ADVERTISEMENT

ಕಲ್ಲು ಗಣಿಗಾರಿಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 8:35 IST
Last Updated 18 ಆಗಸ್ಟ್ 2012, 8:35 IST

ಕುಣಿಗಲ್: ಕಲ್ಲು ಗಣಿಗಾರಿಕೆಗೆ ನೀಡಿರುವ ಪರವಾನಗಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಅಂದನಕುಪ್ಪೆ ಗ್ರಾಮಸ್ಥರು ತಾಲ್ಲೂಕಿನ ಸಂತೇಮಾವತ್ತೂರು ಗ್ರಾಮ ಪಂಚಾಯಿತಿ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಅಂದನಕುಪ್ಪೆ ಗ್ರಾಮದ ಸರ್ವೆ ನಂ.1ರಲ್ಲಿ ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಕಲ್ಲುಗಣಿಗಾರಿಕೆಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದರು. ಈ ಬಗ್ಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ರದ್ದುಪಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದರಿಂದ ಅಸಮಧಾನಗೊಂಡ ಗ್ರಾಮಸ್ಥರಾದ ಮಾರೇಗೌಡ, ಗೌಡಯ್ಯ, ರೇವಣ್ಣ, ವೆಂಕಟೇಶ್, ಕೆಂಚಮ್ಮ ಹಾಗೂ ಇತರರು ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗಣಿಗಾರಿಕೆಗೆ ಪರವಾನಗಿ ನೀಡಿರುವ ಪ್ರದೇಶದ ಪಕ್ಕದಲ್ಲಿ ಸಾಮಾಜಿಕ ಅರಣ್ಯ ವಲಯ, ಸುತ್ತಮುತ್ತಲ ಗ್ರಾಮಗಳಿಗೆ ನೀರನ್ನು ಒದಗಿಸುವ ಕೆರೆ ಇದೆ.

ಗಣಿಗಾರಿಕೆಗಾಗಿ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಪರಿಸರದ ಮೇಲೆ ಹಾನಿ ಉಂಟಾಗುತ್ತಿರುವುದರ ಜೊತೆಗೆ, ಸುತ್ತಮುತ್ತಲಿನ ಮನೆಗಳಲ್ಲಿ ಬಿರುಕು ಉಂಟಾಗಿದೆ. ಪ್ರತಿದಿನ ಪ್ರಾಣ ಭೀತಿಯಿಂದ ಬದುಕುವಂತಾಗಿದೆ ಎಂದು ದೂರಿದರು.ಕೂಡಲೇ ಗಣಿಕಾರಿಕೆ ನಿಲ್ಲಿಸಬೇಕೆಂದು ಒತ್ತಾಯಿಸಿ ಪಿಡಿಓ ಕಾಂತರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.