ADVERTISEMENT

ಗ್ರಾಮಸ್ಥರಿಗೆ ಥಳಿತ: ಪಿಎಸ್‌ಐ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 9:40 IST
Last Updated 16 ಏಪ್ರಿಲ್ 2011, 9:40 IST
ಗ್ರಾಮಸ್ಥರಿಗೆ ಥಳಿತ: ಪಿಎಸ್‌ಐ ವಿರುದ್ಧ ಪ್ರತಿಭಟನೆ
ಗ್ರಾಮಸ್ಥರಿಗೆ ಥಳಿತ: ಪಿಎಸ್‌ಐ ವಿರುದ್ಧ ಪ್ರತಿಭಟನೆ   

ಹುಳಿಯಾರು: ಸಾರ್ವಜನಿಕವಾಗಿ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್‌ಐ ಗ್ರಾಮಸ್ಥರನ್ನು ಥಳಿಸಿದರು ಎಂದು ಆರೋಪಿಸಿ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಿದ ಘಟನೆ ಹೋಬಳಿಯ ಹೊಯ್ಸಳಕಟ್ಟೆ ಗೇಟ್‌ನಲ್ಲಿ ಶುಕ್ರವಾರ ನಡೆಯಿತು.

ಘಟನೆ ಹಿನ್ನೆಲೆ: ಖಾಸಗಿ ಬಸ್‌ಗಳ ಮಾಲೀಕರು ಪ್ರಯಾಣ ದರ ದುಪ್ಪಟ್ಟು ಏರಿಸಿದ್ದರ ವಿರುದ್ಧ ಗುರುವಾರ ಗ್ರಾಮಸ್ಥರಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಆಗ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್‌ಐ ಪಾರ್ವತಮ್ಮ ಆಗಮಿಸಿ ಬಸ್ ಮಾಲೀಕರನ್ನು ಸಂಪರ್ಕಿಸಿ ಕೂತು ಚರ್ಚಿಸಿ ಸಮಸ್ಯೆ ಬಗೆಹರಿಸುವರೆಗೆ ನಿಯಮದಂತೆ ಶೇ.20ರಷ್ಟು ಹೆಚ್ಚಿಸುವಂತೆ ತಿಳಿಸಿದ ಪರಿಣಾಮ ಪರಿಸ್ಥಿತಿ ತಿಳಿಯಾಗಿತ್ತು.

ಆದರೆ ಗುರುವಾರ ರಾತ್ರಿ ಶಿರಾದಿಂದ ಹೊರಟ ಖಾಸಗಿ ಬಸ್‌ನಲ್ಲಿ ದುಪ್ಪಟ್ಟು ದರ ಕೇಳಿದ್ದರಿಂದ ಮತ್ತೆ ಸಮಸ್ಯೆಯಾಗಿತ್ತು. ಇದೇ ವೇಳೆ ಹೊಯ್ಸಳಕಟ್ಟೆ ಗ್ರಾಮಕ್ಕೆ ಆಗಮಿಸಿದ ಪಿಎಸ್‌ಐ ನ್ಯಾಯ ಕೇಳಲು ಹೋಗಿದ್ದ ಸಾರ್ವಜನಿಕರನ್ನು ಥಳಿಸಿದರು ಎಂದು ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು.

ಈ ವಿಷಯ ಸುತ್ತ ಮುತ್ತಲ ಗ್ರಾಮಗಳಿಗೆ ಮುಟ್ಟಿ ಕುಪಿತಗೊಂಡು ಶುಕ್ರವಾರ ಮುಂಜಾನೆಯಿಂದಲೇ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದರು. ವಿನಾಃ ಕಾರಣ ಥಳಿಸಿದ ಪಿಎಸ್‌ಐ ಅವರನ್ನು ವರ್ಗಾವಣೆಗೊಳಿಸುವಂತೆ ಹಠ ಹಿಡಿದರು. ಸ್ಥಳಕ್ಕೆ ಬಂದು ಸಮಾಧಾನ ಮಾಡಲು ಪ್ರಯತ್ನಿಸಿದ ಸಿಪಿಐ ರವಿಪ್ರಸಾದ್ ಶ್ರಮ ಫಲ ಕೊಡಲಿಲ್ಲ. ಸಂಜೆ ವೇಳೆಗೆ ಎಎಸ್‌ಪಿ ಡಾ.ಎಂ.ಬಿ.ಬೋರಲಿಂಗಯ್ಯ ಸ್ಥಳಕ್ಕೆ ಆಗಮಿಸಿ ಮುಂದಿನ 10 ದಿವಸಗಳಲ್ಲಿ ತನಿಖೆ ನಡೆಸಿ ಪಿಎಸ್‌ಐ ತಪ್ಪಿತಸ್ಥರು ಎಂದು ಕಂಡು ಬಂದರೆ ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಎಚ್.ಆರ್.ಗೋವಿಂದರಾಜು, ಡಿ.ಬಿ.ರವಿಕುಮಾರ್, ಗಿರೀಶ್, ಜಯಲಿಂಗರಾಜು, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.