ADVERTISEMENT

ಕಿರಿದಾಗುತ್ತಿರುವ ದೋಬಿಘಾಟ್‌...

ಸುಮಿತ್ರಾ
Published 2 ನವೆಂಬರ್ 2015, 10:32 IST
Last Updated 2 ನವೆಂಬರ್ 2015, 10:32 IST

ತುಮಕೂರು: ಅಂಗಿ 15, ಪ್ಯಾಂಟ್‌ 15, ಐದು ಸೀರೆ ಸೇರಿ ಒಟ್ಟು 35. ಗಂಟು ಸರಿಯಾಗಿ ಕಟ್ಟಿ ತಗೊಂಡ್ಹೋಗು. ಹೋದ್ಸಲಿ ಮಾಡ್ದಂಗ ಮಾಡ್ಬೇಡ.
– ಹೀಗೆ ಮನೆಗೆ ಬಂದು ಬಟ್ಟೆ ತೆಗೆದುಕೊಂಡು ಹೋಗುತ್ತಿದ್ದ ಮಡಿವಾಳರಿಗೆ ಹೇಳುವ ಮಾತು ನಿಂತು ಹೋಗಿದೆ. ಈ ಮಾತುಗಳಂತೆಯೇ ನಗರದ ದೋಬಿಘಾಟ್‌ ಕೂಡ ನಿಧಾನವಾಗಿ ಮಾಯವಾಗುತ್ತಿದೆ. ಈ ಹಿಂದೆ ಇದ್ದಂಥ ಸ್ವರೂಪ ಈಗಿಲ್ಲ. ಎಲ್ಲೆಂದರಲ್ಲಿ ಬಟ್ಟೆಗಳನ್ನು ಒಗೆದು ಒಣ ಹಾಕುತ್ತಿದ್ದೆವು.

ನಗರ ಬೆಳೆದಂತೆ ಸುತ್ತಮುತ್ತ ಮನೆಗಳು ನಿರ್ಮಾಣಗೊಂಡವು. ಜಾಗ ಕಿರಿದಾಗುತ್ತಾ ಬಂತು. ಈಗ 22 ಗುಂಟೆ ಮಾತ್ರ ಉಳಿದಿದೆ. ಅದರಲ್ಲೂ ಅರ್ಧ ಗುಂಟೆಯಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಉಳಿದಿರುವ ಜಾಗದಲ್ಲಿ ನೀರಿನ ತೊಟ್ಟಿ ಹಾಗೂ ಪಂಪ್‌ಹೌಸ್‌ ನಿರ್ಮಿಸಲಾಗಿದೆ. ಒಗೆದ ಬಟ್ಟೆಗಳನ್ನು ಕೆಲವರು ಇಲ್ಲಿಯೇ ಇಸ್ತ್ರಿ ಮಾಡಿಕೊಂಡು ಹೋಗುತ್ತಾರೆ. ಕೆಲವರು ಮನೆಗೆ ಹೊತ್ತೊಯ್ಯುತ್ತಾರೆ. ದೋಬಿಘಾಟ್‌ ನಂಬಿಕೊಂಡು 25 ಕುಟುಂಬ ಬದುಕುತ್ತಿವೆ. ಆದರೆ ಜೀವನಾಧಾರವಾದ ದೋಬಿಘಾಟ್‌ ಕ್ರಮೇಣ ಕಿರಿದಾಗುತ್ತಿದೆ. ಹೀಗೆ ಆದರೆ, ಮುಂದೊಂದು ದಿನ ದೋಬಿಘಾಟ್‌ ಕುರುಹು ಇರುವುದಿಲ್ಲ ಎಂಬುದು ದೋಬಿಗಳ ಆತಂಕ.

‘ಅಜ್ಜ–ಅಪ್ಪ ಎಲ್ರೂ ಇದೇ ಕೆಲಸ ಮಾಡ್ತಿದ್ರು, 35 ವರ್ಷಗಳಿಂದ ನಾನು ಇದೇ ಕೆಲಸ ಮಾಡುತ್ತಿದ್ದೇನೆ. ಕುಲಕಸುಬು ಬಿಡೋಕಾಗಲ್ಲ. ನನ್ನ ಮಕ್ಕಳು ಈ ಕೆಲಸ ಮುಂದುವರಿಸಬಾರದು. ಚೆನ್ನಾಗಿ ಓದಿ ಒಂದು ಕೆಲಸ ಹಿಡೀಲಿ ಅನ್ನೋ ಆಸೆ ಇದೆ. ನಮ್ಮ ಕೆಲಸ ಮೊದ್ಲು ಇದ್ಹಂಗ್‌ ಇಲ್ಲ. ಹೆಚ್ಚು ಬಟ್ಟೆಗಳು ಬರುವುದಿಲ್ಲ’ ಎಂದು ಕಾಳಯ್ಯ ಹೇಳುತ್ತಾರೆ. 

