ADVERTISEMENT

ಕಣ್ಮನ ಸೆಳೆಯುವ ಸಸ್ಯೋದ್ಯಾನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 10:37 IST
Last Updated 1 ಜುಲೈ 2017, 10:37 IST
ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ನೀಲನಕ್ಷೆ
ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ನೀಲನಕ್ಷೆ   

ಮಧುಗಿರಿ: ಪಟ್ಟಣದ ಹೊರವಲಯದ ಹರಿಹರಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ 34.54 ಹೆಕ್ಟೇರ್ ಪ್ರದೇಶದಲ್ಲಿ ₹ 70 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಸ್ಯೋದ್ಯಾನ ಉದ್ಘಾಟನೆಗೆ ಸಜ್ಜಾಗಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಉದ್ಯಾನವು ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮುವ ನಿರೀಕ್ಷೆ ಹುಟ್ಟಿಸಿದೆ.

ಉದ್ಯಾನದಲ್ಲಿ ಶುದ್ಧ ಗಾಳಿ, ಕಣ್ಮನ ಸೆಳೆಯುವ ಹಸಿರುಮಯ ವಾತಾವರಣ, ವಿಹರಿಸಲು ಅಲ್ಲಲ್ಲಿ ಹಾಸಿರುವ ಕಲ್ಲುಗಳು, ಹತ್ತಾರು ಜನ ಒಟ್ಟಿಗೆ ಕುಳಿತುಕೊಳ್ಳಲು ಮರ ಮತ್ತು ಬಿದಿರನ ತಂಗುದಾಣಗಳಿವೆ. ಚೋಳೇನಹಳ್ಳಿ ಕೆರೆ, ಬೆಳೆದು ನಿಂತಿರುವ ಗಿಡ ಮರ, ಬಳ್ಳಿಗಳು. ಬೆಟ್ಟ ಗುಡ್ಡಗಳು, ವಿಶ್ವ ಪ್ರಸಿದ್ಧ ಏಕಶಿಲಾ ಬೆಟ್ಟ,.. ಎಲ್ಲವೂ ಮನಸ್ಸನ್ನು ಹಗುರ ಮಾಡಿ, ಇಡೀ ದಿನ ಸಂಭ್ರಮಿಸುವಂತೆ ಮಾಡಲಿವೆ.

ತುಮಕೂರು ಬೈಪಾಸ್‌ ರಸ್ತೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಈ ಉದ್ಯಾನ ರೂಪುಗೊಂಡಿದೆ. ಪ್ರಾಣಿ ಮತ್ತು ಪಕ್ಷಿಗಳಿಗಾಗಿ ಜಲದ ಆಸರೆಯನ್ನು ಅರಣ್ಯ ಇಲಾಖೆ ಒದಗಿಸಿದೆ. ಗಿಡಗಳಿಗೆ ನೀರಿನ ಕೊರತೆ ಆಗದಂತೆ ಬೆಟ್ಟದ ಮೇಲೆ ಬೃಹತ್ ತೊಟ್ಟಿ ನಿರ್ಮಿಸಲಾಗಿದೆ. ಪ್ರಾಣಿ ಪಕ್ಷಿಗಳಿಗೆ ಹಣ್ಣು ಬಿಡುವ ಗಿಡಗಳನ್ನು ಬೆಳೆಸಿದೆ.

ADVERTISEMENT

ಈ ಪ್ರದೇಶದಲ್ಲಿ ಸುಮಾರು 1,200 ಗಿಡಗಳನ್ನು ನೆಡಲಾಗಿದೆ. ಆಲ, ಅರಳೆ, ಹತ್ತಿ, ಬಸರಿ, ಗೋಣಿ, ಬೇವು, ನೇರಳೆ, ಹೊಂಗೆ ಮತ್ತಿತರ ಗಿಡಗಳ ತಂಪಾದ ಗಾಳಿ ಸುತ್ತ ಹರಡಿಕೊಂಡಿದೆ.

ಮಕ್ಕಳಿಗೆ ಆಟೋಪಕರಣ: ವಿಹರಿಸಲು ಬರುವ ಮಕ್ಕಳಿಗೆ 11 ಬಗೆಯ ಆಟೋಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಸಸ್ಯೋದ್ಯಾನ ಪ್ರದೇಶದಲ್ಲಿ 1,760 ಮೀಟರ್ ಪಾದಚಾರಿ ಪಥ ನಿರ್ಮಿಸಲಾಗಿದೆ. ಈ ಪ್ರದೇಶವು ಕಲ್ಲು ಮತ್ತು ಮಣ್ಣಿನ ಗುಡ್ಡದಿಂದ ಕೂಡಿರುವುದರಿಂದ ಅಲ್ಲಲ್ಲಿ ಇಳಿಜಾರು ಇದೆ. ಅಲ್ಲಿ ಸಿಮೆಂಟ್‌ ಮೆಟ್ಟಿಲು ನಿರ್ಮಿಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಉದ್ಯಾನದ ನಾಲ್ಕೂ ಭಾಗಗಳಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸೌರವಿದ್ಯುತ್‌ ದೀಪ, ಔಷಧಿ ಸಸ್ಯಗಳ ದೊಡ್ಡ ಸಂಪತ್ತು ಇಲ್ಲಿದೆ. ಪ್ರತಿಯೊಂದು ಗಿಡದ ಔಷಧೀಯ ಮಹತ್ವವನ್ನೂ ವಿವರಿಸಲಾಗಿದೆ.

ಶಾಸಕ ಕೆ.ಎನ್.ರಾಜಣ್ಣ ಅವರ ಶ್ರಮದಿಂದ ಮಧುಗಿರಿ ತಾಲ್ಲೂಕಿನಲ್ಲಿ ಸಸ್ಯೋದ್ಯಾನ ನಿರ್ಮಿಸಲಾಗಿದೆ. ಈ ಸಸ್ಯೋದ್ಯಾನದಿಂದ ಜನರಿಗೆ ವಿಶ್ರಾಂತಿಗೆ, ಒತ್ತಡ ನಿವಾರಣೆಗೆ ಅವಕಾಶ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸಸ್ಯೋದ್ಯಾನದಲ್ಲಿ ಮತ್ತಷ್ಟು ಗಿಡಗಳನ್ನು ಬೆಳೆಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅರಣ್ಯಾಧಿಕಾರಿ ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ–ಅಂಶ
34.54ಹೆಕ್ಟೇರ್ಪ್ರ ದೇಶದಲ್ಲಿ ಸಸ್ಯೋದ್ಯಾನ

₹70ಲಕ್ಷ ಸಸ್ಯೋದ್ಯಾನ ನಿರ್ಮಾಣ ವೆಚ್ಚ

1,760ಮೀಟರ್ ಪಾದಚಾರಿ ಪಥ

* * 

ಸಸ್ಯೋದ್ಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಇದು ಮಾದರಿ ಪ್ರವಾಸಿ ತಾಣವಾಗಲಿದ್ದು, ಹಲವರಿಗೆ ಉದ್ಯೋಗಾವಕಾಶ ದೊರೆಯಲಿದೆ
ಕೆ.ಎನ್.ರಾಜಣ್ಣ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.