ಕೊರಟಗೆರೆ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಆದರೆ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ತೀವ್ರತೆ ಕಡಿಮೆಯಾಗಿಲ್ಲ.
ಪಟ್ಟಣದ 14 ವಾರ್ಡ್‌ಗಳ ಪೈಪ್‌ಗಳಲ್ಲಿ ನೀರು ಪೂರೈಕೆಯಾಗಿ ಹಲ ತಿಂಗಳು ಕಳೆದಿವೆ. ಪ್ರಸ್ತುತ ಆಗೊಮ್ಮೆ- ಈಗೊಮ್ಮೆ ಬರುವ ಟ್ಯಾಂಕರ್ ನೀರೇ ಜನರಿಗೆ ಆಧಾರ. ಖಾಲಿ ಕೊಡಗಳೊಂದಿಗೆ ಟ್ಯಾಂಕರ್‌ಗಾಗಿ ಕಾದಿರುವ ಜನರು ಪಟ್ಟಣದೆಲ್ಲೆಡೆ ಕಾಣಿಸಿಗುತ್ತಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 22 ಕೊಳವೆ ಬಾವಿಗಳಿವೆ. ಅವುಗಳಲ್ಲಿ ಕೇವಲ 6 ಕೊಳವೆ ಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೆಲವೆಡೆ ತೆರೆದ ಬಾವಿಗಳಲ್ಲಿ ಇಂದಿಗೂ ಸಿಹಿ ನೀರು ಲಭ್ಯವಿದೆ. ಬಾವಿ ಸ್ವಚ್ಛಗೊಳಿಸದ ಕಾರಣ ಸದಾಶಿವಯ್ಯ ಮನೆ ಬಳಿ ಇರುವ ಬಾವಿಯಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಇದು ಸಮಸ್ಯೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪಟ್ಟಣ ವ್ಯಾಪ್ತಿಯ ಕೊಳವೆಬಾವಿ ಮತ್ತು ತೆರೆದ ಬಾವಿಗಳ ಸೂಕ್ತ ನಿರ್ವಹಣೆಯಿಂದ ಸಮಸ್ಯೆಯ ತೀವ್ರತೆ ಕಡಿಮೆ ಮಾಡಬಹುದು ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಮಳೆ ಆರಂಭವಾದ ಹಿನ್ನೆಲೆಯಲ್ಲಿ ಬಿತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳಿಗೆ ಮತ್ತೆ ಜೀವ ಬಂದಿದೆ. ಆದರೆ ಪಟ್ಟಣದ ಕುಡಿಯುವ ನೀರಿನ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಹೊರಗೆ ಮಳೆ ಸುರಿಯುತ್ತಿದ್ದರೂ ಮನೆಯಲ್ಲಿ ಕುಡಿಯುವ ನೀರಿಗೆ ಪರಿತಪಿಸಬೇಕಾದ ಸ್ಥಿತಿ ಇದೆ. ಪಟ್ಟಣ ಪಂಚಾಯಿತಿ ಮತ್ತು ನೂತನ ಶಾಸಕರು ಇತ್ತ ಗಮನ ಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.