ADVERTISEMENT

ಆದರ್ಶ ಶಾಲೆ ವಿದ್ಯಾರ್ಥಿಗಳಿಗೆ ಜೀವಭಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 8:52 IST
Last Updated 13 ಡಿಸೆಂಬರ್ 2013, 8:52 IST

ಪಾವಗಡ: ‘ಮೇಡಂ ಮೇಲ್ಛಾವಣಿ­ಯಿಂದ ಕಟ್ಟಡದ ಸಿಮೆಂಟ್ ತಲೆಯ ಮೇಲೆ ಬೀಳುತ್ತೆ. ಕುಡುಕರು ಕುಡಿದು ಹಾಕಿದ ಮದ್ಯದ ಬಾಟಲಿಗಳು, ಅಸಹ್ಯ ಹುಟ್ಟಿಸುವ ವಸ್ತುಗಳು ಶಾಲಾ ಕಟ್ಟಡದಲ್ಲಿ ಪ್ರತಿದಿನ ಕಾಣಿಸುತ್ತವೆ. ಬಾಲಕಿಯರಿಗೆ ಪ್ರತ್ಯೇಕ ಶೌಚಾ­ಲಯ­ವಿಲ್ಲ. ಆಟವಾಡಲು ಕ್ರೀಡಾ ಸಲಕರಣೆಗಳಿಲ್ಲ...’

– ಇದು ಪಟ್ಟಣದ ಆದರ್ಶ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಮುಕ್ತಾ ಅವರ ಎದುರು ತೋಡಿ­ಕೊಂಡ ಸಮಸ್ಯೆಗಳ ಸ್ಯಾಂಪಲ್‌.

‘ಆದರ್ಶ ಶಾಲೆಯಲ್ಲಿ ಮೂಲ ಸೌಕರ್ಯ ಇಲ್ಲ’ ಎಂದು ತುಮಕೂರಿನ ವಿಶ್ವ ಮಾನವ ಹಕ್ಕುಗಳ ಸೇವಾ ಕೆಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ ಈಚೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿ­ದ್ದರು. ಈ ಹಿನ್ನೆಲೆಯಲ್ಲಿ  ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಮುಕ್ತಾ ಮತ್ತು ಕೋಮಲಾ ಶಾಲೆಗೆ ಭೇಟಿ ನೀಡಿ  ಪರಿಶೀಲಿಸಿದರು.

ಕುಡಿಯುವ ನೀರಿಗಾಗಿ ಮಕ್ಕಳಿಂದ ₨ 150 ಕಟ್ಟಿಸಿಕೊಳ್ಳಲಾಗಿದೆ. ಕಟ್ಟಡ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಶೌಚಾ­ಲಯಕ್ಕೆ ಹೆಜ್ಜೆ ಇಟ್ಟರೆ ವಾಕರಿಕೆ ಬರು­ವಂತಿದೆ ಎಂದು ವಿದ್ಯಾರ್ಥಿನಿ­ಯರು ದೂರಿದರು.

‘ನೀವು ಶೌಚಾಲಯಕ್ಕೆ ಹೋಗ­ಬೇಕಾದಾಗ ಎಲ್ಲಿ ಹೋಗುತ್ತೀರಿ?’ ಎಂಬ ಆಯೋಗದ ಸದಸ್ಯರ ಪ್ರಶ್ನೆಗೆ, ‘ಶಾಲಾ ಆವರಣದ ಹೊರಗೆ ಹೋಗುತ್ತೇವೆ. ಇಲ್ಲದಿದ್ದರೆ ಮನೆಗೆ ಹೋಗುವ ತನಕ ತಡೆದುಕೊಳ್ಳುತ್ತೇವೆ’ ಎಂದು ಉತ್ತರಿಸಿದರು.

ಶಾಲೆಯಲ್ಲಿ ಡಿ ದರ್ಜೆ ನೌಕರರು ಇಲ್ಲ. ಹೀಗಾಗಿ ಕಸ ಗುಡಿಸದ ನೆಲ­ದಲ್ಲಿಯೇ ಮಕ್ಕಳು ಕುಳಿತು ಪಾಠ ಕೇಳಬೇಕಾಗಿದೆ. ಮುಖ್ಯ ಶಿಕ್ಷಕರು ಗೌಡೇಟಿ ಮತ್ತು ಆದರ್ಶ ಶಾಲೆ ಎರಡೂ ಕಡೆ ಕಾರ್ಯ ನಿರ್ವ­ಹಿಸು­ತ್ತಿ­ದ್ದಾರೆ. ಇದರಿಂದ ಮಕ್ಕಳಿಗೆ ಎಲ್ಲ ಸಮಯದಲ್ಲೂ ಮುಖ್ಯ ಶಿಕ್ಷಕರು ಸಿಗುವುದಿಲ್ಲ.

ಇಷ್ಟೆಲ್ಲ ಸಮಸ್ಯೆಗಳಿದ್ದರೂ ಶಾಲೆಯ ಮುಖ್ಯ ಶಿಕ್ಷಕರು ಆಯೋಗಕ್ಕೆ ಬರೆದ ಪತ್ರದಲ್ಲಿ ‘ಎಲ್ಲ ಸರಿಯಿದೆ’ ಎಂದು ಮಾಹಿತಿ ನೀಡಿದ್ದಕ್ಕೆ ಆಯೋಗದ ಸದಸ್ಯರು  ಬೇಸರ ವ್ಯಕ್ತಪಡಿಸಿದರು.

ಆಯೋಗದ ಸದಸ್ಯೆ ಮುಕ್ತಾ ಎಲ್ಲಾ ತರಗತಿಗಳ ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ­ದರು. ಮಕ್ಕಳ ಹಕ್ಕುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ತಂಡದಲ್ಲಿದ್ದರು.

ಗಿಟಾರ್‌ ತರಬೇತಿ
ತುಮಕೂರು: ಮ್ಯೂಸಿಕ್‌ ಜೋನ್‌ ವತಿ­ಯಿಂದ ಡಿ. 14ರಂದು ಮಧ್ಯಾಹ್ನ 1.30ಕ್ಕೆ ತುಮಕೂರು ವಿ.ವಿ ಎದುರಿನ 3ನೇ ಕ್ರಾಸ್‌ನ ಈಶ್ವರ್‌ ಬಿಲ್ಡಿಂಗ್‌ನಲ್ಲಿ ಡಿಸ್ಯಾಟ್‌ ಬ್ಯಾಂಡ್‌ನ ನಿತಿನ್ ಅಯ್ಯರ್‌, ವಿಟ್ಟರ್‌ ಅವರಿಂದ ಗಿಟಾರ್‌ ತರಬೇತಿ ಕಾರ್ಯಾಗಾರ ಆಯೋಜಿಸ­ಲಾಗಿದೆ. ವಿವರಗಳಿಗೆ ಮೊಬೈಲ್‌–9845987630 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.