ADVERTISEMENT

ಖಾತ್ರಿ ಯೋಜನೆ: ಕೂಲಿ ನೀಡಲು 3ನೇ ತಪಾಸಣೆ ಸಾಕೆ?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:35 IST
Last Updated 22 ಫೆಬ್ರುವರಿ 2012, 8:35 IST

ತುಮಕೂರು: ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಮೂರನೇ ವ್ಯಕ್ತಿ ತಪಾಸಣೆಗಾಗಿ ವಹಿಸಲಾಗಿದ್ದರೂ ಅವ್ಯವಹಾರ ಪೂರ್ಣವಾಗಿ ಬೆಳಕಿಗೆ ಬರುವುದು ಅಸಾಧ್ಯ ಎನ್ನಲಾಗಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಪಾವಗಡ ತಾಲ್ಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ಎಸಗಲಾಗಿದೆ ಎಂಬ ಆರೋಪ ಗಂಭೀರವಾಗಿ ಕೇಳಿಬಂದಿತ್ತು. ಈ ಸಂಬಂಧ ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗುತ್ತಿತ್ತು.

ಅನರ್ಹರು ಕೂಡ ಕೂಲಿಕಾರರ ಹೆಸರಿನಲ್ಲಿ `ಜಾಬ್ ಕಾರ್ಡ್~ ಪಡೆದು ಯೋಜನೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಂತೆ ತೋರಿಸಿ ಹಣ ಪಡೆದಿದ್ದಾರೆ. ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿವೆ. ಒಂದೇ ಕಾಮಗಾರಿಗೆ ಎರಡು- ಮೂರು ಬಾರಿ ಬಿಲ್ ಪಡೆಯಲಾಗಿದೆ ಎಂಬ ಆರೋಪ ಪ್ರಮುಖವಾಗಿದೆ.

ಈ ಆರೋಪಗಳ ಹಿನ್ನೆಲೆಯಲ್ಲಿ ಮೂರನೇ ಸಂಸ್ಥೆ ಅಥವಾ ವ್ಯಕ್ತಿಯಿಂದ ಕಾಮಗಾರಿಗಳ ತಪಾಸಣೆ ನಡೆಸಲು ಉದ್ದೇಶಿಸಲಾಗಿತ್ತು. ಅದರಂತೆ ಪಾವಗಡ ತಾಲ್ಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಆಗಿರುವ ಕಾಮಗಾರಿಗಳ ಕುರಿತು ತಪಾಸಣೆಗೆ 12 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿತ್ತು. ಈಗಾಗಲೇ ಈ ಸಂಸ್ಥೆಗಳು ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ತಪಾಸಣಾ ವರದಿಯನ್ನು ಜಿಲ್ಲಾ ಪಂಚಾಯತ್‌ಗೆ ನೀಡಿವೆ. ತಪಾಸಣಾ ವರದಿ ಆಧರಿಸಿ ಕೂಲಿ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ.

ವಿಪರ್ಯಾಸವೆಂದರೆ ಮೂರನೇ ವ್ಯಕ್ತಿ ತಪಾಸಣೆಯು ಕೇವಲ ಕಾಮಗಾರಿಯ ಗುಣಮಟ್ಟ, ಪ್ರಮಾಣ ಕೇಂದ್ರಿತ ತಪಾಸಣೆಗಷ್ಟೇ ಸೀಮಿತವಾಗಿದೆ. ಒಂದೇ ಕಾಮಗಾರಿಗೆ ಎರಡು-ಮೂರು ಬಿಲ್ ಮಾಡಿಸಿಕೊಂಡಿರುವುದು, ಬೋಗಸ್ ಜಾಬ್ ಕಾರ್ಡ್‌ಗೆ ಸಂಬಂಧಿಸಿಲ್ಲ. ಹೀಗಾಗಿ ಬೋಗಸ್ ಜಾಬ್ ಕಾರ್ಡ್ ಪಡೆದವರು, ಒಂದೇ ಕಾಮಗಾರಿಗೆ ಹೆಚ್ಚು ಬಾರಿ ಬಿಲ್ ಮಾಡಿಸಿಕೊಂಡವರು ಕೂಡ ಸುಲಭವಾಗಿ ಯೋಜನೆಯ ಹಣ ಪಡೆಯುವ ಸಾಧ್ಯತೆಯೇ ಈಗ ಹೆಚ್ಚಾಗಿದೆ.

