ADVERTISEMENT

ಕೆಲಸವೇ ನಡೆಯದಿದ್ದರೂ ಬಿಲ್‌ ಮಾಡುವಂತೆ ಒತ್ತಡ

ಜಿಲ್ಲಾ ಪಂಚಾಯಿತಿ ‘ಬಿಳಿ ಆನೆ’ ಸಾಕಲು ಸರ್ಕಾರಿ ಹಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 7:52 IST
Last Updated 14 ಡಿಸೆಂಬರ್ 2013, 7:52 IST

ತುಮಕೂರು: ನೋಂದಣಿಯಾಗದವರ ಹೆಸರಿಗೆ ತುಂಡು ಗುತ್ತಿಗೆ ನೀಡುವಂತೆ ಸದಸ್ಯರು ಒತ್ತಡ ಹೇರುತ್ತಿದ್ದಾರೆ. ಅಲ್ಲದೆ ಕೆಲಸವೇ ನಡೆಯ­ದಿದ್ದರೂ ಬಿಲ್‌ ಮಾಡುವಂತೆ ಸಹ ಒತ್ತಡ ಹಾಕುತ್ತಿದ್ದಾರೆ. ಇದು ಶುಕ್ರವಾರ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಪುಟ್ಟಸ್ವಾಮಿ ತೆರೆದಿಟ್ಟ ಸತ್ಯ.

ರೂ. 5 ಲಕ್ಷದವರೆಗೆ ತುಂಡು ಗುತ್ತಿಗೆ ನೀಡ­ಬಹುದು. ಆದರೆ ಸದಸ್ಯರು ತಮ್ಮ ಸಂಬಂಧಿಕರ ಹೆಸರಿನಲ್ಲಿ ನಿಯಮ ಬಾಹಿರವಾಗಿ ಗುತ್ತಿಗೆ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ ಎಂದು ಅವರು ತಿಳಿಸಿದರು. ‘ಜಿ.ಪಂ. ಸದಸ್ಯರನ್ನು ಎದುರಿಸುವ ಧೈರ್ಯ ನಮ್ಮ ಅಧಿಕಾರಿಗಳಿಗೆ ಇಲ್ಲ. ನಿಯಮ ಬಾಹಿರ­ವಾಗಿ ಗುತ್ತಿಗೆ ನೀಡಲು ಸಾಧ್ಯವಿಲ್ಲ. ಕಾಮ­ಗಾರಿ­ಗಳಿಗೆ ಹಿನ್ನಡೆಯಾಗುವುದನ್ನು ತಪ್ಪಿಸಲು ನೇರ­ವಾಗಿ ಟೆಂಡರ್‌ ಕರೆಯುವುದು ಅನಿ­ವಾರ್ಯ ಎಂದು ಮುಖ್ಯ ಕಾರ್ಯನಿವರ್ಹಣಾಧಿಕಾರಿ ಕೆ.ಎನ್‌.ಗೋವಿಂದರಾಜು ಸದಸ್ಯರಿಗೆ ತಿಳಿವಳಿಕೆ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್‌.ಹುಚ್ಚಯ್ಯ, ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳೆಂಬ ಬಿಳಿ ಆನೆಗಳನ್ನು ಸಾಕುವಂತಾಗಿದೆ. ಸರ್ಕಾರದಿಂದ ಸಾವಿರಾರು ಕೋಟಿ ಹಣ ಬಂದರೂ ಜನರ ಕೆಲಸವಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಉತ್ತಮ ಸಾಧನೆ ಮಾಡಿದ್ದೇವೆ ಎಂದು ಅಧಿಕಾರಿಗಳು ತೋರಿಸುತ್ತಿದ್ದಾರೆ. ಆದರೆ ದೇವರಾಣೆಗೂ ಕೆಲಸ ಆಗುತ್ತಿಲ್ಲ. ನೀವು ಏನಾದರೂ ಹಾಳಾಗಿ ಹೋಗಿ, ಅಲ್ಪ ಪ್ರಮಾಣದಲ್ಲಿಯಾದರೂ ಕೆಲಸ ಮಾಡಿ’ ಎಂದು ಜಿ.ಪಂ. ಅಧಿಕಾರಿಗಳಿಗೆ ಬೈಯ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ಮಾತನಾಡಿ, ‘ನಿಮ್ಮಿಂದ (ಅಧಿಕಾರಿಗಳು) ಜನ ನಮಗೆ ದಾರಿಯಲ್ಲಿ ನಿಲ್ಲಿಸಿ ಉಗಿಯುತ್ತಿದ್ದಾರೆ. ಜನಸಾಮಾನ್ಯರಿಗೆ ಯಾವುದೇ ಸೌಲಭ್ಯ ಸಿಗು­ತ್ತಿಲ್ಲ. ಗ್ರಾಮ ಸಭೆಗಳಿಗೆ ಜಿ.ಪಂ.ನ  ಎಲ್ಲ ಅಧಿಕಾರಿ­ಗಳು ಹಾಜರಿರಬೇಕು’ ಎಂದು ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಅನುಪ್‌ ಮಾತನಾಡಿ,  ಜಿಲ್ಲೆಯ 5 ತಾಲ್ಲೂಕು ಬರ­ಪೀಡಿತ ಎಂದು ಘೋಷಣೆಯಾಗಿದ್ದು, ಕಳೆದ ವರ್ಷ ರೂ. 36 ಕೋಟಿ ಬೆಳೆ ವಿಮೆ ನೀಡ­ಲಾಗಿದೆ ಎಂದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಮಾತನಾಡಿ, ಜಿಲ್ಲೆಯಲ್ಲಿ 54527 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಸರ್ಕಾರ ಪರಿಹಾರ ನೀಡ­ಬಹುದು. ಜಿಲ್ಲೆಯ 3 ತಾಲ್ಲೂಕುಗಳಲ್ಲಿ ತೆಂಗು ತಾಂತ್ರಿಕ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಗೆ 25 ಟಿಎಂಸಿ ನೀರು ಬರಬೇಕಾಗಿದ್ದು, 16 ಟಿಎಂಸಿ ನೀರು ಬಂದಿದೆ. ಜನವರಿ ಅಂತ್ಯದವರೆಗೆ ಕೆರೆಗಳಿಗೆ ನೀರು ಹರಿಸ­ಲಾಗುತ್ತದೆ. ಕುಣಿಗಲ್‌ ಕೆರೆಗಳಿಗೆ ಡಿ. 16ರಿಂದ ನೀರು ಬಿಡಲಾಗುತ್ತದೆ ಎಂದು ಹೇಮಾವತಿ ಇಲಾಖೆ ಅಧಿಕಾರಿ ತಿಳಿಸಿದರು. ಬೆಳಧರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸದಸ್ಯರೊಬ್ಬರು ನಡೆಸಿರುವ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಕಳಪೆ ಕಾಮಗಾರಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು,  ಕಳೆದ ಎರಡು ವರ್ಷದ ರೂ. 67 ಲಕ್ಷ ಬಿಡುಗಡೆ ಮಾಡಿಲ್ಲ ಎಂದು ಜಿ.ಪಂ. ಎಇಇ ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.