ADVERTISEMENT

ತಂದೆಯಿಂದಲೇ ಮಗು ಕೊಲೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 10:08 IST
Last Updated 20 ಜುಲೈ 2013, 10:08 IST

ತುರುವೇಕೆರೆ: ಜನ್ಮದಾತನೇ 14 ತಿಂಗಳ ತನ್ನ ಮಗುವನ್ನು ಉಸಿರುಕಟ್ಟಿಸಿ ದಾರುಣವಾಗಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ಕರಡಿಗೆರೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಕರಡಿಗೆರೆ ಗ್ರಾಮದ ತೋಟದ ಮನೆಯಲ್ಲಿ ರಘುಕುಮಾರ್ ತನ್ನ ಪತ್ನಿ ಸುನೀತಾ ಹಾಗೂ  14 ತಿಂಗಳ ಮಗು ವಿಶಾಲ್‌ನೊಂದಿಗೆ ವಾಸವಿದ್ದರು. ರಘು ಮತ್ತೊಂದು ಮದುವೆಯಾಗುವ ಬಗ್ಗೆ ಆಗಾಗ್ಗೆ ತನ್ನ ಪತ್ನಿ ಸುನೀತಾಳೊಂದಿಗೆ ಪ್ರಸ್ತಾಪಿಸುತ್ತಿದ್ದ ಹಿನ್ನೆಲೆಯಲ್ಲಿ ಕಲಹಗಳು ನಡೆದು ರಾಜಿ ಪಂಚಾಯಿತಿ ನಡೆದಿದ್ದವು ಎನ್ನಲಾಗಿದೆ.

ಗುರುವಾರ ಸಂಜೆ ಸುನೀತಾ ತೋಟದಿಂದ ಎಮ್ಮೆ ಹೊಡೆದುಕೊಂಡು ಬರಲು ಹೋಗಿದ್ದಾರೆ. ವಾಪಸ್ ಬಂದು ಮಲಗಿದ್ದ ಮಗುವನ್ನು ಗಮನಿಸಿದಾಗ ಬಾಯಲ್ಲಿ ನೊರೆ ಬರುತ್ತಿದ್ದುದನ್ನು ಕಂಡು ಗಾಬರಿಯಿಂದ ಮನೆಯವರನ್ನು ಕೂಗಿದ್ದಾರೆ. ಮನೆಯವರು ಬಂದು ನೋಡುವಷ್ಟರಲ್ಲಿ ಮಗು ಕೊನೆಯುಸಿರೆಳೆದಿದೆ.

ತಾನು ಹೊರಹೋಗುವ ಮುನ್ನ ಜೀವಂತವಾಗಿದ್ದ ಮಗು ಇಲ್ಲವಾಗಿದ್ದನ್ನು ಕಂಡು ಆಘಾತಕ್ಕೊಳಗಾದ ಸುನೀತಾ ತನ್ನ ತಾಯಿ ಊರಾದ ಬೆನಕನಕೆರೆಯ ಬಂಧುಗಳಿಗೆ ತಿಳಿಸಿದ್ದಾರೆ.

ಬಂಧುಗಳು ಮಗುವಿನ ಸಾವಿಗೆ ರಘು, ಅತ್ತೆ ರಂಗಮ್ಮ, ಮಾವ ಲಕ್ಷ್ಮಣಗೌಡ ಕಾರಣವಿರಬಹುದು ಎಂದು ಶಂಕಿಸಿ ಪಟ್ಟಣದ ಪೊಲೀಸರಿಗೆ ದೂರಿತ್ತಿದ್ದಾರೆ. ಘಟನೆ ಸ್ಥಳಕ್ಕೆ ಸಿಪಿಐ ತಿರುಮಲಯ್ಯ, ಪಿಎಸ್‌ಐ ಅಜರುದ್ದೀನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಉಸಿರು ಕಟ್ಟಿಸಿ ಸಾಯಿಸಿರುವುದು ಖಚಿತವಾಗಿದ್ದು ತನಿಖೆ ಮುಂದುವರೆದಿದೆ.

