ADVERTISEMENT

ಉನ್ನತ ಶಿಕ್ಷಣಕ್ಕೆ ಆದ್ಯತೆ: ತುಷಾರ್ ಗಿರಿನಾಥ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:55 IST
Last Updated 14 ಮಾರ್ಚ್ 2011, 8:55 IST

ತಿಪಟೂರು: ಗ್ರಾಮೀಣ ಪ್ರದೇಶಗಳಲ್ಲಿ ಉನ್ನತ ಶಿಕ್ಷಣ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, ಅದಕ್ಕೆ ಪೂರಕವಾಗಿ ಮೂಲಸೌಲಭ್ಯ ವಿಸ್ತರಿಸಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.ತಾಲ್ಲೂಕಿನ ನೊಣವಿನಕೆರೆಯಲ್ಲಿ ಸುಮಾರು 1.21 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಪದವಿ ಕಾಲೇಜು ಕಟ್ಟಡ ನಿರ್ಮಿಸಲು ಈಚೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳು ಲಭ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿ ಸಾಧಿಸಬೇಕು ಎಂದರು.

ಶಾಸಕ ಬಿ.ಸಿ.ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿನ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಬಿಕಾಂ ತರಗತಿ ಆರಂಭಿಸಲಾಗುವುದು ಎಂದರು.ತಾ.ಪಂ. ಅಧ್ಯಕ್ಷೆ ವಸಂತಾ, ಜಿ.ಪಂ. ಸದಸ್ಯೆ ರಾಧಾ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಎಚ್.ಕೆ.ಕುಮಾರ್‌ರಾಜ್ ಅರಸ್, ತಹಶೀಲ್ದಾರ್ ವಿಜಯಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಬಸವರಾಜು, ರೈಟ್ಸ್ ಸಂಸ್ಥೆಯ ರೇಖಾ ಮತ್ತಿತರರು ಇದ್ದರು. ಪ್ರಾಂಶುಪಾಲ ಟಿ.ವಿ. ನಾಗರಾಜು ಸ್ವಾಗತಿಸಿದರು. ಶಿವಕುಮಾರ್ ನಿರೂಪಿಸಿದರು. ಬಿ.ಆರ್. ರೇಣುಕಪ್ರಸಾದ್ ವಂದಿಸಿದರು.

ಕಾಲೇಜಿಗೆ ಕೊಠಡಿ
ತುರುವೇಕೆರೆ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ   ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಈಚೆಗೆ ಕಾಲೇಜಿಗೆ ಭೇಟಿ ನೀಡಿದ ಉನ್ನತ ಶಿಕ್ಷಣ ಇಲಾಖೆ ಆಯುಕ್ತ ತುಷಾರ್ ಗಿರಿನಾಥ್ ಕಾಲೇಜಿಗೆ ಕೊರತೆಯಿರುವ 18 ಕೊಠಡಿ ಪೈಕಿ ಐದನ್ನು ಶೀಘ್ರವೇ ನಿರ್ಮಿಸುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರ ಸಮಸ್ಯೆ ಆಲಿಸಿದರು. ಸ್ಥಳೀಯ ಸಂಪನ್ಮೂಲ, ದಾನಿಗಳಿಂದ ನೆರವು ಪಡೆದು ಕಾಲೇಜು ಅಭಿವೃದ್ಧಿಪಡಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. ಇಲಾಖೆ ಜಂಟಿ ನಿರ್ದೇಶಕ ಕುಮಾರ್‌ರಾಜ್ ಅರಸ್, ಪ್ರಾಂಶುಪಾಲ ಎಚ್.ಸಿ.ಜಯರಾಂ, ವಿದ್ಯಾರ್ಥಿ ಪ್ರತಿನಿಧಿಗಳಾದ ರಾಘವೇಂದ್ರ, ಬಸವರಾಜ್, ನಾಗೇಶ್, ಮನೋಹರ್ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಇಂದಿನಿಂದ ಚಿಕ್ಕಣ್ಣಸ್ವಾಮಿ ಜಾತ್ರೆ
ಹೆಬ್ಬೂರು: ಹೋಬಳಿಯ ಚಿಕ್ಕಣ್ಣದೇವರ ಹಟ್ಟಿಯ ಚಿಕ್ಕಣ್ಣಸ್ವಾಮಿ ದೇವರ ಜಾತ್ರಾ ಮಹೋತ್ಸವ ಮಾ. 14ರಿಂದ 16ರ ವರೆಗೆ ನಡೆಯಲಿದೆ.ಮಾ. 14ರಂದು ಬೆಳಿಗ್ಗೆ ಕಳಸ ಸ್ಥಾಪನೆ, ಜಾಂಡೇವು ಪೂಜೆ, ಆರತಿ ನಡೆಯಲಿದೆ. ಸಂಜೆ 101 ಕುಂಭ ಕಳಸಗಳಿಂದ ಅಲಂಕೃತವಾದ ಜಗನ್‌ಜ್ಯೋತಿ ದೀಪೋತ್ಸವ ನಡೆಯಲಿದೆ. ಮಾ. 15ರಂದು ಸಂಜೆ ಅಲಂಕೃತ ಉತ್ಸವಮೂರ್ತಿಯ ಪಟ್ಟದ ಬಸವಪ್ಪನ ಗುಡ್ಡೆಗೆ ಮೆರವಣಿಗೆಯಲ್ಲಿ ತೆರಳಿ ಗದ್ದುಗೆಯ ಮೇಲೆ ಕರಿಯ ಕಂಬಳಿಯ ಗದ್ದುಗೆ ಹಾಸಿ ಪೂಜಿಸಲಾಗುತ್ತದೆ. ರಾತ್ರಿ 9 ಗಂಟೆಯಿಂದ 12ರ ವರೆಗೆ ಭಕ್ತರ ಕಾಣಿಕೆಯ ಅಪ್ಪಣೆ ಕೇಳುವ ಪೂಜೆ ನಡೆಯುತ್ತದೆ ಎಂದು ಪಟ್ಟದ ಪೂಜಾರಿ ಪಾಪಣ್ಣ ತಿಳಿಸಿದ್ದಾರೆ.ಮಾ. 16ರರಂದು ಬೆಳಿಗ್ಗೆ ಮೂಲ ಸ್ಥಾನಕ್ಕೆ ದೇವರನ್ನು ತರಲಾಗುತ್ತದೆ. ಮಾ. 15ರಂದು ಸಂಜೆ ಜಗನ್‌ಜ್ಯೋತಿ ದೀಪೋತ್ಸವದಲ್ಲಿ ಸಹಸ್ರಾರು ಮಂದಿ ಭಕ್ತರು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.