ADVERTISEMENT

ಕುಣಿಗಲ್: ಬಿಇಒ ಕಚೇರಿ ಅನೈತಿಕ ತಾಣ

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 8:05 IST
Last Updated 7 ಜೂನ್ 2012, 8:05 IST

ಕುಣಿಗಲ್: ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಆವರಣ ಗೋಡೆ ಇಲ್ಲದೆ ಬೆಳಿಗ್ಗೆ ನೈತಿಕ ಶಿಕ್ಷಣದ ಕೇಂದ್ರ ಬಿಂದುವಾಗಿರುವ ಕಚೇರಿ, ಸಂಜೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಯಾವುದೇ ಪ್ರತ್ಯೇಕ ವ್ಯವಸ್ಥೆ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬಾಲಕರ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಯ ಕೊಠಡಿಯಲ್ಲೇ ಬಿಇಒ ಕಚೇರಿ ಕಾರ್ಯಾಚರಿಸುತ್ತಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಈ ಭಾಗದ ಪ್ರದೇಶದಲ್ಲಿದ್ದ ಆಟದ ಮೈದಾನವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಗೆ ನೀಡಲಾಗಿದೆ. ಒಂದು ಪಾರ್ಶ್ವದಲ್ಲಿ ಶಿಕ್ಷಕ ಭವನ ನಿರ್ಮಾಣವಾಗಿದ್ದು, ಅದೂ ಶೈವಾವಸ್ಥೆಯಲ್ಲಿದೆ. ಪಕ್ಕದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ, ಶಿಕ್ಷಕ ಸಂಯೋಜಕರ ಕಚೇರಿ.
 
ಬಯಲು ರಂಗಮಂದಿರದ ಜೊತೆ ಕುಡಿಯುವ ನೀರು ಸರಬರಾಜಿನ ತೊಟ್ಟಿ ನಿರ್ಮಿಸಲಾಗಿದೆ. ಇಷ್ಟೆಲ್ಲ ಜಾಗ ಆವರಿಸಿಕೊಂಡಿರುವ ಈ ಭಾಗಕ್ಕೆ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಂತೆ ನಿರ್ಮಿಸಿದ್ದ ಆವರಣಗೋಡೆ ಸಂಪೂರ್ಣ ಶಿಥಿಲವಾಗಿದ್ದು, ಕೆಲವೆಡೆ ಬಿದ್ದು ಹೋಗಿದೆ.

ಪ್ರಸಕ್ತ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಗೋಬಿ ಮಂಚೂರಿ, ಪಾನಿಪುರಿ, ಕಬಾಬ್, ಬಿರಿಯಾನಿ, ಸಂಚಾರಿ ಚಾಟ್ಸ್ ಸೆಂಟರ್ ಗಾಡಿಗಳು ತಮ್ಮ ಜಾಗವನ್ನು ಶಿಥಿಲವಾಗಿರುವ ಬಿಇಒ ಕಚೇರಿ ಆವರಣ ಗೋಡೆ ಪಕ್ಕಕ್ಕೆ ವರ್ಗಾಯಿಸಿಕೊಂಡಿವೆ.

ಈ ಬೆಳವಣಿಗೆಯಿಂದ ಹಗಲು ಸರ್ಕಾರಿ ಕೆಲಸ ನಡೆದರೆ ಸಂಜೆ ವೇಳೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬಿಇಒ ಕಚೇರಿ ಆವರಣ, ರಂಗಮಂದಿರ, ಕ್ರೀಡಾಂಗಣ ಗುಂಡು-ತುಂಡಿನ ಪಾರ್ಟಿ ಮಾಡುವವರ ತಾಣ ಹಾಗೂ ಬಯಲು ಶೌಚಾಲಯವಾಗಿ ಪರಿಣಮಿಸಿದೆ. ಇವರನ್ನು ಹತ್ತಿಕ್ಕಲು ಪೊಲೀಸ್ ಅಧಿಕಾರಿಗಳು ಆಗಿಂದಾಗ್ಗೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿದ್ದರೂ; ನಿಯಂತ್ರಣಕ್ಕೆ ಬಂದಿಲ್ಲ ಎಂದು ರಮೇಶ್, ಜಯಪ್ರಕಾಶ್, ರಾಮಕೃಷ್ಣಪ್ಪ, ನಾರಾಯಣಗೌಡ, ರವಿ, ಮಂಜುನಾಥ್ ಆರೋಪಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.