ಯಾವ ಊರಿನಲ್ಲಿ ಕಾಮಗಾರಿ ನಡೆದಿದೆ ಎಂಬ ಮಾಹಿತಿ ನೀಡಿರುತ್ತಾರೆ. ಒಂದೇ ಕಾಮಗಾರಿಗೆ ಎರಡು ಸಲ ಬಿಲ್ ಪಡೆದಿರುವ ಬಗ್ಗೆ ನಮಗೇನು ಗೊತ್ತಿರುವುದಿಲ್ಲ. ಆಯಾ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಮುಖಂಡರ ಬಳಿ ಮಾಹಿತಿ ಪಡೆಯುತ್ತೇವೆ. ಆದರೆ ಕಾಮಗಾರಿಯ ಪ್ರಮಾಣ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮಾತ್ರವೇ ವರದಿ ನೀಡುತ್ತಿದ್ದೇವೆ.
 
ಆದರೆ ಒಂದೇ ಕಾಮಗಾರಿಗೆ 2ನೇ ಸಲ ಬಿಲ್ ಮಾಡಿಸಿಕೊಳ್ಳುತ್ತಾರೆ ಎಂಬುದು ಕೂಡ ನಮ್ಮ ಗಮನಕ್ಕೆ ಬರುವುದಿಲ್ಲ. ಬೋಗಸ್ ಜಾಬ್ ಕಾರ್ಡ್‌ಗೆ ಸಂಬಂಧಿಸಿದಂತಲೂ ತನಿಖೆ ಮಾಡಿಲ್ಲ ಎಂದು ಬೆಂಗಳೂರಿನ ತಪಾಸಣಾ ಸಂಸ್ಥೆಯೊಂದರ ಎಂಜಿನಿಯರ್ ಬಿರಾದಾರ ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.

ಪಾವಗಡದ ನಾಗಲಮಡಿಕೆ, ಮಂಗಳವಾಡ, ಬಡಿದಾಸನಹಳ್ಳಿ, ಕೋಟೆಗುಡ್ಡ ಗ್ರಾಮ ಪಂಚಾಯತ್‌ಗಳಲ್ಲಿ ನಮ್ಮ ಸಂಸ್ಥೆಯಿಂದ ತಪಾಸಣೆ ನಡೆಸಿದ್ದು, ಬಹುತೇಕ ಕಡೆಗಳಲ್ಲಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಈ ಸಂಬಂಧ ಜಿ.ಪಂ.ಗೆ ವರದಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮೂರನೇ ವ್ಯಕ್ತಿ ತಪಾಸಣೆಯು ಕೇವಲ ಗುಣಮಟ್ಟ, ಪ್ರಮಾಣಕ್ಕಷ್ಟೇ ಸೀಮಿತವಾಗಿದ್ದು, ಕಾಮಗಾರಿಯ ಸಮಗ್ರ ತಪಾಸಣೆ ಅಲ್ಲದ ಕಾರಣ ಬಾಕಿ ಉಳಿಸಿಕೊಂಡಿರುವ ಹಣ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಈಗ ಕೇಳಿಬಂದಿದೆ.

ಪಾವಗಡ ತಾಲ್ಲೂಕಿನಲ್ಲಿ 2010ನೇ ಸಾಲಿನಲ್ಲಿ ರೂ. 27 ಕೋಟಿ ಕೂಲಿ ಬಾಕಿ ಉಳಿಸಿಕೊಳ್ಳಲಾಗಿದೆ. ಆದರೆ ಈಗ ಕೂಲಿ ಕೇಳುತ್ತಿರುವವರಲ್ಲಿ ಬಹುತೇಕರು ಕಾಮಗಾರಿ ಗುತ್ತಿಗೆದಾರರೆ ಹೊರತು ಕೂಲಿಕಾರರಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ನಾಗರಾಜ್ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಈ ಹಿಂದೆ 4 ಲಕ್ಷ ಜಾಬ್ ಕಾರ್ಡ್ ಹೊಂದಿದ್ದರು. ಆದರೆ ಸರ್ಕಾರದ ನಿರ್ದೇಶನದ ಮೇರೆಗೆ ಬೋಗಸ್ ಕಾರ್ಡ್‌ಗಳನ್ನು ಕಡಿತಗೊಳಿಸಲಾಗಿದ್ದು, ಇದೀಗ ಜಿಲ್ಲೆಯಲ್ಲಿ 260457 ಕೂಲಿ ಕಾರ್ಮಿಕರು ಮಾತ್ರ ಇದ್ದಾರೆ.

ಪಾವಗಡದಲ್ಲಿ 36070 ಬೋಗಸ್ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿತ್ತು. ಈಗ ಕಳೆದ ಸಾಲಿನ ಬಾಕಿ ಉಳಿಸಿಕೊಂಡಿರುವ ಕೂಲಿ ಹಣ ಬಿಡುಗಡೆ ಮಾಡಿದರೆ ಬೋಗಸ್ ಕಾರ್ಡ್‌ದಾರರು ಹಣ ಪಡೆಯಲಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.