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಮೂರು ದೇಗುಲಗಳಲ್ಲಿ ಸರಣಿ ಕಳವು ಮಾಡಲಾಗಿದೆ.
ಗುರುಗದಹಳ್ಳಿ ಗ್ರಾಮದ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಹುಂಡಿ ಹೊಡೆದು ಅದರಲ್ಲಿದ್ದ ಹಣ ದೋಚಿದ್ದಾರೆ. ಅದೇ ಗ್ರಾಮದ ವೀರಭದ್ರೇಶ್ವರ ದೇವಾಲಯದ ಬೀಗವನ್ನೂ ಮುರಿದು ಹುಂಡಿಯನ್ನು ಹೊತ್ತೊಯ್ದಿದ್ದರು. ಆ ಹುಂಡಿ ಮುರಿಯಲು ಸಾಧ್ಯವಾಗದ್ದರಿಂದ ಗ್ರಾಮದ ಹೊರ ಭಾಗದಲ್ಲಿ ಎಸೆದು ಹೊಗಿದ್ದಾರೆ. ಈ ಹುಂಡಿಯಲ್ಲಿದ್ದ ಹಣ ಉಳಿದಿದೆ. ಬೆಳಗ್ಗೆ ಹೊಲಗಳ ಕಡೆ ಹೋದ ಗ್ರಾಮಸ್ಥರಿಗೆ ಬಯಲಿನಲ್ಲಿ ಬಿದ್ದಿದ್ದ ಹುಂಡಿ ಕಾಣಿಸಿತು.

ಯಾವುದೋ ದೇಗುಲದ ಹುಂಡಿ ತಂದು ಕಳ್ಳರು ಇಲ್ಲಿ ಎಸೆದು ಹೋಗಿರಬಹುದು ಎಂದು ಶಂಕಿಸುವಷ್ಟರಲ್ಲಿ ಅದೇ ಗ್ರಾಮದ ದೇಗುಲಕ್ಕೆ ಕನ್ನ ಹಾಕಿರುವುದು ಬೆಳಕಿಗೆ ಬಂತು ಎಂದು ಗ್ರಾಮಸ್ಥ ಪ್ರಕಾಶ್ ತಿಳಿಸಿದ್ದಾರೆ. ಗ್ರಾಮಾಂತರ ಸಿಪಿಐ ರಾಮಕೃಷ್ಣ, ತಹಶೀಲ್ದಾರ್ ಮಂಜುನಾಥ್, ಪಿಎಸ್‌ಐ ಸುಂದರ್, ಸ್ಥಳಕ್ಕೆ ಭೇಟಿ ನೀಡಿ ಬೆರಳಚ್ಚು ತಜ್ಞ ಹಾಗೂ ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದರು.

ಹಾಲ್ಕುರಿಕೆ ಸಮೀಪದ ಬೆಟ್ಟದ ರೇವಣ್ಣಸಿದ್ದೇಶ್ವರ ದೇವಾಲಯದ ಬೀಗವನ್ನೂ ಕಳ್ಳರು ಗುರುವಾರ ರಾತ್ರಿ ಮುರಿದು ಅಲ್ಲಿನ ಹುಂಡಿಯನ್ನು ಕಳವು ಮಾಡಿದ್ದಾರೆ. ಈ ಪ್ರಕರಣ ಕೂಡ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹಾವು ಕಚ್ಚಿ ಮಹಿಳೆ ಸಾವು
ತಿಪಟೂರು: ಹಾವು ಕಚ್ಚಿ ಮಹಿಳೆ ಮೃತಪಟ್ಟಿರುವ ಘಟನೆ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಠಲಾಪುರ ನಿವಾಸಿ ಶಾರದಮ್ಮ ಹಾವು ಕಡಿತದಿಂದ ಮೃತಪಟ್ಟ ಮಹಿಳೆ.

ಬುಧವಾರ ಸಂಜೆ ತೋಟದಲ್ಲಿ ತೆಂಗಿನ ಸೋಗೆ ಎಳೆಯುತ್ತಿದ್ದಾಗ ಹಾವು ಕಚ್ಚಿದೆ. ಕೂಡಲೇ ಆಕೆಯನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಹೊನ್ನವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.