ADVERTISEMENT

ಕೃಷಿಗೆ ₹ 25 ಸಾವಿರ ಕೋಟಿ ಮೀಸಲು

ರಾಜ್ಯದಲ್ಲಿ ಇಸ್ರೇಲ್‌ ಮಾದರಿ ಕೃಷಿಗೆ ಒತ್ತು: ಶಿರಾದ ಜೆಡಿಎಸ್‌ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 11:02 IST
Last Updated 6 ಏಪ್ರಿಲ್ 2018, 11:02 IST

ಶಿರಾ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರನ್ನು ಸಾಲದಿಂದ ಮುಕ್ತಗೊಳಿಸಲಾಗುವುದು. ಅವರು ಮತ್ತೆ ಸಾಲಗಾರರಾಗದಂತೆ ಮಾಡಲು ಇಸ್ರೇಲ್ ದೇಶದ ಕೃಷಿ ತಜ್ಞರನ್ನು ಕರೆಯಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವುದಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ನಗರದಲ್ಲಿ ಬುಧವಾರ ಜೆಡಿಎಸ್‌ ಆಯೋಜಿಸಿದ್ದ ಕುಮಾರಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬೃಹತ್ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಇಸ್ರೇಲ್‌ನಲ್ಲಿ ನೀರಿನ ಸಮಸ್ಯೆ ಇದ್ದರೂ ಸಹ ಸಮುದ್ರದ ನೀರನ್ನು ಬಳಕೆ ಮಾಡಿಕೊಂಡು ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಅದೇ ರೀತಿ ನಮ್ಮಲ್ಲಿ ಸಹ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು ರೈತರನ್ನು ಅಲ್ಲಿಗೆ ಕಳುಹಿಸುವ ಬದಲು ಇಸ್ರೇಲ್‌ನ ಸಂಶೋಧಕರನ್ನೇ ರೈತರ ಮನೆ ಬಾಗಿಲಿಗೆ ಕರೆಸಿ ಆಧುನಿಕ ಕೃಷಿಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಸಾಲ ಮನ್ನಾ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆ
ಯಲ್ಲಿ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಲಾಗುವುದು. ಕೇವಲ ಸಾಲ ಮನ್ನಾದಿಂದ ರೈತರ ಬದುಕು ಸುಧಾರಿಸುವುದಿಲ್ಲ ಎಂದರು.ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ  ಸರ್ಕಾರದಿಂದ ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವುದನ್ನು ನಿರ್ಧರಿಸಿ ಉಚಿತವಾಗಿ ಬಿತ್ತನೆ ಬೀಜ, ಗೊಬ್ಬರ ನೀಡಲು ₹ 25 ಸಾವಿರ ಕೋಟಿ ಮೀಸಲಿರಿಸಲಾಗುವುದು ಎಂದರು.

ADVERTISEMENT

ಪ್ರಕರಣ ವಾಪಸ್‌: ರಾಜ್ಯದಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಮನೆ ಕಟ್ಟಿಕೊಳ್ಳಲು ಎತ್ತಿನ ಗಾಡಿಯಲ್ಲಿ ಮರಳು ಹೊಡೆಯುವವರ ಮೇಲೆ ಸಹ ಪ್ರಕರಣ ದಾಖಲಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಅಮಾಯಕರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು ಎಂದರು.

ಅವಕಾಶ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್‌ ಕುರುಬ ಸಮಾಜಕ್ಕೆ ಸೇರಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಿಲ್ಲ. ಅಂಗವಿಕಲೆಯಾಗಿರುವುದರಿಂದ ಅವಕಾಶ ನೀಡಲಾಗಿದೆ. ನನಗೆ ಅಂಗವಿಕಲರ ಬಗ್ಗೆ ವಿಶೇಷ ಗೌರವ ಇದೆ. ಅಂಗವಿಕಲರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಇವರಿಗೆ ಅವಕಾಶ ನೀಡಲಾಗಿದೆ ಎಂದರು.

ವೈಯಕ್ತಿಕ ಹಿತಾಸಕ್ತಿ ಬಿಡಿ: ’ಎಲ್ಲರೂ ತಮ್ಮ ವೈಯಕ್ತಿಕ ಹಿತಾಸಕ್ತಿ ಬಿಟ್ಟು ಸತ್ಯಣ್ಣನನ್ನು ಗೆಲ್ಲಿಸಿ. ಇಲ್ಲಿ ಸಿ.ಆರ್. ಉಮೇಶ್ ಸಹ ಟಿಕೆಟ್‌ ಆಕಾಂಕ್ಷಿಯಾಗಿ
ದ್ದರು. ಅವರ ಮನವೊಲಿಸಲಾಗಿದೆ. ಉನ್ನತ ಸ್ಥಾನ ಮಾನ ನೀಡಲಾಗುವುದು, ಸತ್ಯಣ್ಣನನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ’ ಎಂದರು. ಎಲ್ಲ ರೀತಿಯಲ್ಲಿ ಸಹಕಾರ ನೀಡಿ ಗೆಲ್ಲಿಸುವಂತೆ ವೇದಿಕೆಯಲ್ಲಿದ್ದ ಸಿ.ಆರ್.ಉಮೇಶ್ ಅವರಿಗೆ ಮನವಿ ಮಾಡಿದರು.

