ADVERTISEMENT

ಕನಿಷ್ಠ ಕೂಲಿಗಾಗಿ ಗ್ರಾ.ಪಂ.ಗೆ ಬೀಗ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 6:25 IST
Last Updated 26 ಏಪ್ರಿಲ್ 2012, 6:25 IST

ಶಿರಾ: ಗ್ರಾಮ ಪಂಚಾಯಿತಿ ದಿನಗೂಲಿ ನೌಕರರು ಕನಿಷ್ಠ ವೇತನಕ್ಕೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.

ತಾಲ್ಲೂಕಿನ ಹುಲಿಕುಂಟೆ ಹೋಬಳಿ ದ್ವಾರನಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರು ಎರಡು ಸಾವಿರಕ್ಕೂ ಕಡಿಮೆ ಮಾಸಿಕ ವೇತನ ಪಡೆಯುತ್ತಿದ್ದು, ಇದು ಸರ್ಕಾರ ನಿಗದಿಪಡಿಸಿರುವ ಕೂಲಿಗಿಂತ ತೀರಾ ಕಡಿಮೆ ಇದೆ.
 
ಈ ಬಗ್ಗೆ ಗ್ರಾಮಸಭೆಗಳಲ್ಲಿ ಹಲವು ಬಾರಿ ಮನವಿ ಮಾಡಲಾಗಿದೆ. ಅಲ್ಲದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದ್ದರೂ ಕಿಂಚಿತ್ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಎಂಟು ಹಳ್ಳಿಗಳ 14 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ ಸುಮಾರು 3.75 ಲಕ್ಷ ಕಂದಾಯ ಹಾಗೂ ಸರ್ಕಾರದಿಂದ 80 ಸಾವಿರ ಅನುದಾನ ಬರುತ್ತದೆ. ಸರ್ಕಾರ ನಿರ್ಮಿಸಿರುವ ಸಂತೆ ಮೈದಾನವಿದ್ದರೂ ನೆಲವಳಿ ವಸೂಲಿ ಮಾಡಿಲ್ಲ. ಪಂಚಾಯಿತಿ ವ್ಯಾಪ್ತಿಯ 10 ಹುಣಸೆಮರ ಹರಾಜು ಹಾಕದೆ ಆಯಾ ಭಾಗದ ಜನಪ್ರತಿನಿಧಿಗಳೇ ಫಸಲನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರು ಆರೋಪಿಸಿದರು.

ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕೆ.ಶ್ರೀಧರ್ ಹಾಗೂ ಪಿಡಿಒ ವಿಜಯ್‌ಕುಮಾರ್ ಮುಂಬರುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ವೇತನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.