ADVERTISEMENT

ಅಸಮರ್ಪಕ ಚರಂಡಿ ವ್ಯವಸ್ಥೆ; ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 9:23 IST
Last Updated 21 ಅಕ್ಟೋಬರ್ 2017, 9:23 IST
ಬಂಗಾರಪೇಟೆ ಅಬ್ದುಲ್ ಆಲಿ ಬಡಾವಣೆ ಕಾಸಗಿ ನಿವೇಶನದಲ್ಲಿ ಮಳೆ ನೀರು ನಿಂದು ದುರ್ವಾಸನೆ ಬೀರುತ್ತಿದೆ
ಬಂಗಾರಪೇಟೆ ಅಬ್ದುಲ್ ಆಲಿ ಬಡಾವಣೆ ಕಾಸಗಿ ನಿವೇಶನದಲ್ಲಿ ಮಳೆ ನೀರು ನಿಂದು ದುರ್ವಾಸನೆ ಬೀರುತ್ತಿದೆ   

ಬಂಗಾರಪೇಟೆ: ಪಟ್ಟಣದ 16 ನೇ ವಾರ್ಡಿನ ಅಬ್ದುಲ್ ಅಲಿ ಬಡಾವಣೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನಿಂತು ಗಬ್ಬುನಾರುತ್ತಿದೆ. ಮಳೆ ನೀರು ಮನೆಗಳಿಗೆ ನುಗ್ಗಿರುವುದಲ್ಲದೆ ಖಾಲಿ ನಿವೇಶನಗಳಲ್ಲಿ ನಿಂತಿದೆ. ಸೊಳ್ಳೆ ಕಾಟ ಹೆಚ್ಚಿದ್ದು, ರೋಗ ಹರಡುವ ಭೀತಿ ಹಬ್ಬಿದೆ. ತಿಂಗಳಿಂದ ನೀರು ನಿಂತು ಪಾಚಿ ಕಟ್ಟಿದೆ. ದುರ್ವಾಸನೆ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ನಡೆಯುವ ಸ್ಥಿತಿ ಉಂಟಾಗಿದೆ.

ಮನೆಗಳು ನಿರ್ಮಿಸಿ ದಶಕಗಳೆ ಕಳೆದಿವೆ. ತೆರಿಗೆ, ಅಭಿವೃದ್ಧಿ ಶುಲ್ಕ, ಖಾತೆ ಬದಲಾವಣೆಗೆ ಸಾವಿರಾರು ಕಟ್ಟಿಸಿಕೊಳ್ಳುವ ಪುರಸಭೆ ಸಮರ್ಪಕ ರಸ್ತೆಗಳನ್ನು ನಿರ್ಮಿಸಿಲ್ಲ. ಬಹುತೇಕ ರಸ್ತೆಗಳು ಮಣ್ಣು ರಸ್ತೆಗಳಾಗಿಯೆ ಉಳಿದಿವೆ ಎನ್ನುವುದು ನಿವಾಸಿಗಳ ದೂರು.‌

ಮತ್ತೊಂದೆಡೆ ಕೆರೆ ಕಟ್ಟೆ ಅಂಚಿನಲ್ಲಿರುವ ಈ ಪ್ರದೇಶದಲ್ಲಿ ತೇವಾಂಶ ಹೆಚ್ಚಿದೆ. ಕೆರೆ ಸುಮಾರು ಮುಕ್ಕಾಲು ಭಾಗದಷ್ಟು ತುಂಬಿದ್ದು, ಕೆರೆಗಿಂತ ತಗ್ಗು ಪ್ರದೇಶದಲ್ಲಿರುವ ಬಡಾವಣೆಯ ಬಾವಿಗಳಲ್ಲಿ ನೀರು ಜಿನುಗುತ್ತಿದೆ.

ADVERTISEMENT

ಇಲ್ಲಿನ ಬಹುತೇಕ ಮಣ್ಣು ರಸ್ತೆಗಳು ಕೆಸರುಗದ್ದೆಗಳಂತಾಗಿವೆ. ಓಡಾಡಲು ಕಷ್ಟಸಾಧ್ಯ. ದ್ವಿಚಕ್ರ ವಾಹನ ಸವಾರರು ಕೆಸರಿನಲ್ಲಿ ಜಾರಿ ಬಿದ್ದಿರುವ ನಿದರ್ಶನಗಳೂ ಇವೆ. ಹಲ ಖಾಸಗಿ ನಿವೇಶನಗಳಲ್ಲಿ ಗಿಡ, ಮರಗಳು ಬೆಳೆದಿವೆ. ಇದರಿಂದ ಹಾವುಗಳು ಓಡಾಟ ಹೆಚ್ಚಿದೆ. ಕೂಡಲೆ ತೆರವುಗೊಳಿಸುವಂತೆ ನಿವೇಶನ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಈಚೆಗೆ ಸಿ.ರಹೀಂ ನಗರದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ನಂತರ ಎಚ್ಚೆತ್ತುಕೊಂಡಿರುವ ಪುರಸಭೆ ಬಡಾವಣೆಯಲ್ಲಿ ನಿಂತಿರುವ ನೀರು ಹರಿಸಲು ತಾತ್ಕಾಲಿಕ ಕಾಲುವೆಗಳನ್ನು ಮಾಡುತ್ತಿದೆ.

ಸಿಮೆಂಟ್ ರಸ್ತೆ, ಸಿಮೆಂಟ್ ಚರಂಡಿಗಳನ್ನು ನಿರ್ಮಿಸಿ ಬಡಾವಣೆಯಲ್ಲಿ ಬಿದ್ದ ಮಳೆ ನೀರು ಸಂಪೂರ್ಣವಾಗಿ ಕಾಲುವೆಗೆ ಹರಿಸಲು ಕ್ರಮ ಕೈಗೊಳ್ಳಬೇಕು. ಮತ್ತೊಮ್ಮೆ ಇಂಥ ಪರಿಸ್ಥಿತಿ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.