ಚಿದಾನಂದ್ ಎಂ.ಗೌಡ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧೆ ನಡೆಸುವುದಾಗಿ ಹೇಳುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ದುಡುಕ ಬೇಡಿ. ರಾಜಕಾರಣದಲ್ಲಿ ತಾಳ್ಮೆ ಬಹಳ ಮುಖ್ಯ. ಮುಂದೆ ಸೂಕ್ತ ಸ್ಥಾನ ಮಾನ ನೀಡಲಾಗುವುದು. ಸತ್ಯಣ್ಣನನ್ನು ಗೆಲ್ಲಸುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಸೇರ್ಪಡೆ: ಮಾಜಿ ಸಂಸದ ಸಿ.ಪಿ.ಮೂಡಲ ಗಿರಿಯಪ್ಪ, ತುಮುಲ್ ಮಾಜಿ ನಿರ್ದೇಶಕ ಹುಳಿಗೆರೆ ಮೂಡಲಗಿರಿಯಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನೇನಹಳ್ಳಿ ನಾಗರಾಜು, ರಹಮತ್ ಸೇರಿ ಹಲವಾರು ಮಂದಿ ಜೆಡಿಎಸ್‌ ಸೇರಿದರು.

ಜೆಡಿಎಸ್ ಮುಖಂಡ ಬಿ.ಸತ್ಯನಾರಾಯಣ ಮಾತನಾಡಿ, ’ಕಳೆದ ಎರಡು ಚುನಾವಣೆಯಲ್ಲಿ ಸೋತಿದ್ದೇನೆ. ಈ ಬಾರಿ ನನಗೆ ಆರ್ಶೀವಾದ ಮಾಡುವ ಮೂಲಕ ಶಾಸಕನಾಗಿ ಆಯ್ಕೆ ಮಾಡಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ’ ಎಂದು ಮನವಿ ಮಾಡಿದರು.ಶಾಸಕ ಸಿ.ಬಿ.ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು, ಶರವಣ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಮುಖಂಡರಾದ ಮುಡಿಮಡು ರಂಗಶ್ವಾಮಯ್ಯ, ಕೆ.ಎಲ್.ಮಹದೇವಪ್ಪ, ಕಲ್ಕೆರೆ ರವಿಕುಮಾರ್, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ರಾಜಸಿಂಹ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಸದಸ್ಯರಾದ ಎಸ್.ರಾಮಕೃಷ್ಣ, ಗಿರಿಜಮ್ಮ ಶ್ರೀರಂಗಯಾದವ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ರವಿಶಂಕರ್, ಅರೇಹಳ್ಳಿ ಬಾಬು ಇದ್ದರು.

ಕೀಳಾಗಿ ಮಾತನಾಡುವವರಿಗೆ ಪಾಠ ಕಲಿಸಿ

ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷಕ್ಕೆ 25 ಸ್ಥಾನಗಳು ಬರುತ್ತವೆ ಎಂದು ಹೇಳುತ್ತಿದ್ದಾರೆ. ಅವರಿಗೆ 25 ಸ್ಥಾನಗಳನ್ನು ನೀಡುವ ಮೂಲಕ ನಮ್ಮ ಬಗ್ಗೆ ಕೀಳಾಗಿ ಮಾತನಾಡುವವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.ಪ್ರಸ್ತುತ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಹೆಚ್ಚಾಗಿದೆ. ಸತ್ಯನಾರಾಯಣ ಅವರಿಗೆ ಮತ ನೀಡುವ ಮೂಲಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಿದರು.

ಎಲ್ಲಿದೆ ನೀರಾವರಿ ಯೋಜನೆ: ಟೀಕೆನೀರಾವರಿ ಭಗೀರಥ ಎಂದು ಈ ಕ್ಷೇತ್ರದ ಶಾಸಕರು ಹೇಳಿಕೊಳ್ಳುತ್ತಾರೆ. ಅವರು ಎಲ್ಲಿ ನೀರಾವರಿ ಯೋಜನೆ ರೂಪಿಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ ಎಂದು ಸಚಿವ ಟಿ.ಬಿ.ಜಯಚಂದ್ರ ಹೆಸರು ಹೇಳದೆ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಜಾಹೀರಾತಿಗಾಗಿ 2 ತಿಂಗಳಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದೆ. ಈ ಹಣವನ್ನು ನೀರಾವರಿ ಯೋಜನೆಗೆ ಬಳಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು ಎಂದು ಹೇಳಿದರು.ಪಕ್ಕದ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿಗೆ ನೀರು ತರಲು ಅವರಿಗೆ ಸಾಧ್ಯವಾಗಿದೆ. ಆದರೆ ನಮ್ಮಲ್ಲಿ 10 ವರ್ಷದಿಂದ ಅಧಿಕಾರ ನಡೆಸಿದ ಪಕ್ಷಗಳಿಗೆ ಏಕೆ ಸಾಧ್ಯವಾಗಿಲ್ಲ. ನೀರು ಕೊಡುವುದಾಗಿ ದುಡ್ಡು  ಹೊಡೆಯುವ ಕೆಲಸವನ್ನು ಇವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.