ADVERTISEMENT

ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 8:35 IST
Last Updated 17 ಏಪ್ರಿಲ್ 2012, 8:35 IST

ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ನೂರಾರು ಗ್ರಾಮ ಪಂಚಾಯಿತಿ ನೌಕರರು ಸೋಮವಾರ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನಾ ಧರಣಿ ನಡೆಸಿ, ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಜಿಲ್ಲೆಯ 321 ಗ್ರಾಮ ಪಂಚಾಯಿತಿಗಳಲ್ಲಿ 3000ಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಗಾಡಿನಲ್ಲಿ ಕರವಸೂಲಿ, ಕಂಪ್ಯೂಟರ್ ಆಪರೇಟರ್, ನೀರು ವಿತರಕ, ಜಾಡಮಾಲಿ, ಗುಮಾಸ್ತ, ಜವಾನರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಸರ್ಕಾರ ಇವರತ್ತ ಕಣ್ಣೆತ್ತಿಯೂ ನೋಡಿಲ್ಲ ಎಂದು ದೂರಿದರು.

ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ `ವಿಡಿಎ~ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದ್ದರೂ ಬಹಳಷ್ಟು ಗ್ರಾಮ ಪಂಚಾಯಿತಿಗಳು ಸರ್ಕಾರಿ ಆದೇಶಕ್ಕೆ ಸೊಪ್ಪು ಹಾಕಿಲ್ಲ. ಕನಿಷ್ಠ ವೇತನ ನಿಯಮಾವಳಿಯೂ ಜಾರಿಯಾಗಿಲ್ಲ.

ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗುವ ಶಾಸನಬದ್ಧ ಅನುದಾನ ಮತ್ತು ವಸೂಲಿಯಾದ ಕಂದಾಯದಲ್ಲಿ ಶೇ.40ರಷ್ಟು ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಜಮಾ ಮಾಡಿ, ಪ್ರತಿ ತಿಂಗಳ 10ರ ಒಳಗೆ ಸಿಬ್ಬಂದಿ ವೇತನ ಪಾವತಿಸಬೇಕು ಎಂಬ ಸರ್ಕಾರದ ಸೂಚನೆಯೂ ಜಿಲ್ಲೆಯಲ್ಲಿ ಜಾರಿಯಾಗಿಲ್ಲ ಎಂದರು.

ಕರ ವಸೂಲಿಗಾರರ ನೇಮಕಾತಿ ಪ್ರಕ್ರಿಯೆ, ಜ್ಯೇಷ್ಠತಾ ಪಟ್ಟಿ ಆಧಾರದ ಬಡ್ತಿ ಪ್ರಕ್ರಿಯೆ ಪ್ರಾರಂಭಿಸಬೇಕು. ನೌಕರರ ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಡಬೇಕು. ಕಳೆದ 15-20 ವರ್ಷಗಳಿಂದ ವಿವಿಧ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ನೌಕರರ ಹುದ್ದೆಯನ್ನು ಏಕಕಾಲಕ್ಕೆ ಅನುಮೋದಿಸಬೇಕು ಎಂದು ಒತ್ತಾಯಿಸಿದರು.

ಕೇಡರ್ ಮತ್ತು ರಿಕ್ರೂಟ್‌ಮೆಂಟ್ ಪಂಚಾಯಿತಿ ನೌಕರರಿಗೂ ಪಿಂಚಣಿ ಜಾರಿಗೊಳಿಸಿ ಇಪಿಎಫ್‌ಗೆ ಒಳಪಡಿಸಬೇಕು. ಜನಶ್ರೀ ವಿಮಾ ಯೋಜನೆಯನ್ನು ಜಾರಿ ಮಾಡಬೇಕು. ಗ್ರಾಮ ಪಂಚಾಯಿತಿಗಳಿಗೆ ರೂ.25 ಲಕ್ಷ ಅನುದಾನ ನೀಡಬೇಕು ಎಂದು ವಿನಂತಿಸಿದರು.

ಸಂಘದ ಪದಾಧಿಕಾರಿಗಳಾದ ರಾಮಚಂದ್ರಶರ್ಮ, ರಂಗನಾಥ್, ಮಂಜುಳಮ್ಮ, ಪ್ರಸನ್ನ, ಬಸವಲಿಂಗಪ್ಪ, ರವಿಕುಮಾರ್, ನಾಗೇಶ್, ಪರಮೇಶ್, ವಿ.ಎಸ್.ಚಂದ್ರಪ್ಪ, ಶಂಕರಪ್ಪ, ರಂಗರಾಜು, ರಮೇಶ್, ಪ್ರಕಾಶ್, ನಾಗರಾಜು, ತಿಪ್ಪೇಸ್ವಾಮಿ, ಹನುಮಂತರಾಯಪ್ಪ ಮತ್ತು ವೆಂಕಟೇಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.