ಮನೆಗಳು ಸಹ ಇಲ್ಲ. ಮನೆ ಬಾಡಿಗೆ, ಆಟೊ ಸೇರಿ ಇತರೆ ಖರ್ಚುಗಳು ತೆಗೆದರೆ ಉಳಿದ ಹಣದಲ್ಲಿ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಸರ್ಕಾರ ನಮಗೆ ಮನೆ ಕೊಟ್ಟರೆ ಒಳ್ಳೆಯದಾಗುತ್ತಿದೆ. ಈಚೆಗೆ ಬಟ್ಟೆಗಳು ಬರುವುದು ಕಡಿಮೆ. ಬದುಕು ತುಂಬಾ ಕಷ್ಟವಾಗುತ್ತದೆ ಎಂದರು.

ಇಜ್ಜಲು ಇಸ್ತ್ರಿ ಪೆಟ್ಟಿಗೆ: ಇಜ್ಜಲು ಪೆಟ್ಟಿಗೆಯಿಂದ ಮಾಡಿದ ಇಸ್ತ್ರಿಗೆ ಬಟ್ಟೆಗಳ ನೆರಿಗೆ ನೀಟಾಗಿ ಬೀಳುತ್ತವೆ. ಅದಕ್ಕಾಗಿ ಎಲ್ಲ ದೋಬಿಗಳು ಇಜ್ಜಲು ಇಸ್ತ್ರಿಪೆಟ್ಟಿಗೆಯನ್ನು ಬಳಸುವುದು. ನಗರದ ಕೋತಿತೋಪು ಹಾಗೂ ಬಾರ್‌ಲೈನ್‌ನಲ್ಲಿ ಇಜ್ಜಲು ಅಂಗಡಿಗಳು ಇದ್ದು, ಅಲ್ಲಿಂದಲೇ ಖರೀದಿಸಿ ತರುತ್ತೇವೆ ಎನ್ನುತ್ತಾರೆ ಬಸವರಾಜು.

‘ಒಗೆದ ಬಟ್ಟೆಗಳನ್ನು ಸಂಘದ ಭವನದಲ್ಲಿ ಇಸ್ತ್ರಿ ಮಾಡಿಕೊಳ್ಳುತ್ತೇವೆ. ಮನೆಗಳು ದೋಬಿಘಾಟ್‌ನಿಂದ ತುಂಬಾ ದೂರ. ಬಟ್ಟೆಗಳನ್ನು ಆಟೋದಲ್ಲಿ ತೆಗೆದುಕೊಂಡು ಹೋಗಬೇಕು. ಬಾಡಿಗೆ ಮನೆ ಚಿಕ್ಕದಿರುವುದರಿಂದ  ಇಲ್ಲಿಯೇ ಒಗೆದು, ಇಲ್ಲಿಯೇ ಇಸ್ತ್ರಿ ಮಾಡಿ, ಬಟ್ಟೆಯ ಮಾಲೀಕರಿಗೆ ತಲುಪಿಸುತ್ತೇವೆ. ದೋಬಿಘಾಟ್‌ ಸಮೀಪವೇ ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎನ್ನುವುದು ದೋಬಿ ಮಂಜುಳಮ್ಮ ಅವರ ಮನದ ಮಾತು.

ಕೊಳವೆಬಾವಿ: ಈ ಹಿಂದೆ ಪಂಪ್‌ಹೌಸ್‌ ನಿರ್ಮಿಸಿ ಅಲ್ಲಿಂದಲೇ ತೊಟ್ಟಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು ಎನ್ನುತ್ತಾರೆ ಸಿದ್ದಗಂಗಮ್ಮ. ಈಗ ಅದು ದುರಸ್ತಿಯಲ್ಲಿ ಇರುವುದರಿಂದ ಪಾಲಿಕೆಯ ಕೊಳವೆಬಾಯಿಯಿಂದ ಐದು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಅಲ್ಲಿಯವರೆಗೆ ಅದೇ ನೀರಿನಲ್ಲಿ ಬಟ್ಟೆಗಳನ್ನು ತೊಳೆಯಬೇಕು. ಇದನ್ನು ನೋಡಿದವರು ಬಟ್ಟೆಗಳನ್ನು ನಮಗೆ ಕೊಡುವುದಿಲ್ಲ ಎನ್ನುತ್ತಾರೆ ಅವರು. ಕೊಳಕು ನೀರಿನಲ್ಲಿ ನಿಂತು ಬಟ್ಟೆ ತೊಳೆಯುವುದರಿಂದ ಎಷ್ಟೋ ಬಾರಿ ಹಲವಾರು ರೋಗಗಳಿಂದ ಬಳಲಿದ್ದೇವೆ. ಪ್ರತಿ ದಿನ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕು ಎಂದು ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.