ADVERTISEMENT

ಗ್ರಾಮೀಣಾಭಿವೃದ್ಧಿಗೆ ಮಾದರಿ ಹೆಬ್ಬೂರು

ಅಭಿವೃದ್ಧಿಯ ಪರ್ವ; ಬದಲಾಯಿತು ಹೆದ್ದಾರಿ ಬದಿ ಗ್ರಾಮದ ಹಣೆಬರಹ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 12:10 IST
Last Updated 1 ಮಾರ್ಚ್ 2018, 12:10 IST
ಹೆಬ್ಬೂರು ಬಸ್ ನಿಲ್ದಾಣ
ಹೆಬ್ಬೂರು ಬಸ್ ನಿಲ್ದಾಣ   

ಹೆಬ್ಬೂರು: ಗ್ರಾಮದ ಯಾವ ದಿಕ್ಕಿನಲ್ಲಿ ನೋಡಿದರೂ ಉತ್ತಮವಾದ ಕಾಂಕ್ರೀಟ್ ರಸ್ತೆಗಳು, ರಸ್ತೆಗಳಿಗೆ ಹೊಂದಿಕೊಂಡು ಹಾಗೂ ಗಲ್ಲಿ ಗಲ್ಲಿಗಳಲ್ಲಿ ಸಿಮೆಂಟ್ ಚರಂಡಿಗಳು, ಸುಸಜ್ಜಿತ ಆಸ್ಪತ್ರೆ, ಸರ್ಕಾರಿ ಕಾಲೇಜು...

ಹೀಗೆ ಅಭಿವೃದ್ಧಿಯನ್ನೇ ಹೊದ್ದು ಮಲಗಿದೆ ತುಮಕೂರು– ಕುಣಿಗಲ್‌ ರಾಜ್ಯ ಹೆದ್ದಾರಿಯಲ್ಲಿರುವ ಹೆಬ್ಬೂರು ಗ್ರಾಮ. ಹೋಬಳಿ ಕೇಂದ್ರ ಹೆಬ್ಬೂರು ಶರವೇಗದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಊರು ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ಜಿಲ್ಲಾ ಕೇಂದ್ರ ತುಮಕೂರಿನಿಂದ 25 ಕಿ.ಮೀ ದೂರದಲ್ಲಿದ್ದರೂ ಅಭಿವೃದ್ಧಿ ಸ್ಪರ್ಶವನ್ನು ಈ ಹೋಬಳಿ ಕೇಂದ್ರ ಕಂಡಿರಲಿಲ್ಲ. ಕಳೆದ 7–8 ವರ್ಷಗಳಲ್ಲಿ ಇದರ ಚಿತ್ರಣವೇ ಬದಲಾಗಿದೆ. ಮಣ್ಣಿನ ರಸ್ತೆಗಳು ‌ನೋಡು ನೋಡುತ್ತಿದ್ದಂತೆಯೇ ಕಾಂಕ್ರೀಟ್ ರಸ್ತೆ, ಚರಂಡಿಗಳು ವ್ಯವಸ್ಥಿತವಾಗಿ ನಿರ್ಮಾಣವಾದವು.

ADVERTISEMENT

ಇಕ್ಕಟ್ಟಾದ ರಸ್ತೆಗಳನ್ನು ವಿಶಾಲಗೊಳಿಸಲಾಯಿತು. ಇದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲವಾಗಿದೆ. ವಾಹನಗಳೂ ಸುಗಮವಾಗಿ ಸಂಚರಿಸುವಂತಾಗಿದೆ. ಅದರಲ್ಲೂ ಕೆಶಿಪ್ ನಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ಸಂಪರ್ಕ ವ್ಯವಸ್ಥೆ ಇನ್ನಷ್ಟು ಸುಧಾರಣೆ ಕಂಡಿದೆ.

ಕುಡಿಯುವ ನೀರು: ’ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮದಲ್ಲಿ ಈಗ ಆ ಸಮಸ್ಯೆ ಇಲ್ಲ. ಶಾಸಕರು ಕಣಕುಪ್ಪೆ ಕೆರೆಯಿಂದ ಹೆಬ್ಬೂರು ಗ್ರಾಮಕ್ಕೆ ನಾಲ್ಕು ವರ್ಷಗಳ ಹಿಂದೆ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಿದರು. ಹೇಮಾವತಿ ನದಿ ನೀರು ತರುವ ಪ್ರಯತ್ನ ನಡೆಸಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಹೇಳಿದರು.

ಗ್ರಾಮೀಣಾಭಿವೃದ್ಧಿಯ ಕನಸುಗಳು ಇಲ್ಲಿ ಸಾಕಾರಗೊಂಡಿರುವುದು ಎದ್ದು ಕಾಣುತ್ತದೆ. ಗ್ರಾಮದ ಅಭಿವೃದ್ಧಿಗೆ ಸಾಕ್ಷಿ ಎನ್ನುವಂತೆ ಸಾಲು ಸಾಲು ಕಾಮಗಾರಿಗಳು ಪೂರ್ಣವಾಗಿವೆ.
***
‘ಸ್ಮಾರ್ಟ್ ಹೋಬಳಿ; ಕನಸು ನನಸು’

’ಗ್ರಾಮೀಣ ಪ್ರದೇಶದ ಜನರಿಗೂ ನಗರ ಪ್ರದೇಶದ ಸೌಕರ್ಯಗಳು ಲಭಿಸಬೇಕು. ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಯಾವುದೇ ಸೌಕರ್ಯಗಳಿಂದ ವಂಚಿತರಾಗಬಾರದು ಎಂಬ ಆಶಯ ನನ್ನದು’ ಎಂದು ಶಾಸಕ ಬಿ.ಸುರೇಶ್‌ಗೌಡ ’ಪ್ರಜಾವಾಣಿ’ಗೆ ತಿಳಿಸಿದರು.

ಹೀಗಾಗಿ, ಸ್ಮಾರ್ಟ್ ಹೋಬಳಿ, ಸ್ಮಾರ್ಟ್ ಗ್ರಾಮ ರೂಪಿಸುವ ಕನಸು ಹೊತ್ತು ಅಭಿವೃದ್ಧಿಪಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇಂತಹ ಪ್ರಯತ್ನದಲ್ಲಿ ‘ಹೆಬ್ಬೂರು, ಸ್ಮಾರ್ಟ್‌ ಹೋಬಳಿ’ಯಾಗಿ ಪರಿವರ್ತನೆಯಾಗಿದೆ’ ಎಂದರು.

‘ವಿವಿಧ ವಸತಿ ಯೋಜನೆಯಡಿ ಬಡವರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ 900 ಫಲಾನುಭವಿಗಳಿಗೆ ಮನೆ ನೀಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.