಗಳ ಸಭೆಯಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ, ಅವ್ಯವಹಾರ, ನಿರ್ಲಕ್ಷ ಧೋರಣೆ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳವಾರ ನಡೆದ ನಾಲ್ಕನೇ ದಿನದ ಸಭೆಯಲ್ಲಿ ಜಮಾ ಖರ್ಚಿನ ವಿಚಾರ ಸುದೀರ್ಘ ಚರ್ಚೆಗೆ ಆಸ್ಪದ ನೀಡಿತು. ಆರೋಗ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದವು.

ಆಯ-ವ್ಯಯ ವಿಚಾರ ಚರ್ಚೆಗೆ ಸದಸ್ಯರು ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ ಅಧ್ಯಕ್ಷೆ ಗೀತಾ ಸಭೆಯನ್ನು ಮೊತ್ತೊಂದು ದಿನಕ್ಕೆ ಮುಂದೂ­ಡಿದರು. ಸದಸ್ಯರಾದ ಪ್ರಸನ್ನಕುಮಾರ್, ರೇಖಾ ಅನೂಪ್, ರೋಷನ್ಖಾನ್, ರಾಮಮೋಹನ್, ಹರಿ­ಬಾಬು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.