ಶಿರಾ: ಉದ್ಯೋಗ ಖಾತ್ರಿ ಯೋಜನೆ ಹಣ ಬಿಡುಗಡೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮನೆಗೆ ಯೋಜನೆ ಫಲಾನುಭವಿಗಳು ಶುಕ್ರವಾರ ಮುತ್ತಿಗೆ ಹಾಕಿದ್ದರು.
ಈಚೆಗೆ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಧರಣಿ ನಡೆಸಿದ ವೇಳೆ ಎಲ್ಲ ಪಂಚಾಯಿತಿಗಳಿಗೂ ಶೀಘ್ರ ಹಣ ಬಿಡುಗಡೆ ಮಾಡುವುದಾಗಿ ಇಒ ಭರವಸೆ ನೀಡಿದ್ದರು. ಇದೀಗ ಕೇವಲ ಬೇವಿನಹಳ್ಳಿ, ಮೇಲ್ಕುಂಟೆ, ಹೆಂದೊರೆ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ತಾಲ್ಲೂಕಿನ ಉಳಿದ 30 ಗ್ರಾಮ ಪಂಚಾಯಿತಿಗಳಿಗೆ ಹಣ ಬಿಡುಗಡೆ ಮಾಡಬೇಕಿದೆ. ಕೆಲ ಪಂಚಾಯಿತಿಗಳ ವಿರುದ್ಧ ಇಒ ತಾರತಮ್ಯ ನೀತಿ ಅನುಸರಿಸುತಿದ್ದಾರೆ. ಮಾರ್ಚ್ ಮುಗಿಯುವುದರ ಒಳಗೆ ಹಣ ಬಿಡುಗಡೆಯಾಗದಿದ್ದರೆ, ನಮ್ಮ ಶ್ರಮಕ್ಕೆ ಪ್ರತಿಫಲವೇ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಮುಗಿದಿರುವ ಕಾಮಗಾರಿಗಳಿಗೆ ಶೀಘ್ರ ಎನ್ಎಂಆರ್ ಬರೆದು ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರೈತರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.
ಉದ್ಯೋಗ ಖಾತರಿ ಯೋಜನೆಯಡಿ ತಾಲ್ಲೂಕಿನ ಯಾವುದೇ ಕಾಮಗಾರಿಗೆ ಹಣ ಬಿಡುಗಡೆಗೆ ತಡೆಯೊಡ್ಡಿಲ್ಲ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ನೋಡಲ್ ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿದ ನಂತರ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ ತಾ.ಪಂ. ಇಒ ಮಾತ್ರ ಹಣ ಬಿಡುಗಡೆ ವೇಳೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ತಾ.ಪಂ. ಸದಸ್ಯ ತಿಮ್ಮಯ್ಯ ಆರೋಪಿಸಿದರು. ವಿವಿಧ ತಾ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.