ADVERTISEMENT

ಚೇಳೂರು: ಬಿರುಗಾಳಿ ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 13 ಮೇ 2018, 7:46 IST
Last Updated 13 ಮೇ 2018, 7:46 IST
ಬಿರುಗಾಳಿ ಸಹಿತ ಮಳೆಗೆ ಬುಡ ಸಮೇತ ಬಿದ್ದಿರುವ ಅಡಿಕೆ ಮರಗಳು.
ಬಿರುಗಾಳಿ ಸಹಿತ ಮಳೆಗೆ ಬುಡ ಸಮೇತ ಬಿದ್ದಿರುವ ಅಡಿಕೆ ಮರಗಳು.   

ಗುಬ್ಬಿ: ತಾಲ್ಲೂಕಿನ ಚೇಳೂರು ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ 3ರ ಸುಮಾರಿಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ತೆಂಗು, ಅಡಿಕೆ ಮರಗಳು ಬುಡ ಸಮೇತ ಬಿದ್ದಿಲ್ಲದೆ, ಮನೆಗಳ ಸೂರು ಹಾರಿ ಹೋಗಿವೆ.

ತಾಲ್ಲೂಕಿನ ಎಂಎಂ ಕಾವಲ್‌ ಹಾಗೂ ಸಿ.ನಂದಿಹಳ್ಳಿ ವ್ಯಾಪ್ತಿಯ ಬಸವರಾಜು, ಸಿದ್ದಪ್ಪ, ಚಂದ್ರಶೇಖರ್‌, ಗಂಗಾಧರ್‌ ಎಂಬ ರೈತರ ತೋಟದಲ್ಲಿ ಸುಮಾರು 100 ಕ್ಕೂ ಅಧಿಕ ಅಡಿಕೆ ಮರಗಳು ಹಾಗೂ 22 ತೆಂಗಿನ ಮರಗಳು ಬುಡ ಸಮೇತ ಉರಳಿ ಬಿದ್ದು ಅಪಾರ ನಷ್ಟವಾಗಿದೆ.

ಎಂಎಂ ಕಾವಲ್‌ ಗ್ರಾಮದ ರೈತ ಸಿದ್ದಪ್ಪ ಎಂಬುವರ ದನದ ಕೊಟ್ಟಿಗೆಯ ತಗಡಿನ ಶೀಟುಗಳು ಹಾರಿ ಹೋಗಿವೆ. ಅಲ್ಲದೆ ಅಡಿಕೆ ಹಾಗೂ ತೆಂಗು ಜೊತೆಗೆ 2 ಅಲಸಿನ ಮರಗಳು ಸಹ ಬಿದ್ದಿವೆ.

ADVERTISEMENT

ಈ ಬಗ್ಗೆ ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ತಿಳಿಸಿದಾಗ ಮಳೆಗೆ ಬಿದ್ದಿರುವ ಮರಗಳ ಚಿತ್ರ ಸಹಿತ ಮನವಿಯನ್ನು ತಹಸೀಲ್ದಾರ್‌ಗೆ ನೀಡಿ ಎಂದು ತಿಳಿಸಿದರು. ಚುನಾವಣೆ ನಿಮಿತ್ತ ತಹಸೀಲ್ದಾರ್‌ ಸಿಗುತ್ತಿಲ್ಲ. ಬುಧವಾರದ ನಂತರ ಹೋದರೆ ತಹಸೀಲ್ದಾರ್‌ ಸಿಗಬಹುದು ಎಂದು ಕೆಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ‘ಪ್ರಜಾವಾಣಿ‘ಗೆ ಬಸವರಾಜು ತಿಳಿಸಿದ್ದಾರೆ.

ಮಂದಗತಿಯಲ್ಲಿ ಸಾಗಿದ ಹೆಸರು ಬಿತ್ತನೆ

ತುರುವೇಕೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪೂರ್ವ ಮುಂಗಾರು ಬೆಳೆ ಬಿತ್ತನೆಯಾಗಿದ್ದು, ಮಳೆಯಿಲ್ಲದೆ ಬಿತ್ತನೆ ಮಾಡಿದ ಬೀಜ  ಸರಿಯಾಗಿ ಮೊಳೆಕೆಯೊಡೆಯದೆ ರೈತರು ಆತಂಕ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.

ಹೆಸರು, ಅಲಸಂದೆ, ಎಳ್ಳು, ಉದ್ದು ಮತ್ತು ಜೋಳ ಪೂರ್ವ ಮುಂಗಾರು ಬೆಳೆಗಳಾಗಿದ್ದು, ಅವುಗಳನ್ನು ರೈತರು ಏಪ್ರಿಲ್ ಮತ್ತು ಮೇ ತಿಂಗಳ ಆರಂಭದಲ್ಲೇ ಬಿತ್ತನೆ ಮಾಡಿದ್ದಾರೆ. ತಾಲ್ಲೂಕಿನ ಕೆಲವೆಡೆ ಮಾತ್ರ ಅಲ್ಲಲ್ಲಿ ಮಳೆಯಾಗಿದ್ದು, ಅಲ್ಲಲ್ಲಿ ರೈತರು ಬಿತ್ತನೆ ಕೆಲಸ ನಡೆಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 1,000 ಹೆಕ್ಟೇರ್ ಹೆಸರು ಬೆಳೆಯುವ ಪ್ರದೇಶವಿದೆ. ಅದರಲ್ಲಿ 50 ಹೆಕ್ಟೇರ್ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಸರ್ಕಾರ ರೈತ ಸಂರ್ಪಕ ಕೇಂದ್ರಗಳಿಗೆ 60 ಕ್ವಿಂಟಲ್ ಹೆಸರು ಕಾಳನ್ನು ಪೂರೈಸಿದ್ದು, ಈ ಪೈಕಿ ಸಾಮಾನ್ಯ ವರ್ಗದ ರೈತರಿಗೆ ಕೆ.ಜಿ.ಗೆ ₹ 60, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ₹ 47 ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ಮಳೆ ಬಿದ್ದರೂ ಈ ಬಾರಿ ರೈತರು ತೇವಾಂಶವಿರುವ ಭೈತರಹೊಸಹಳ್ಳಿ, ಮುನಿಯೂರು, ಮಾಯಸಂದ್ರ, ಕೊಂಡಜ್ಜಿ, ಪುರ ಗದ್ದೆ ಬಯಲುಗಳಲ್ಲಿ ಪೂರ್ವ ಮುಂಗಾರು ಬೆಳೆಯನ್ನು ಬಿತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.