ADVERTISEMENT

ಕೊರಟಗೆರೆಗೆ 8 ಸಾವಿರ ಮನೆ ಮಂಜೂರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 8:30 IST
Last Updated 13 ಜುಲೈ 2012, 8:30 IST

ಕೊರಟಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ಕೊರಟಗೆರೆ ಕ್ಷೇತ್ರಕ್ಕೆ 8 ಸಾವಿರ ಮನೆಗಳು ಮುಂಜೂರಾಗಿವೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

ತಾಲ್ಲೂಕಿನ ಹೊಳವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವಾಪ್ತಿಯಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಶೇ.80ರಷ್ಟು ಮನೆಗಳು ಮುಂಜೂರಾಗಿವೆ ಎಂದು ಮಾಹಿತಿ ನೀಡಿದರು.

ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಮಧ್ಯವರ್ತಿಗಳು ಮನೆ ಕೊಡಿಸುವುದಾಗಿ ವಸತಿ ರಹಿತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿವೆ. ಮಧ್ಯವರ್ತಿಗಳಿಗೆ ಯಾವುದೇ ಕಾರಣಕ್ಕೂ ಹಣ ನೀಡಬೇಡಿ. ಗ್ರಾಮಸಭೆಗಳಲ್ಲಿ ಸಾರ್ವಜನಿಕರ ಮುಂದೆ ಅರ್ಹರಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.

ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಈಗಾಗಲೇ ತಾಲ್ಲೂಕಿನ ತೋವಿನಕೆರೆ, ಹೊಳವನಹಳ್ಳಿ, ಎಲೆರಾಂಪುರ ಗ್ರಾಮಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ. ರೈತರು ಹಣ ತೆತ್ತು ಮೇವು ಖರೀದಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ತಾಲ್ಲೂಕಿನ ಕೆಲವು ಸ್ಥಳಗಳಲ್ಲಿ ಗೋಶಾಲೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸುಧಾಕರ್ ಲಾಲ್ ಮಾತನಾಡಿ, ರೈತರಿಗೆ ಉಚಿತ ಮೇವು ವಿತರಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಡಿ.ಪ್ರಸನ್ನ ಕುಮಾರ್, ದಾಕ್ಷಾಯಿಣಿ ರಾಜಣ್ಣ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಹನುಮಕ್ಕ, ಸದಸ್ಯರಾದ ಎಲ್.ವಿ.ಪ್ರಕಾಶ್, ಜಿ.ಎಸ್.ರವಿಕುಮಾರ್, ಜಯಮ್ಮ ಧನಂಜಯ್, ಪಟ್ಟಣ ಪಂಚಾಯಿತಿ ಸದಸ್ಯ ಎ.ಡಿ.ಬಲರಾಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ, ಸದಸ್ಯ ಕೋಡ್ಲಹಳ್ಳಿ ವೆಂಕಟೇಶ್, ಪ್ರಭಾರ ಇಓ ಸೋಮಣ್ಣ, ಮುಖಂಡರಾದ ಎಲ್.ರಾಜಣ್ಣ, ಜಿ.ವೆಂಕಟಾಚಲಯ್ಯ, ಜಿ.ಪಂ ಮಾಜಿ ಅಧ್ಯಕ್ಷೆ ಸುನಂದಮ್ಮ, ತಹಶೀಲ್ದಾರ್ ವಿ.ಪಾತರಾಜು, ಸಿಡಿಪಿಓ ಹೊನ್ನೇಶಪ್ಪ, ಎಡಿಎ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

ನೀರಾವರಿಗೆ ಆಗ್ರಹ
ಪಾವಗಡ, ಮಧುಗಿರಿ, ಶಿರಾ ಮತ್ತು ಕೊರಟಗೆರೆ ತಾಲ್ಲೂಕಿನ ಒಣ ಪ್ರದೇಶಗಳಿಗೆ ನೀರುಣಿಸುವ ಯೋಜನೆಯನ್ನು ಸರ್ಕಾರ ಶೀಘ್ರ ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಶಾಸಕ ಡಾ.ಜಿ.ಪರಮೇಶ್ವರ್ ಎಚ್ಚರಿಸಿದರು.

ಸದಾನಂದ ಗೌಡ ನೇತೃತ್ವದ ಸರ್ಕಾರ ಎತ್ತಿನ ಹೊಳೆ ಯೋಜನೆಗೆ ರೂ.4 ಸಾವಿರ ಕೋಟಿ ಅಂದಾಜು ವೆಚ್ಚ ನಿಗದಿಪಡಿಸಿತ್ತು. ಶೆಟ್ಟರ್ ನೇತೃತ್ವದ ಸರ್ಕಾರ ಯೋಜನೆಯಿಂದ ಹಿಂದೆ ಸರಿಯಬಾರದು ಎಂದರು.
ಜಿಲ್ಲೆಯ ಶೇ.80ರಷ್ಟು ಪ್ರದೇಶದಲ್ಲಿ ಮಳೆಯಾಗಿಲ್ಲ.  ರೈತರ ಜೀವನ ದುಸ್ತರವಾಗಿದೆ. ಜನ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.