ADVERTISEMENT

ಗುತ್ತಿಗೆದಾರರ ಮಾತಿಗೆ ಕಣ್ಣೀರಾದ ಆಯುಕ್ತ ತಿವಾರಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 7:30 IST
Last Updated 11 ಅಕ್ಟೋಬರ್ 2011, 7:30 IST

ತುಮಕೂರು: ಸಿಬ್ಬಂದಿಯಿಂದ ಆತ್ಮೀಯ ಬೀಳ್ಕೊಡುಗೆ ಸ್ವೀಕರಿಸಿ ನಗುನಗುತ್ತಾ ತೆರಳಬೇಕಾಗಿದ್ದ ವರ್ಗಾವಣೆಯಾಗಿರುವ ನಗರಸಭೆ ಆಯುಕ್ತ ಅನುರಾಗ್ ತಿವಾರಿ ಗುತ್ತಿಗೆದಾರರ ಚುಚ್ಚು ಮಾತುಗಳಿಗೆ ಕಣ್ಣೀರಾದ ಘಟನೆ ಸೋಮವಾರ ನಗರಸಭೆಯಲ್ಲಿ ನಡೆಯಿತು.

ಹೊಸದಾಗಿ ಆಯುಕ್ತರಾಗಿ ಬಂದಿರುವ ಸಾವಿತ್ರಿ ಗುಂಡಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಇನ್ನೇನು ಹೊರಡುವ ತಯಾರಿಯಲ್ಲಿದ್ದಾಗ ಕಚೇರಿಗೆ ಬಂದ ಗುತ್ತಿಗೆದಾರರ ತಂಡವೊಂದು ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.

ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಅನಗತ್ಯ ವಿಳಂಬ ಮಾಡಲಾಗಿದೆ. ಜ್ಯೇಷ್ಠತೆ ಅನುಸರಿಸದೇ ಕೆಲವರಿಗೆ ಮಾತ್ರ ಹಣ ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಆರೋಪಿಸಿದರು.

ಕೆಲವು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿ ಇನ್ನು ಕೆಲವರಿಗೆ ಹಣ ಬಿಡುಗಡೆ ಮಾಡಲು ಏಕೆ ಮೀನಮೇಷ ಎಣಿಸುತ್ತಿದ್ದೀರಿ ಎಂದು ಜೋರು ದನಿಯಲ್ಲಿ ಗುತ್ತಿಗೆದಾರರು ಪ್ರಶ್ನಿಸಿದರು. ಮೊದಲಿಗೆ ಸಮಧಾನಿಂದಲೇ ಉತ್ತರಿಸುತ್ತಿದ್ದ ಆಯುಕ್ತರು, ಮಾತಿನ ಮಧ್ಯೆ ಗುತ್ತಿಗೆದಾರರೊಬ್ಬರಿಂದ ತೂರಿ ಬಂದ ಮಾತಿಗೆ ಭಾವುಕರಾದರು.

ಈ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾರ ಹತ್ತಿರವು ನಯಾ ಪೈಸೆ ಹಣ ಪಡೆಯದೇ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದೇನೆ ಎಂದು ಹೇಳುತ್ತ ಗದ್ಗದಿತರಾದರು.

ನಂತರ ಸುಧಾರಿಸಿಕೊಂಡ ಅವರು, ನಾನು ಜೋರಾಗಿಯೇ ಮಾತನಾಡುತ್ತೇನೆ. ಹಬ್ಬದ ಹಿಂದಿನ ದಿನ ಕೆಲವು ಗುತ್ತಿಗೆದಾರರು ಸಂಕಷ್ಟ ತೋಡಿಕೊಂಡರು. ಹಾಗಾಗಿ ಒಂದಷ್ಟು ಕಡತಗಳಿಗೆ ಸಹಿ ಹಾಕಿದ್ದೇನೆ. ಅದು ತಪ್ಪಾ? ನಾನು ನಿಮಗೆ ಒಳ್ಳೇದು ಮಾಡಿಲ್ವ? ತುಮಕೂರಿನಿಂದ ಹೊರಡುವಾಗ ನನ್ನ ಮನಸ್ಸಿಗೆ ನೋವುಂಟು ಮಾಡಬೇಡಿ. ಮೊದಲು ಸೌಮ್ಯವಾಗಿ ನಡೆದುಕೊಳ್ಳಿ. ನಿಮಗೆ ಇದು  ಕೊನೆ ಕಾಮಗಾರಿ ಅಲ್ಲ ಎಂದು ಹೇಳುತ್ತಾ ಗುತ್ತಿಗೆದಾರರಿಗೆ ಮಾತನಾಡಲು ಬಿಡದೆ ಒಂದೇ ಸಮನೆ ಬಡಬಡಾಯಿಸಿದರು.

