ADVERTISEMENT

ಜಾತಿ ವ್ಯವಸ್ಥೆ: ನ್ಯಾಯಾಧೀಶರ ಆತಂಕ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:17 IST
Last Updated 19 ಡಿಸೆಂಬರ್ 2012, 11:17 IST

ಶಿಡ್ಲಘಟ್ಟ: ಇತ್ತೀಚಿನ ದಿನಗಳಲ್ಲಿ ಜಾತಿ ಬಗೆಗಿನ ಅತಿಯಾದ ಅಭಿಮಾನ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ದೇಶದ ಏಕತೆಗೆ ಧಕ್ಕೆತರುವ ಮಟ್ಟಕ್ಕೂ ಬೆಳೆಯಬಹುದೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಡಾಲ್ಫಿನ್ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆ, ಕಾಲೇಜುಗಳ ಪ್ರವೇಶ, ವಿದ್ಯಾರ್ಥಿ ವೇತನ ಪಡೆಯುವುದಕ್ಕಷ್ಟೆ ಜಾತಿ ಸೀಮಿತವಾಗಬೇಕೆ ಹೊರತು ಜೀವನದ ಎಲ್ಲ ಹಂತಗಳಲ್ಲೂ ಜಾತಿ ಪ್ರಧಾನವಾಗಬಾರದು ಎಂದರು.

ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಮಹಿಳೆಯರು, ಅಬಲೆಯರು, ಸಂತ್ರಸ್ತರು ಹಾಗೂ ವಾರ್ಷಿಕ 1 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯವಿರುವ ಎಲ್ಲರಿಗೂ ಜಾತಿ, ಮತ, ಧರ್ಮದ ತಾರತಮ್ಯವಿಲ್ಲದೆ ಉಚಿತ ಕಾನೂನಿನ ನೆರವು ನೀಡಲಾಗುವುದು ಎಂದರು.

ಈ ವರ್ಷ ಕಾನೂನು ಸೇವಾ ಸಮಿತಿ ಕುರಿತು ಪ್ರಚಾರ ಮಾಡಲು ಸರಕಾರ ರೂ. 7200 ಖರ್ಚು ಮಾಡಿದೆಯಾದರೂ ಕೇವಲ ಇಬ್ಬರು ಮಾತ್ರ ಕಾನೂನಿನ ನೆರವು ಕೇಳಿಕೊಂಡು ಸೇವಾ ಸಮಿತಿಯ ಮುಂದೆ ಬಂದಿದ್ದಾರೆ. ಅಂದರೆ ಜನರಿಗೆ ಸಮಸ್ಯೆಗಳು ಇಲ್ಲ ಎಂದಲ್ಲ. ಕಾನೂನಿನ ಅರಿವಿನ ಕೊರತೆ ಇದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಕಾನೂನು ಸೇವಾ ಸಮಿತಿಯಿಂದ ಸಿಗುವ ಸೌಲಭ್ಯಗಳ ಕುರಿತು ಕಳೆದೆರಡು ವರ್ಷಗಳಿಂದಲೂ ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆಯಾದರೂ ಅದನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗುತ್ತಿರುವವರ ಸಂಖ್ಯೆ ನಿರೀಕ್ಷೆಯಂತೆ ಹೆಚ್ಚುತ್ತಿಲ್ಲ ಎಂದು ವಿಷಾದಿಸಿದರು.

ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ್ ಅರಸ್, ಸರ್ಕಾರಿ ಸಹಾಯಕ ಅಭಿಯೋಜಕ ಈ.ಡಿ. ಶ್ರಿನಿವಾಸ್,ಡಾಲ್ಫಿನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ಪ್ರಾಂಶುಪಾಲ ಎಂ.ಎಚ್.ನಾಗೇಶ್, ವಕೀಲರಾದ ವಿ.ಸುಬ್ರಮಣಿ, ಇ.ನಾರಾಯಣಪ್ಪ,  ರವೀಂದ್ರನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.