ADVERTISEMENT

`ಎಲೆಕ್ಸನ್ ಯಾರಿಗ್ಬೇಕು; ತ್ವಾಟ ಉಳಿಸ್ಕಂಡ್ರೆ ಸಾಕು'

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 4:49 IST
Last Updated 2 ಏಪ್ರಿಲ್ 2013, 4:49 IST

ಗುಬ್ಬಿ: ಉತ್ತೋದ್ ಬಿತ್ತೋದ್ ನಮ್ ಕೆಲ್ಸ. ಬೆಳ್ಸೋದು ಗೆಲ್ಸೋದ್ ಮತದಾರರ ಕೆಲ್ಸ ಎಂದು ತೆರೆಮರೆಯಲ್ಲಿ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಇತ್ತ ರೈತರು ಎಲೆಕ್ಸನ್ ಯಾರಿಗ್ ಬೇಕು, ತ್ವಾಟ ಉಳಿಸ್ಕಂಡ್ರೆ ಸಾಕು ಎಂದು ಅಂಗಾತ ಮುಗಿಲು ನೋಡ್ತಿದ್ದಾರೆ. ಹೊಸ ಮತದಾರರು ಮತ ಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ, ನೀರಾವರಿ ವಂಚಿತ ಹಳ್ಳಿಗಳ ಜನ ಕುಡಿಯುವ ನೀರು, ವಿದ್ಯುತ್‌ಗಾಗಿ ಪ್ರತಿಭಟನೆ ದಾರಿ ಹಿಡಿದಿದ್ದಾರೆ.

ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಫ್ಲೆಕ್ಸ್, ಬ್ಯಾನರ್, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಷ್ಟೇ ಕಡಿವಾಣ ಹಾಕಿದರೂ ಅಭ್ಯರ್ಥಿಗಳ ಪರ ಫ್ಲೆಕ್ಸ್ ಮರವನ್ನೇರುತ್ತಿವೆ. ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ತುರುವೇಕೆರೆ ವಿಧಾನಸಭೆ ಕ್ಷೇತ್ರಕ್ಕೆ ಸೇರಲಿದ್ದು, ಮಾವಿನಹಳ್ಳಿಯಲ್ಲಿ ಕಡಿವಾಣ ಹಾಕಿದರೂ; ಇಡಗೂರಿನಲ್ಲಿ ಇಲ್ಲಿವರೆಗೂ ತೆರವುಗೊಳಿಸಿಲ್ಲ. ಎರಡು ದಿನದ ಹಿಂದೆ ಪಕ್ಷದ ಅಭ್ಯರ್ಥಿಯೊಬ್ಬರ ಬೆಂಬಲಿಗರು ಆಕ್ರೆಸ್ಟ್ರಾ ನಡೆಸುವ ಮೂಲಕ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೂ; ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಇನ್ನೂ ತಾಲ್ಲೂಕು ಕಚೇರಿ ಮುಂಭಾಗ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಫ್ಲೆಕ್ಸ್ ತೆರವು ಮಾಡಿದರೂ; ಪಶು ಆಸ್ಪತ್ರೆ ಮುಂಭಾಗ ಸರ್ಕಾರದ ಜಾಹೀರಾತು ಫಲಕ ರಾರಾಜಿಸುತ್ತಿದೆ. ಇನ್ನೊಂದೆಡೆ ರೈಲು ನಿಲ್ದಾಣ ರಸ್ತೆಯ ಪರಿಶಿಷ್ಟ ವಿದ್ಯಾರ್ಥಿ ನಿಲಯದ ಮುಂಭಾಗ ಪರಿಶಿಷ್ಟ ಜಾತಿಯವರಿಗೆ ಆರ್ಥಿಕ ನೆರವು ನೀಡಲು ಸ್ಥಾಪಿತವಾದ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಚಾರ ಫಲಕ ವಿಜೃಂಭಿಸುತ್ತಿದೆ.

ಪಟ್ಟಣದ ಡಾಬಾಗಳಲ್ಲಿ ಮದ್ಯಪಾನಕ್ಕೆ ಕಡಿವಾಣ ಹಾಕಿದರೂ; ಗ್ರಾಮಾಂತರ ಪ್ರದೇಶದ ಹಾಗಲವಾಡಿ, ಅಳಿಲಘಟ್ಟ ಪ್ರದೇಶದ ಪೆಟ್ಟಿಗೆ ಅಂಗಡಿಗಳಲ್ಲಿ ಎಂದಿಗಿಂತ ಅಕ್ರಮ ಮದ್ಯದ ವ್ಯಾಪಾರ ಹೆಚ್ಚಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಗಸ್ತು ಹೆಚ್ಚಿಸಿದ್ದರೂ; ಅಕ್ರಮ ಮದ್ಯದ ಒಳನುಸುಳುವುದು ನಿಂತಿಲ್ಲ ಎನ್ನುತ್ತಾರೆ ಗ್ರಾಮೀಣ ಜನತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.