ಪಾವಗಡ: ಬರ ಪರಿಹಾರ ನಿರ್ವಹಣೆಯಲ್ಲಿ ಸರ್ಕಾರ ಎಡವಿದ್ದು, ಜನತೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ತಾಲ್ಲೂಕಿಗೆ ನಾಗಲಮಡಿಕೆಗೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ಅವರು, ಸರ್ಕಾರಕ್ಕೆ ಬರದ ತೀವ್ರತೆ ಅರ್ಥವಾಗಿರಲಿಲ್ಲ. ಕಾಂಗ್ರೆಸ್ ಬರ ಅಧ್ಯಯನಕ್ಕೆ ಹೋರಟ ನಂತರ ಬರಪರಿಹಾರ ಕಾಮಗಾರಿ ಚುರುಕುಗೊಂಡಿವೆ ಎಂದರು.
ಬಿಜೆಪಿ ಆಂತರಿಕ ಕಿತ್ತಾಟ, ಬದ್ಧತೆ ರಹಿತ ಅಧಿಕಾರದಿಂದ ರಾಜ್ಯದ ಸಾವಿರಾರು ಹಳ್ಳಿಗಳು ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ. ದನಕರುಗಳಿಗೆ ಮೇವು ಇಲ್ಲ. ಜನ ವಲಸೆ ಹೋಗುವ ಸ್ಥಿತಿ ತಂದಿಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕೋಟಿಗೂ ಹೆಚ್ಚು ರಾಸುಗಳಿದ್ದು, ಕೇವಲ 43 ಗೋಶಾಲೆ ತೆರೆಯಲಾಗಿದೆ. ಮೇವು ಬ್ಯಾಂಕ್ ಸ್ಥಾಪಿಸಿ ಮೇವನ್ನು ಉಚಿತವಾಗಿ ನೀಡಬೇಕು ಎಂದರು.
ಶಾಸಕರಾದ ವೆಂಕಟರಮಣಪ್ಪ, ವಿ.ಆರ್. ಸುದರ್ಶನ್, ಮಂಜುನಾಥ್, ಕೆಪಿಸಿಸಿ ಕಾರ್ಯದರ್ಶಿ. ಎ ಶ್ರಿನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಬಸವರಾಜರಾಯರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ . ರಾಜಣ್ಣ, ಸುದೇಶ್‌ಕುಮಾರ್, ಎಚ್. ವಿ.ವೆಂಕಟೇಶ್, ಜಂಪಯ್ಯ, ಜಿ.ಎಸ್ . ಧರ್ಮಪಾಲ್, ಚಿಕ್ಕನಾಗಪ್ಪ ಮುಂತಾದವರು ಭಾಗವಹಿಸಿದ್ದರು.
ಅಧಿಕಾರ ಬಿಡಲಿ: ಆಗ್ರಹ
ಮಧುಗಿರಿ: ಸರ್ಕಾರ ಆಡಳಿತ ನಡೆಸಲು ಅನುಭವ ಇಲ್ಲದಿದ್ದರೆ ಅಧಿಕಾರ ಬಿಟ್ಟುಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬರವನ್ನು ಎದುರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. 123 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ.
ರಾಜ್ಯ ಸರ್ಕಾರದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ರೂ. 169 ಕೋಟಿ ಬಿಡುಗಡೆ ಮಾಡಿದೆ. ಇದಲ್ಲದೆ ಕುಡಿಯುವ ನೀರಿಗಾಗಿ ರೂ. 127 ಕೋಟಿ ಬಿಡುಗಡೆ ಗೊಳಿಸಿದರೂ ರಾಜಕೀಯ ದುರುದ್ದೇಶದಿಂದ ಕೇಂದ್ರ ಸರ್ಕಾರವನ್ನು ದೂರುವುದು ಸರಿಯಲ್ಲ ಎಂದರು.
ಮಧುಗಿರಿ ತಾಲ್ಲೂಕಿಗೆ ಕೇವಲ ರೂ. 30 ಲಕ್ಷ ಮಾತ್ರ ಬಿಡುಗಡೆಗೊಳಿಸಿರುವು ದರಿಂದ ಬರ ಪರಿಸ್ಧಿತಿ ಎದುರಿಸಲು ಸಾಧ್ಯವಿಲ್ಲ. ಗೋಶಾಲೆ ವ್ಯವಸ್ಧೆಯನ್ನು ತಕ್ಷಣ ಕೈಗೊಳ್ಳಬೇಕಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.