ತುರುವೇಕೆರೆ: ರಾಜ್ಯದಲ್ಲಿ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸುಮಾರು 500ಕ್ಕೂ ಹೆಚ್ಚು ಖಾಸಗಿ ಮತ್ತು ಶಾಶ್ವತ ಅನುದಾನರಹಿತ ಶಾಲೆಗಳಿಗೆ ಸರ್ಕಾರ ಕೂಡಲೆ ಅನುಮೋದನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆಗ್ರಹಿಸಿದರು.
ಮಾಯಸಂದ್ರ ಕಲ್ಪತರು ಆಶ್ರಮದಲ್ಲಿ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ದಕ್ಷಿಣ ಶೈಕ್ಷಣಿಕ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಪದವಿ ಪೂರ್ವ ಕಾಲೇಜು ಗಳಿಗೆ ನೇರವಾಗಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ ಬಿಇಡಿ ಪದವಿ ಪಡೆದಿರಲೇಬೇಕು ಎಂದು ನಿರ್ಬಂಧ ಹೇರುವುದು ಅವೈಜ್ಞಾನಿಕ. ಸರ್ಕಾರ ತನ್ನ ನಿರ್ಧಾರ ಪುನರ್ ಪರಿಶೀಲಿಸಬೇಕು. ಪದವಿ ಪೂರ್ವ ಹಾಗೂ ಪ್ರೌಢಶಾಲಾ ಶಿಕ್ಷಕರ ವೇತನ ಶ್ರೇಣಿಯಲ್ಲಿರುವ ತಾರತಮ್ಯ ನಿವಾರಿಸಬೇಕು ಎಂದರು.
ಹಿಂದಿ ಭಾಷಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ಸಿಂದಗೀಕರ್ ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿವಕುಮಾರನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಎಂ.ಎನ್.ಚಂದ್ರೇಗೌಡ, ಸಾಗರನಹಳ್ಳಿ ನಟರಾಜ್, ರಾಜ್ಯ ಪ್ರತಿನಿಧಿ ಕೆ.ಎಸ್.ಬಸವರಾಜ್, ಗೌರವಾಧ್ಯಕ್ಷ ಎನ್.ಬಿ.ಶಿವಕುಮಾರ್, ಟಿ.ಸಿ.ಗಂಗಾಧರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಎಂ.ಮಂಜುಳಾ ಭಾಗವಹಿಸಿದ್ದರು. ವಿ.ಫ್ರಭುಸ್ವಾಮಿ ಸ್ವಾಗತಿಸಿದರು. ಪಿ.ಹಾಲಾನಾಯಕ್ ವಂದಿಸಿದರು. ಎಚ್.ಪುಟ್ಟಮ್ಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.