ADVERTISEMENT

ಜೆಡಿಎಸ್‌ ಅಭ್ಯರ್ಥಿ ಕೃಷ್ಣಪ್ಪ ನಾಮಪತ್ರ ಸಲ್ಲಿಕೆ

ಎಚ್‌.ಡಿ.ದೇವೇಗೌಡ ಸಾಥ್‌; ರಂಗೇರಿದ ಚುನಾವಣಾ ಕಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 6:16 IST
Last Updated 20 ಮಾರ್ಚ್ 2014, 6:16 IST

ತುಮಕೂರು: ಜೆಡಿಎಸ್‌ ಅಭ್ಯರ್ಥಿ ಎ.ಕೃಷ್ಣಪ್ಪ ಬುಧವಾರ ನಾಮಪತ್ರ ಸಲ್ಲಿಸುವ ಮೂಲಕ ಲೋಕಸಭಾ ಚುನಾವಣೆ ರಂಗೇರಿತು. ಮೊದಲ ದಿನವೇ ಕೃಷ್ಣಪ್ಪ ನಾಮಪತ್ರ ಸಲ್ಲಿಸಿ ಚುನಾವಣೆ ಅಖಾಡಕ್ಕೆ ಇಳಿದರು.

ನಗರದ ಜೆಡಿಎಸ್‌ ಕಚೇರಿಯಿಂದ ಕಾರ್ಯ­ಕರ್ತರು ಮತ್ತು ಬೆಂಬಲಿಗರೊಂದಿಗೆ ಮೆರವಣಿಗೆ­ಯಲ್ಲಿ ಬಂದ ಎ.ಕೃಷ್ಣಪ್ಪ ಜಿಲ್ಲಾಧಿಕಾರಿ ಕಚೇರಿ­ಯಲ್ಲಿ ನಾಮಪತ್ರ ಸಲ್ಲಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗೆ ಸಾಥ್‌ ನೀಡಿದರು. ದೇವೇಗೌಡರ ಆಗಮನ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿತ್ತು.

ತಾಲ್ಲೂಕಿನ ಗೂಳೂರು ದೇವಾಲಯಕ್ಕೆ ಕುಟುಂಬ­ದೊಂದಿಗೆ ತೆರಳಿ ಪೂಜೆ ಸಲ್ಲಿಸಿದ ಅಭ್ಯರ್ಥಿ ಎ.ಕೃಷ್ಣಪ್ಪ, ನಂತರ ಎಚ್‌.ಡಿ.ದೇವೇ­ಗೌಡ ಮತ್ತಿತರರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಹೊರಗೆ ಕಾರ್ಯಕರ್ತರು ಕಿಕ್ಕಿರಿದು ನೆರೆದಿದ್ದರು.

ನಾಮಪತ್ರ ಸಲ್ಲಿಸಿದ ನಂತರ ಕಾರ್ಯ­ಕರ್ತರನ್ನು ಉದ್ದೇಶಿಸಿ ಮಾತನಾಡಿದ ದೇವೇ­ಗೌಡ, ಕರ್ನಾಟಕದ ಜನ ಸ್ವಾಭಿಮಾನಿ­ಗಳು. ನಾವು ಯಾರ ಅಡಿಯಾಳುಗಳಲ್ಲ. ಇಲ್ಲಿನ ಜನರ ಸ್ವಾಭಿಮಾನ ಮತ್ತು ರಾಜ್ಯದ ಹಿತರಕ್ಷಣೆ ಮಾಡುವ ಶಕ್ತಿ ಜೆಡಿಎಸ್‌ಗೆ ಇದೆ ಎಂದು ಗುಡುಗಿದರು.

ತಮಿಳುನಾಡು ಮತ್ತಿತರರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಅಲ್ಲಿನ ಸಂಪೂರ್ಣ ಬಹು­ಮತ ನೀಡುತ್ತಾರೆ. ಆದರೆ ನೀವು ಇಲ್ಲಿ ನಮಗೆ ಒಂದೆರೆಡು ಅಭ್ಯರ್ಥಿಗಳನ್ನು ಗೆಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ದೆಹಲಿಯಲ್ಲಿ ನಾವು ಧ್ವನಿ ಎತ್ತಬೇಕು ಎಂದರೆ ಸಂಖ್ಯಾಬಲ ಬೇಕು. ಕಾರ್ಯಕರ್ತರು ಇದನ್ನು ಜನರಿಗೆ ಮನ­ದಟ್ಟು ಮಾಡಬೇಕೆಂದು ಅವರು ಸಲಹೆ ನೀಡಿದರು.

ದೇಶದಲ್ಲಿ ಬದಲಾವಣೆ ಪರ್ವ ಆರಂಭ­ವಾಗಿದೆ. ಜನತೆ ಬದಲಾವಣೆ ಬಯಸುತ್ತಿರುವ ಈ ಸಂದರ್ಭದಲ್ಲಿ ನಾವು ಜನರನ್ನು ತಲುಪುವ ಕೆಲಸ ಮಾಡಬೇಕು. 17 ವರ್ಷ ದೇಶವಾಳಿದ ಇಂದಿರಾ­ಗಾಂಧಿ ಈ ದೇಶದ ಮಹಿಳೆಯರಿಗೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಟೀಕಿಸಿದರು.

ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಗೂಳಿಹಟ್ಟಿ ಶೇಖರ್‌, ಮುಖಂಡರಾದ ಅಬ್ದುಲ್‌ಅಜೀಂ, ಜೆಡಿಎಸ್ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಬಿ.­ಸುರೇಶ್‌ಬಾಬು, ಎಸ್‌.ಆರ್‌.ಶ್ರೀನಿವಾಸ್‌, ಸುಧಾಕರ­ಲಾಲ್‌, ಮುಖಂಡರಾದ ಡಾ.ಹುಲಿ­ನಾಯ್ಕರ್‌, ಗೌರಿಶಂಕರ್‌, ಗೋವಿಂದರಾಜು ಮತ್ತಿತರರು ಭಾಗವಹಿಸಿದ್ದರು.

ತಮಿಳುನಾಡು ಹಿಡಿತದಲ್ಲಿ ಕೇಂದ್ರ
ಕೇಂದ್ರದ ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳು ನೆಲ, ಜಲದ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ್ದು, ತಮಿಳುನಾಡಿನ ಎಐಎಡಿಎಂಕೆ, ಡಿಎಂಕೆ ಪಕ್ಷಗಳ ಹತೋಟಿಯಲ್ಲಿವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆರೋಪಿಸಿದರು.

ನಗರದಲ್ಲಿ ಬುಧವಾರ ಜೆಡಿಎಸ್‌ ಅಭ್ಯರ್ಥಿ ಎ.ಕೃಷ್ಣಪ್ಪ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತಾಸಕ್ತಿ ರಕ್ಷಿಸಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್‌ ಮುಖಂಡ ಜಾಫರ್‌ ಷರೀಫ್‌ ಮೆಕ್ಕಾ ಯಾತ್ರೆಯಿಂದ ಬಂದ ನಂತರ ಜೆಡಿಎಸ್‌ ಸೇರುವುದು ಖಚಿತ. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಆನಂತರ ನಿರ್ಧಾರವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸುವ ಬಗ್ಗೆ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಮಂಡ್ಯ ಕ್ಷೇತ್ರದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡುತ್ತೀರಾ ಎಂಬ ಪ್ರಶ್ನೆಗೆ ಸಿಟ್ಟುಮಾಡಿಕೊಂಡ ದೇವೇಗೌಡರು ಉತ್ತರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT