ADVERTISEMENT

ಚಿತ್ರೋತ್ಸವಕ್ಕಾಗಿ ರಚ್ಚೆ : ಶೇಷಾದ್ರಿ ವಿಷಾದ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 10:00 IST
Last Updated 12 ಫೆಬ್ರುವರಿ 2011, 10:00 IST

 ತುಮಕೂರು: ‘ನಾವೇ ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಗಳನ್ನು ನಮ್ಮ ಊರಿನ ಜನರಿಗೆ ತೋರಿಸಲು ಜಿಲ್ಲಾಡಳಿತದ ಮುಂದೆ ಹಠ, ರಚ್ಚೆ ಹಿಡಿಯಬೇಕಾಯಿತು’ ಎಂದು ಚಿತ್ರನಿರ್ದೇಶಕ ಪಿ.ಶೇಷಾದ್ರಿ ವಿಷಾದ ವ್ಯಕ್ತಪಡಿಸಿದರು.

ನಗರದ ಸಿದ್ದಗಂಗಾ ಫಾರ್ಮಸಿ ಕಾಲೇಜಿನ ಪದ್ಮಶ್ರೀ ಶಿವಮೂರ್ತಿ ಶಾಸ್ತ್ರಿ ವೇದಿಕೆಯಲ್ಲಿ ಶುಕ್ರವಾರ ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ‘ಕನ್ನಡ ಚಲನಚಿತ್ರಗಳು-ಒಂದು ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಚಿತ್ರಗಳನ್ನು ಅಮೆರಿಕ, ಇಂಗ್ಲೆಂಡ್, ಈಜಿಪ್ಟ್‌ನಲ್ಲಿ ನೋಡುತ್ತಾರೆ. ಆದರೆ, ನಮ್ಮೂರಿನಲ್ಲಿ ನಮ್ಮ ಚಿತ್ರಗಳನ್ನು ತೋರಿಸಲು ಹೋರಾಟ ಮಾಡಬೇಕಾಯಿತು. ಇದೇ ಕಾರಣಕ್ಕಾಗಿಯೇ ಕಳೆದ ಬಾರಿ ಜಿಲ್ಲಾ ಉತ್ಸವದಲ್ಲಿ ಅಭಿನಂದನೆ ಸ್ವೀಕರಿಸಲಿಲ್ಲ. ನಮ್ಮೂರಿನಲ್ಲಿ ನಮಗೆ ಸಿಗುವ ಸಮ್ಮಾನ, ಮಾನ್ಯತೆ ರಾಷ್ಟ್ರಪತಿ ಭವನದಲ್ಲಿ ಸಿಗುವ ಸಮ್ಮಾನಕ್ಕಿಂತಲೂ ಮಿಗಿಲಾದುದು ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಶಸ್ತಿ ಪುರಸ್ಕೃತ ಚಿತ್ರಗಳೆಂದು ಜನರು ಮೂಗು ಮುರಿಯುವುದೇಕೆ? ಸಿನಿಮಾದಲ್ಲಿ ಮನರಂಜನೆ ಹುಡುಕಬಾರದು. ಸಿನಿಮಾ ಕೇವಲ ಮನರಂಜನೆ ಮಾಧ್ಯಮವಲ್ಲ, ಅದು ಅರಿವಿನ ವಿಸ್ತಾರಕ್ಕಿರುವಂತಹುದು. ಅದರಲ್ಲಿ ಕಲೆ, ಸಂಸ್ಕೃತಿ ಹುಡುಕಬೇಕು. ನಾನು ರಾಷ್ಟ್ರಪ್ರಶಸ್ತಿಗಾಗಿ ಸಿನಿಮಾ ಮಾಡುವುದಿಲ್ಲ. ‘ರ್ಯಾಂಕ್’ಗಾಗಿ ಸಿನಿಮಾ ಮಾಡುತ್ತೇನೆ. ಇದು ತಪ್ಪಲ್ಲ. ಜನರು ನೋಡಲಿ, ಬಿಡಲಿ. ಎಂದಿಗೂ ಮನರಂಜನೆಗಾಗಿ ಸಿನಿಮಾ ಮಾಡುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದರು.

ನಗರದ ಸದಭಿರುಚಿ ಸಿನಿಮಾಸಕ್ತರು ‘ಫಿಲ್ಮ್ ಸೊಸೈಟಿ’ ಕಟ್ಟಿಕೊಂಡು ಚಿತ್ರ ವೀಕ್ಷಣೆ, ಚರ್ಚೆ ನಡೆಸುವುದಾದರೆ ಪ್ರಶಸ್ತಿ ಪುರಸ್ಕೃತ ಚಿತ್ರಗಳ ಪ್ರಿಂಟ್ ಮತ್ತು ಡಿವಿಡಿಗಳನ್ನು ಒದಗಿಸುವುದಾಗಿ ಮತ್ತೊಬ್ಬ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಶಕ ಬ್ಯಾಲದಕೆರೆ ಲಿಂಗದೇವರು ಭರವಸೆ ನೀಡಿದರು.

ಶೀಘ್ರದಲ್ಲೇ ‘ಫಿಲ್ಮ್ ಸೊಸೈಟಿ’ ಆರಂಭಿಸುವುದಾಗಿ ಚಿತ್ರ ನಿರ್ಮಾಪಕ ಜಿ.ಎಸ್.ಸೋಮಶೇಖರ್ ಘೋಷಿಸಿದರು. ಈ ಬಾರಿಯ ಜಿಲ್ಲಾ ಉತ್ಸವದಲ್ಲಿ ಖ್ಯಾತ ವಯೋಲಿನ್ ವಾದಕ ನರಸಿಂಹಲು ವಡಾವಟ್ಟಿ ಅವರಿಂದ ಕಾರ್ಯಕ್ರಮ ಕೊಡಿಸಲು ಸಾಕಷ್ಟು ಪ್ರಯತ್ನ ನಡೆಸಿದೆವು. ಆದರೆ, ಇದರಲ್ಲಿ ಯಶಸ್ಸು ಸಿಗಲಿಲ್ಲ ಎಂದು ವಿಷಾದಿಸಿದರು. ಭೂಮಿ ಬಳಗದ ವತಿಯಿಂದ ಸದ್ಯದಲ್ಲೇ ನಗರದಲ್ಲಿ ನರಸಿಂಹಲು ವಡಾವಟ್ಟಿ ಅವರಿಂದ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್, ಪ್ರತಿಯೊಬ್ಬರು ನಾಡು, ನುಡಿಯ ಋಣ ತೀರಿಸಬೇಕು. ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.