ADVERTISEMENT

ಕೈಬೀಸಿ ಕರೆಯುವ ‘ನಮ್ಮೂರ ಶಾಲೆ’

ಕೊಡಿಗೇನಹಳ್ಳಿ ಹೋಬಳಿ ಚಿಕ್ಕಮಾಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 11:02 IST
Last Updated 10 ಜೂನ್ 2018, 11:02 IST

ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ‘ಪರಿಸರ ಸ್ನೇಹಿ’ ಎನ್ನುವ ಹೆಗ್ಗಳಿಕೆಯ ಮೂಲಕ ಗಮನ ಸೆಳೆಯುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರುವ ಹಿರಿಮೆಯನ್ನು ಹೊಂದಿದೆ.

ಆವರಣದಲ್ಲಿ 900ಕ್ಕಿಂತಲೂ ಹೆಚ್ಚು ವಿವಿಧ ರೀತಿಯ ಗಿಡ– ಮರ ಹಾಗೂ ಹೂವಿನ ಬಳ್ಳಿಗಳು ಇವೆ. ನೇರಳೆ, ಗೋಡಂಬಿ, ಸಪೋಟ, ಹೊಂಗೆ, ಆಲ, ಪೇರಲ ಹಾಗೂ ಗುಲಾಬಿ ಮತ್ತಿತರ ಹೂವಿನ ಗಿಡಗಳು ಶಾಲಾ ಆವರಣವನ್ನು ಅಂದಗೊಳಿಸಿವೆ. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪರಿಶ್ರಮದಿಂದ ಈ ಸುಂದರ ವಾತಾವರಣ ನಿರ್ಮಾಣವಾಗಲೂ ಸಾಧ್ಯವಾಗಿದೆ.

ಸರ್ಕಾರಿ ಶಾಲೆಯ ಬಗ್ಗೆ ಕೀಳಮರಿಮೆ ಹೊಂದಿರುವವರಿಗೆ ಈ ಶಾಲೆ ತಕ್ಕ ಮಾರುತ್ತರವನ್ನು ನೀಡುತ್ತದೆ. ಇಲ್ಲಿನ ಸುಂದರ ವಾತಾವರಣ ವಿದ್ಯಾರ್ಥಿಗಳ, ಪೋಷಕರ ಮನಸೆಳೆಯುತ್ತಿದೆ.

ADVERTISEMENT

ತೆಲುಗು ಹೆಚ್ಚು ಮಾತನಾಡುವ ಹಾಗೂ ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಹೆಚ್ಚು ಕಳುಹಿಸುತ್ತಿರುವ ಈ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಯೊಂದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. 1982ರಲ್ಲಿ ಪ್ರಾರಂಭವಾದ ಶಾಲೆ 5 ಎಕರೆ ವಿಸ್ತೀರ್ಣ ಹೊಂದಿದೆ. ಈಗ ಉತ್ತಮ ಕಟ್ಟಡ, ಕಂಪ್ಯೂಟರ್ ಕೊಠಡಿ, ವಿಶಾಲವಾದ ಆಟದ ಮೈದಾನ, ರಂಗಮಂದಿರ ಇಲ್ಲಿದ್ದು ಶಿಕ್ಷಣಕ್ಕೆ ಅಗತ್ಯವಿರುವ ಸಕಲ ಸೌಲಭ್ಯವೂ ‌ಆವರಣದಲ್ಲಿ ಇದೆ.

ಅನುಭವಿ ಶಿಕ್ಷಕ- ಶಿಕ್ಷಕಿಯರೂ ಶಾಲೆಯ ಕೀರ್ತಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ನಿರತರಾಗಿದ್ದಾರೆ. ಪ್ರಸಕ್ತ ವರ್ಷ 8, 9, 10ನೇ ತರಗತಿಗಳಿಂದ 185ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗುಂಪು ಅಧ್ಯಯನ ಹಾಗೂ ವಿಶೇಷ ತರಗತಿಗಳು ಶಾಲೆ ಫಲಿತಾಂಶವನ್ನು ಹೆಚ್ಚಿಸುತ್ತಿವೆ. 2017– 18ನೇ ಸಾಲಿನ ಫಲಿತಾಂಶ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90ರಷ್ಟು ಬಂದಿದೆ.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್ ಶಾಲೆಗೆ ಹೊಂದಿಕೊಂಡಂತಿದೆ. ಜತೆಗೆ ಸಮೀಪದಲ್ಲಿಯೇ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ ಇರುವುದರಿಂದ ಗ್ರಾಮೀಣ
ಬಡ ವಿದ್ಯಾರ್ಥಿಗಳು ಕಲಿಕೆಗೆ ಬರುತ್ತಿದ್ದಾರೆ.

‘5 ವರ್ಷದಿಂದ ಶಾಲೆಯ ಬಾಲಕ ಮತ್ತು ಬಾಲಕಿಯರ ಕಬಡ್ಡಿ ತಂಡ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಕಳೆದ ವರ್ಷ ಕೂಡ ಜಿಲ್ಲಾ ಹಂತ ತಲುಪಿದ್ದರು.  ಇತರೆ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚು ಪದಕಗಳನ್ನು ಪಡೆದಿದ್ದಾರೆ’ ಎಂದು ಮುಖ್ಯಶಿಕ್ಷಕ ಚನ್ನಿಗರಾಮಯ್ಯ ಮಾಹಿತಿ ನೀಡಿದರು.

ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎನ್ನುವಂತೆ ಚಿಕ್ಕಮಾಲೂರು ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿಯಾಗುತ್ತಿದೆ. ಇದೇ ರೀತಿ ಎಲ್ಲ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು
- ನರಸಿಂಹಯ್ಯ, ಬಿಇಒ, ಮಧುಗಿರಿ

ಗಂಗಾಧರ್ ವಿ. ರೆಡ್ಡಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.