ADVERTISEMENT

ಚಿ.ನಾ.ಹಳ್ಳಿ ಕಾಂಗ್ರೆಸ್‌ನಲ್ಲಿ ಭಿನ್ನಮತದ ಮೇಲಾಟ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:29 IST
Last Updated 17 ಮಾರ್ಚ್ 2014, 9:29 IST

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಕಾಂಗ್ರೆಸ್‌ ಘಟಕದಲ್ಲಿ ಭಿನ್ನಮತ ತಾರಕಕ್ಕೇರಿದೆ. ಸೀಮೆಎಣ್ಣೆ ಕೃಷ್ಣಯ್ಯ, ಸಿ.ಬಸವರಾಜು ಇಬ್ಬರು ತಾವೇ ಅಧ್ಯಕ್ಷರು ಎಂದು ಬಿಂಬಿಸಿಕೊಳ್ಳು­ತ್ತಿ­ದ್ದಾರೆ. ಮಾಜಿ ಶಾಸಕ ಬಿ.ಲಕ್ಕಪ್ಪ ಬೆಂಬಲಿಗರು ಸಾಸಲು ಸತೀಶ್‌ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.­ಲಕ್ಕಪ್ಪ ಸಾಸಲು ಸತೀಶ್‌ ವಿರುದ್ಧ ಹರಿ­ಹಾಯ್ದರು. ಸತೀಶ್‌ ಸ್ಥಳೀಯ ಮುಖಂ­ಡರು, ಜಿಲ್ಲಾ ಘಟಕದ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು. ಶೆಟ್ಟಿಕೆರೆಯಿಂದ ಚಿಕ್ಕನಾಯಕನ­ಹಳ್ಳಿ­ವರೆಗೆ ಸೋಮವಾರ ನಡೆಯುವ ಪಾದಯಾತ್ರೆ ಬಗ್ಗೆ ಮಾಹಿತಿಯಿಲ್ಲ.

ಬ್ಲಾಕ್ ಕಾಂಗ್ರೆಸ್‌ ಚಿಕ್ಕನಾಯಕನ­ಹಳ್ಳಿಯಿಂದ ಕಂದಿಕೆರೆವರೆಗೆ ಪಾದ­ಯಾತ್ರೆ ಹಮ್ಮಿಕೊಂಡಿದೆ. ಜತೆಗೆ ಜೆಡಿಎಸ್‌ನ ರಘುನಾಥ್ ಹಾಗೂ ಅವರ ಬೆಂಬಲಿಗರನ್ನು ಸ್ವಾಗತಿಸಲು ಕಾರ್ಯಕ್ರಮ ರೂಪಿಸಲಿದ್ದೇವೆ. ಸೋಮ­ವಾರ ಸಭೆ ನಡೆಸಿ ದಿನಾಂಕ ನಿಗದಿಗೊಳಿಸಲಿದ್ದೇವೆ ಎಂದು ತಿಳಿಸಿದರು.

ಎಂಟು ತಿಂಗಳಿನಿಂದ ಇಬ್ಬರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಎಂದು ಹೇಳಿ­ಕೊಂಡು ಓಡಾಡುತ್ತಿದ್ದಾರೆ. ಆದರೆ ಇದುವರೆಗೂ ಕಾರ್ಯಕರ್ತರ ಸಭೆ ಕರೆದಿಲ್ಲ ಎಂದು ಆಕ್ರೋಶ ವ್ಯಕ್ತ­ಪಡಿಸಿದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ಸಿ.ಪಿ.ಮಹೇಶ್, ಧರಣಿ ಲಕ್ಕಪ್ಪ, ಸಿ.ಎಂ.ಬೋರಲಿಂಗಯ್ಯ, ವಾಸು, ಎಚ್.ಬಿ.­ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೇಗೌಡ, ಪರಮೇಶ್ವರ್, ಕೆ.ಶಿವಣ್ಣ, ಮಲ್ಲಿಕಾರ್ಜುನಯ್ಯ, ಮೊಹ­ಮದ್­ಇಷ್ತಾಕ್ ಮುಂತಾದವರಿದ್ದರು.

ಎಲ್ಲರೊಟ್ಟಿಗೆ ಸಾಸಲು ಸತೀಶ್ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು­ಕೊಳ್ಳ­ಲಾಗಿದೆ. ಸೋಮ­ವಾರ ನಡೆಯುವ ಪಾದ­ಯಾತ್ರೆ­ಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರ ಗೊಂದಲದ ಬಗ್ಗೆ ಕೇಳಿದ ಪ್ರಶ್ನೆಗೆ ಸಿ.ಬಸವರಾಜ್‌ ತಾವೇ ಅಧಿಕೃತ ಅಧ್ಯಕ್ಷ ಎಂದರು.

ಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ವಿಭಾಗದ ಮಹಿಳಾ ಕಾರ್ಯದರ್ಶಿ ಪ್ರಮಿಳಾ, ಜಿ.ವೆಂಕಟೇಶ್, ಅಶೋಕ್, ಪ್ರಸನ್ನಕುಮಾರ್, ರೆಹಮತ್ತುಲ್ಲಾ, ರಫೀಕ್, ಶ್ರೀನಿವಾಸ್, ಬಿ.ಶಿವಕುಮಾರ್‌ ಇದ್ದರು. ನಾನೇ ಅಧ್ಯಕ್ಷ: ಸೀಮೆಎಣ್ಣೆ ಕೃಷ್ಣಯ್ಯ ತಾವೇ ಬ್ಲಾಕ್‌ ಕಾಂಗ್ರೆಸ್‌ನ ಅಧಿಕೃತ ಅಧ್ಯಕ್ಷ. ಮಂಗಳವಾರ ಕಂದಿಕೆರೆ, ದೊಡ್ಡೆಣ್ಣೇಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಹಗ್ಗ ಜಗ್ಗಾಟ: ಮಾರ್ಚ್ 9 ರಿಂದ 16 ರವರೆಗೆ ಪಾದಯಾತ್ರೆ ನಡೆಸು­ವಂತೆ ಎಐಸಿಸಿ ನಿರ್ದೇಶನ ನೀಡಿದೆ. ಆದರೆ ತಾಲ್ಲೂಕಿನ ಮುಖಂಡರು ಅವಧಿ ಮುಗಿದ ಬಳಿಕ ಪಾದಯಾತ್ರೆ ಕುರಿತು ಹಗ್ಗ ಜಗ್ಗಾಟ ನಡೆಸುತ್ತಿದ್ದಾರೆ. ಈ ನಡೆ ನಿಷ್ಠಾವಂತ ಕಾರ್ಯಕರ್ತರಿಗೆ ಮುಜುಗರ ಮೂಡಿಸುತ್ತಿದೆ ಎಂದು ಮುಖಂಡ ಎಚ್.ಬಿ.ಎಸ್.­ನಾರಾಯಣ­ಗೌಡ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT