ADVERTISEMENT

ಕನ್ನಡ ಶಾಲೆಗಳಿಗೆ ಬೀಳುತ್ತಿದೆ ಬೀಗ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 5:45 IST
Last Updated 2 ಫೆಬ್ರುವರಿ 2011, 5:45 IST

4ಹೆಚ್ಚಿದ ಮಕ್ಕಳ ಕೊರತೆ 4ಪಾಲಕರಲ್ಲಿ 4ತಲೆ ಎತ್ತುತ್ತಿರುವ ಕಾನ್ವೆಂಟ್‌ಗಳು

ತುಮಕೂರು: ನಮ್ಮಲ್ಲಿ ಕಲಿತವರು ದೇಶ-ವಿದೇಶದ ಉನ್ನತ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿದ್ದಾರೆ. ಉದ್ಯೋಗ ಗಳಿಸಿದ್ದಾರೆ. ಸಮಾಜ ಸುಧಾರಿಸಿದ್ದಾರೆ. ಇತಿಹಾಸ ನಿರ್ಮಿಸಿದ್ದಾರೆ.ಆದರೂ ನಮ್ಮ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ.ಇದು ಒಂದು ಸರ್ಕಾರಿ ಶಾಲೆಯ ವೇದನೆಯಲ್ಲ. ಜಿಲ್ಲೆಯ ಬಹುತೇಕ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ನೋವಿನ ಕೂಗು.

ಸರ್ಕಾರ ವರ್ಷದಿಂದ ವರ್ಷಕ್ಕೆ ಪ್ರಾಥಮಿಕ ಶಿಕ್ಷಣದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಮಕ್ಕಳ ಪೋಷಕರಿಗೆ ಮಾತ್ರ ಸರ್ಕಾರಿ ಶಾಲೆಗಳ ಮೇಲೆ ಒಲವು ಹೆಚ್ಚಾಗುತ್ತಿಲ್ಲ. ಪ್ರತಿ ವರ್ಷವೂ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ತಗ್ಗುತ್ತಿದೆ ಎಂಬುದನ್ನು ಅಂಕಿ ಅಂಶಗಳೇ ಬಿಚ್ಚಿಡುತ್ತವೆ.

ತುಮಕೂರು ತಾಲ್ಲೂಕಿನಲ್ಲಿ ಒಟ್ಟು 204 ಕಿರಿಯ, 295 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಇವುಗಳ ಜತೆಗೆ ಒಂದು ಅನುದಾನ ರಹಿತ, 16 ಅನುದಾನಿತ ಪ್ರಾಥಮಿಕ ಶಾಲೆಗಳಿವೆ. ಆದರೆ ಈ ಶಾಲೆಗಳಿಗೀಗ ಮಕ್ಕಳ ಕೊರತೆ ಎದುರಾಗಿದೆ.

ಇದು ತುಮಕೂರು ತಾಲ್ಲೂಕು ಚಿತ್ರಣ ಮಾತ್ರವಲ್ಲ, ಎಲ್ಲೆಡೆ ಇದೇ ಪರಿಸ್ಥಿತಿ ಕಾಣುತ್ತಿದೆ. ಕಳೆದ ಕೆಲವು ವರ್ಷಗಳಿಂದಲೂ ಮಕ್ಕಳಿಲ್ಲದೆ ಬೀಗ ಬೀಳುತ್ತಿರುವ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ತುಮಕೂರು ತಾಲ್ಲೂಕಿನಲ್ಲಿ ಮಕ್ಕಳ ಕೊರತೆಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಗುಳೇರವೆ, ಟಿ.ಜಿ.ಪಾಳ್ಯ, ಮಾಯಗೊಂಡನಹಳ್ಳಿ ಸೇರಿ ಆರು ಪ್ರಾಥಮಿಕ ಶಾಲೆಗಳು ಕಣ್ಮುಚ್ಚಿವೆ. ವಿಪರ್ಯಾಸವೆಂದರೆ ಸರ್ಕಾರಿ ಶಾಲೆಗಳು ಮುಚ್ಚಿರುವ ಸ್ಥಳಗಳಲ್ಲಿ ಕಾನ್ವೆಂಟ್‌ಗಳು ತಲೆ ಎತ್ತಿವೆ.

