ADVERTISEMENT

ಒಳ ಪಂಗಡ ಭೇದ ಬೇಡ-ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 7:55 IST
Last Updated 1 ಅಕ್ಟೋಬರ್ 2012, 7:55 IST

ಚಿಕ್ಕನಾಯಕನಹಳ್ಳಿ: ಒಕ್ಕಲಿಗ ಒಳ ಪಂಗಡಗಳೆಲ್ಲವೂ ಒಂದಾಗಿ ಪ್ರಾಬಲ್ಯ ಮೆರೆದಾಗ ಮಾತ್ರ ನಾವು ಎಲ್ಲ ಕ್ಷೇತ್ರದಲ್ಲೂ ಬೆಳೆವಣಿಗೆ ಕಾಣಲಿದ್ದೇವೆ ಎಂದು ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸಂಸ್ಥಾನ ಮಠಾಧೀಶರಾದ ನಂಜಾವಧೂತ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಸರ್ಪ ಒಕ್ಕಲಿಗರ ನಾಲ್ಕನೇ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಒಕ್ಕಲಿಗ ಜನಾಂಗದ ಒಳ ಪಂಗಡ ಸರ್ಪ ಒಕ್ಕಲಿಗರನ್ನು ಪ್ರವರ್ಗ-1ಕ್ಕೆ ಸೇರಿಸುವ ನಿಟ್ಟಿನಲ್ಲಿ ರಾಜಕಾರಣಿಗಳು ನೀಡುತ್ತಿರುವ ಆಶ್ವಾಸನೆಗಳೆಲ್ಲವೂ ರಾಜಕೀಯದ ಸ್ವಾರ್ಥವಾಗಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಟಿ.ಬಿ.ಜಯಂಚಂದ್ರ ಮಾತನಾಡಿ ಜನಾಂಗದ ಒಳ ಪಂಗಡಗಳಲ್ಲಿ ವೈವಾಹಿಕ ಸಂಬಂಧ ಬೆಳೆಸಲು ಹೆಚ್ಚು ಚಾಲನೆ ನೀಡಬೇಕು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಅವಕಾಶಗಳು ಎಲ್ಲ ವರ್ಗದ ಬಡವರಿಗೂ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಸಮಾಜವಾದದ ಕಲ್ಪನೆಗೆ ಅರ್ಥ ಬರಲಿದೆ. ಸಮುದಾಯದ ಅಭಿವೃದ್ಧಿಯಲ್ಲಿ ಸಣ್ಣ ಪುಟ್ಟ ಜನಾಂಗಗಳ  ನಿರ್ಲ್ಯಕ್ಷ ಇನ್ನೂ ಮುದುವರೆದಿದೆ ಎಂದು ವಿಷಾದಿಸಿದರು.

ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಎಸ್.ಆರ್.ಶ್ರೀನಿವಾಸ್, ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆನಂದರವಿ ಮಾತನಾಡಿದರು. ಮಾಯಸಂದ್ರದ ಆದಿ ಚುಂಚನಗರಿ ಶಾಖಾ ಮಠಾಧೀಶರಾದ ಶಿವಕುಮಾರನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಸರ್ಪ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಡಾ.ಎಸ್.ಜಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಅಧ್ಯಕ್ಷ ಆನಂದರವಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಂ.ಎಲ್.ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಸದಾಶಿವು ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಜನಾಂಗದ ಆರಾಧ್ಯದೈವ ಲಕ್ಷ್ಮೀ ಅಮ್ಮನವರ ಚಿತ್ರಪಟ ಹೊತ್ತ ಅಲಂಕೃತ ವಾಹನವನ್ನು ಪೂರ್ಣಕುಂಭ, ವಾದ್ಯಗೋಷ್ಠಿ ಹಾಗೂ ಜನಪದ ನೃತ್ಯಗಳೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.