ADVERTISEMENT

ಕೊಬ್ಬರಿ, ಅಡಕೆಗೆ ಬೆಂಬಲ ಬೆಲೆ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 10:30 IST
Last Updated 16 ಜೂನ್ 2011, 10:30 IST

ತುಮಕೂರು: ಕೊಬ್ಬರಿ, ಅಡಕೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕೊಬ್ಬರಿ, ಅಡಕೆ ಬೆಳೆ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು ಕೇಂದ್ರ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

ಎಂಡೋಸಲ್ಫಾನ್ ಕ್ರಿಮಿನಾಶಕ ನಿಷೇಧಿಸುವಂತೆ ಕೇಂದ್ರ ಸರ್ಕಾರ, ರಾಷ್ಟ್ರೀಯ ಮಾನವಹಕ್ಕು ಆಯೋಗ ಸೂಚಿಸಿದ್ದರು ಕೇಂದ್ರ ಮೌನವಾಗಿದೆ. ಕೃಷಿ ಸಚಿವ ಶರದ್ ಪವಾರ್, ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಬಹುರಾಷ್ಟ್ರೀಯ ಕಂಪೆನಿಗಳ ಒತ್ತಡಕ್ಕೆ ಮಣಿದು ಎಂಡೋಸಲ್ಫಾನ್ ನಿಷೇಧಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.

ಕೃಷಿಕರು ಬಳಸುವ ಡೀಸೆಲ್‌ಗೆ ರಿಯಾಯಿತಿ ನೀಡಬೇಕು. ಈಗಾಗಲೇ ಮೀನುಗಾರರಿಗೆ ನೀಡುತ್ತಿರುವ ರಿಯಾಯಿತಿ ದರದ ಡೀಸೆಲ್ ಅನ್ನು ಇನ್ನಿತರ ಕೃಷಿಕರಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಚೀನಾದಿಂದ ಆಮದಾಗುತ್ತಿರುವ ರೇಷ್ಮೆ ನೂಲಿನ ಮೇಲಿನ ಸುಂಕವನ್ನು ಶೇ 31.5ರಿಂದ ಶೇ 3ಕ್ಕೆ ಇಳಿಸಲಾಗಿದ್ದು ದೇಶಿಯ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಧಾರಣೆ ಕುಸಿತಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮೊದಲಿನಂತೆ ಸುಂಕ ಹೆಚ್ಚಿಸಬೇಕು, ರೇಷ್ಮೆಗೂಡಿಗೆ ಬೆಂಬಲ ಬೆಲೆ ಪ್ರಕಟಿಸಬೇಕೆಂದು ಆಗ್ರಹಿಸಿದರು.

ಬತ್ತ ಹಾಗೂ ತೊಗರಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು. ರಾಜ್ಯ ಸರ್ಕಾರ ಈಗಾಗಲೇ ತನ್ನ ಮಿತಿಯಲ್ಲಿ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ರೈತರ ನೆರವಿಗೆ ಬಂದಿದೆ. ಇದೇ ರೀತಿ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯನ್ನು ಅರಿತು ತಕ್ಷಣ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದರು.

ಕಚ್ಚಾ ಹತ್ತಿಯ ರಫ್ತು ಮೇಲಿನ ನಿಷೇಧವನ್ನು ರೈತರ ಒತ್ತಾಯದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಕಚ್ಚಾ ಹತ್ತಿಯ ಮುಕ್ತ ರಫ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರು, ರಾಷ್ಟ್ರಪತಿಗೆ ಸಲ್ಲಿಸಲಾಯಿತು. ರೈತ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರೇಣುಕಯ್ಯ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.