ಗಣತಿ ಕಾರ್ಯದಲ್ಲಿ ಮಕ್ಕಳೇ ಸಿಗಲಿಲ್ಲ. ಇನ್ನು ಒಂದನೇ ತರಗತಿಗೆ ಯಾವೊಂದು ಮಗುವು ಪ್ರವೇಶ ಪಡೆಯದ ಕಾರಣ ಈ ಶಾಲೆಗಳನ್ನು ಮುಚ್ಚಬೇಕಾಯಿತು ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ನಂಜಯ್ಯ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಭಾವನೆ ಮೂಡಿರುವುದು, ಪೋಷಕರಲ್ಲಿ ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹ ಸರ್ಕಾರಿ ಶಾಲೆಗಳು ಮುಚ್ಚಲು ಪ್ರಮುಖ ಕಾರಣ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿ ನಾಲ್ವರು ಶಿಕ್ಷಕರಿದ್ದಾರೆ. 1ರಿಂದ 7 ತರಗತಿವರೆಗೆ 80 ವಿದ್ಯಾರ್ಥಿಗಳು ಮಾತ್ರ ಅಧ್ಯಯನ ಮಾಡುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದರು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಗೋಪಾಲಕೃಷ್ಣ.

‘ಕುಡಿಯುವ ನೀರಿಗಾಗಿ ಫಿಲ್ಟರ್ ವ್ಯವಸ್ಥೆ, ಶೌಚಾಲಯ ಇಲ್ಲಿದೆ. ಆದರೆ ನಾವು ಶೌಚಾಲಯ ಉಪಯೋಗಿಸುವುದಿಲ್ಲ’ ಎನ್ನುತ್ತಾಳೆ ಮೂರನೇ ತರಗತಿ ವಿದ್ಯಾರ್ಥಿನಿ. ಕಾರಣ ಶಿಕ್ಷಕರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವುದೇ ತಲೆ ನೋವು. ಶೌಚಾಲಯಕ್ಕೆ ಸದಾ ಬೀಗ ಕಾಯಂ. ತಾಲ್ಲೂಕಿನ ಬಹುತೇಕ ಶಾಲೆಗಳ ಪರಿಸ್ಥಿತಿ ಇದ್ದಕ್ಕಿಂತ ಭಿನ್ನವಾಗಿಲ್ಲ.

ಎಂ.ಜಿ.ರಸ್ತೆ ಆರ್ಯ ಬಾಲಿಕ ಶಾಲೆ ಸ್ಥಾಪನೆಯಾಗಿ 109 ವರ್ಷ ಕಳೆದಿದೆ. ದಶಕಗಳ ಹಿಂದೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೆ ಈಗ ಈ ಸಂಖ್ಯೆ 82ಕ್ಕೆ ಕುಸಿದಿದೆ. ಕೆಆರ್‌ಜಿಎಂ, ಹೊರಪೇಟೆ ಸರ್ಕಾರಿ ಶಾಲೆಗಳ ಹಾಜರಾತಿ ಸಹ ಎರಡಂಕಿಗೆ ಇಳಿದಿದೆ. ಆದರೆ ಸುತ್ತಮುತ್ತಲ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಲೆ ಸಾಗಿದೆ.

ಬೆಳಿಗ್ಗೆ ಪ್ರಾರ್ಥನೆಯಿಂದ ಹಿಡಿದು ಸಂಜೆಯ ತನಕ ಸರ್ಕಾರಿ ಶಾಲೆಯ ಚಟುವಟಿಕೆಗಳೆಲ್ಲವೂ ಅಚ್ಚುಕಟ್ಟು. ಮಕ್ಕಳಿಗೆ ಬಿಸಿ ಊಟವಿದೆ. ನೀರಿದೆ. ಆದರೆ ಗುಣಮಟ್ಟದ ಶಿಕ್ಷಣ ಬಗ್ಗೆ ಮಾತ್ರ ಪ್ರಶ್ನೆ ಮೂಡುತ್ತದೆ ಎಂಬ ಆತಂಕವನ್ನು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತೋಡಿಕೊಂಡರು.

‘ಪಾಲಕರು ಕಾನ್ವೆಂಟ್ ಶಾಲೆಗೆ ಸಾವಿರಾರು ರೂಪಾಯಿ ನೀಡುವುದರ ಜತೆ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ನಮ್ಮಲ್ಲಿ ಪಾಲಕರು ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ.ಇದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ ಎನ್ನುವುದು ನಗರದ ಸರ್ಕಾರಿ ಶಾಲಾ ಶಿಕ್ಷಕರ ಅನಿಸಿಕೆ. ಸರ್ಕಾರಿ ಶಾಲೆ ಬಗ್ಗೆ ನಿರಾಸಕ್ತಿ ಮೂಡಿರುವುದರಿಂದ ಬೀಗ ಹಾಕುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಶಿಕ್ಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.