ಇದರಿಂದ ಕೆಲಹೊತ್ತು ಗೊಂದಲದ ವಾತಾವರಣ ಉಂಟಾಯಿತು. ಕಾಮಗಾರಿ ನಡೆಸಲು ಸಾಲ ಮಾಡಿ ಹಣ ಹಾಕುತ್ತೇವೆ. ನಂತರ ಬಿಲ್ ಪಾಸು ಮಾಡಿಸಿಕೊಳ್ಳಲು ಅಲೆದಾಡಬೇಕು. ದೇವರಾಣೆ ನಮಗೆ ಈ ವೃತ್ತಿಯೇ ಬೇಡ. ಮೊದಲು ಬಾಕಿ ಉಳಿದಿರುವ ಹಣ ಬಿಡುಗಡೆ ಮಾಡಿ ಸ್ವಾಮಿ ಎಂದು ಗುತ್ತಿಗೆದಾರರು ಮನವಿ ಮಾಡಿದರು.
ನಂತರ ಸಮಾಧಾನಗೊಂಡ ತಿವಾರಿ, ನೂತನ ಆಯುಕ್ತರಿಗೆ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡಲು ಶಿಫಾರಸು ಮಾಡಬಹುದು ಅಷ್ಟೇ. ಅದನ್ನು ಮಾಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟರು. ಸ್ಥಳದಲ್ಲಿದ್ದ ನೂತನ ಆಯಕ್ತೆ ಸಾವಿತ್ರಿ ಗುಂಡಿ ಮೌನವಾಗಿ ಎಲ್ಲವನ್ನು ಆಲಿಸಿದರು.

40 ಮಂದಿ ಗುತ್ತಿಗೆದಾರರ ಕಾಮಗಾರಿ ಹಣವನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಆಯುಕ್ತ ಅನುರಾಗ್ ತಿವಾರಿ ಈ ಹಿಂದೆ ಭರವಸೆ ನೀಡಿದ್ದರು. ಎಲ್ಲ ಕಡತಗಳು ಅಂತಿಮ ಹಂತದಲ್ಲಿದ್ದವು. ಅದರಲ್ಲಿ 25 ಮಂದಿ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿದ್ದಾರೆ. 

ಶುಕ್ರವಾರ ಸಂಜೆ ಎಂಜಿನಿಯರ್ ಒಬ್ಬರು ತಂದುಕೊಟ್ಟ 5 ಕಡತಗಳಿಗೆ ತರಾತರಿಯಲ್ಲಿ ಸಹಿ ಮಾಡಿದ್ದಾರೆ. ಕೆಲವು ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಜೇಷ್ಠತೆ ಹಾಗೂ ಇತರ ನಿಯಮ ಗಾಳಿಗೆ ತೂರಿರುವುದು ಸ್ಪಷ್ಟವಾಗುತ್ತಿದೆ ಎಂದು ಗುತ್ತಿಗೆದಾರ ಉಮಾಪತಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

ಸಾಲ ಮಾಡಿ ಕಾಮಾಗಾರಿಗಳಿಗೆ ಹಣ ಹಾಕಿರುತ್ತೇವೆ. ಸಕಾಲದಲ್ಲಿ ಹಣ ಬಿಡುಗಡೆಯಾಗದಿದ್ದರೆ  ಹೇಗೆ? ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಗುತ್ತಿಗೆದಾರರನ್ನು ಗುಲಾಮರಂತೆ ಕಾಣುತ್ತಾರೆ.  ಈಚೆಗೆ ನಗರಸಭೆ ವತಿಯಿಂದ ಎಂ.ಜಿ.ರಸ್ತೆ ಕಾಮಗಾರಿಗೆ ಟೆಂಡರ್ ಆಹ್ವಾನಿಸಿದ್ದರೂ ಯಾವೊಬ್ಬ ಗುತ್ತಿಗೆದಾರ ಮುಂದೆ ಬಂದಿಲ್ಲ.

ಹೀಗಾದರೆ, ನಗರದ ಅಭಿವೃದ್ಧಿ ಹೇಗೆ ಸಾಧ್ಯ. ನೂತನ ಆಯುಕ್ತರು ಕಡತಗಳನ್ನು ಪರಿಶೀಲಿಸುವುದರಲ್ಲೇ ಕಾಲ ಕಳೆದುಹೋಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.