ADVERTISEMENT

ತಂದೆಯ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿರುವ ಮಕ್ಕಳು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 5:54 IST
Last Updated 20 ಡಿಸೆಂಬರ್ 2017, 5:54 IST

ಕುಣಿಗಲ್: 2018 ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಹಾಲಿ ಶಾಸಕ ಜೆಡಿಎಸ್ ಡಿ.ನಾಗರಾಜಯ್ಯ ಅವರ ಗೆಲುವಿನ ಓಟ ಮುಂದುವರಿಸಲು ಮಕ್ಕಳಾದ ಡಾ.ಬಿ.ಎನ್.ರವಿ ಮತ್ತು ಬಿ.ಎನ್.ಜಗದೀಶ್ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತು ನಿರಂತರ ಕಾರ್ಯಕ್ರಮಗಳನ್ನು ರೂಪಿಸಿ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಡಿ.ನಾಗರಾಜಯ್ಯ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಬೆನ್ನೆಲುಬಾಗಿ ನಿಂತು ಗೆಲುವಿಗೆ ಶ್ರಮಿಸಿದ ಸಹೋದರ ಡಿ.ಕೃಷ್ಣ ಕುಮಾರ್ ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕಾಗಿ ಬಿಜೆಪಿ ಸೇರಿದ್ದಾರೆ. ಎರಡು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತು ಮತ್ತೆ ಮೂರನೆ ಬಾರಿಗೆ ಕಣಕ್ಕೀಳಿದು ಗೆಲವು ಸಾಧಿಸಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ.

ತಾಲ್ಲೂಕಿನ ಹಿರಿಯ ರಾಜಕಾರಣಿ, ಅನುಭವಿ ಶಾಸಕ, ಎಂದು ಹೆಸರಾಗಿರುವ ಡಿ.ನಾಗರಾಜಯ್ಯ ಅವರಿಗೆ 2018ರ ಜೆಡಿಎಸ್ ಟಿಕೆಟ್ ಬಗ್ಗೆ ಪ್ರಾರಂಭದಲ್ಲಿ ಅವರಿಗೆ ವಯಸ್ಸು ಆಗಿದ್ದು, ಮಕ್ಕಳಿಗೆ ಅವಕಾಶ ನೀಡಬಹುದು ಎಂಬ ಗೊಂದಲಗಳಿದ್ದರೂ ಎಲ್ಲವೂ ಬಗೆ ಹರಿದಿದ್ದು ನಾಗರಾಜಯ್ಯ ಅವರೆ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ADVERTISEMENT

ಹಿರಿಯರಾದರೂ ವಯೋಸಹಜ ಬಳಲಿಕೆಯಿಂದಿರುವ ನಾಗರಾಜಯ್ಯ ಅವರ ಬೆಂಬಲಕ್ಕೆ ಮಕ್ಕಳಾದ ಡಾ.ಬಿ.ಎನ್. ರವಿ (ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ) ಮತ್ತು ಬಿ.ಎನ್.ಜಗದೀಶ್ (ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ) ನಿಂತಿದ್ದಾರೆ. ಇಬ್ಬರು ಕಳೆದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸೋತವರಾಗಿದ್ದಾರೆ. ಈಗ ತಂದೆಯ ಗೆಲುವಿಗೆ, ಪಕ್ಷ ಸಂಘಟನೆಗೆ ನಿಂತಿದ್ದಾರೆ.

ತಾಲ್ಲೂಕಿನಲ್ಲಿ 2018ರ ಚುನಾವಣೆಗೆ ಮೊದಲ ಬಾರಿಗೆ ಪರಿವರ್ತನಾ ಯಾತ್ರೆ ಮೂಲಕ ಅಬ್ಬರದ ಪ್ರಚಾರಕ್ಕೆ ನಾಂದಿ ಹಾಡಿತ್ತು.ಪಕ್ಷದ ಪ್ರಮುಖ ನಾಯಕರುಗಳಾದ ಯಡೆಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಸೇರಿದಂತೆ ಇತರ ಗಣ್ಯರು ಭಾಗವಹಿಸಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ನಂತರ ಕಾಂಗ್ರೆಸ್‌ನಿಂದ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸಂಸದರ ಸಂಬಂಧಿ ಡಾ.ರಂಗನಾಥ್ ಅವರನ್ನು ಅಭ್ಯರ್ಥಿಯಾಗಿ ಬಿಂಬಿಸಲು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮಾಡಲಾಯಿತು.

ಬಿಬಿಆರ್ ಬಣವನ್ನು ಬದಿಗಿಟ್ಟು ನಡೆದ ಕಾರ್ಯಕ್ರಮದಲ್ಲಿ ಡಾ.ಜಿ.ಪರಮೇಶ್ವರ್, ಸಚಿವರಾದ ಜಯಚಂದ್ರ, ಡಿ.ಕೆ.ಶಿವಕುಮಾರ್ ಇತರರು ಬಂದು ಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡಿ ಪಕ್ಷ ಸಂಘಟನೆ ಮಾಡಿ, ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಎಂದು ಕರೆಕೊಟ್ಟರು. ಸಮಾವೇಶದ ಯಶಸ್ಸಿನಿಂದ ಬೀಗುತ್ತಿರುವ ಸಂಸದ ಬಣದವರು ಡಾ.ರಂಗನಾಥ್ ಅಭ್ಯರ್ಥಿ ಎಂದು ಸಂಭ್ರಮಿಸುತ್ತಿದ್ದಾರೆ.

ಜೆಡಿಎಸ್ ಸದೃಢ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಕಾರಣ, ತಾಲ್ಲೂಕು ಮಟ್ಟದಲ್ಲಿ ಬೃಹತ್ ಕಾರ್ಯಕ್ರಮ ಮಾಡದಿದ್ದರೂ ಶಾಸಕರ ಪುತ್ರರು ಈಗಾಗಲೇ ಹೋಬಳಿವಾರು ಮುಖಂಡರ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅಸಮಾಧಾನಗೊಂಡಿರುವಹಿರಿಯ ಕಿರಿಯ ಮುಖಂಡರನ್ನು ಕಲೆ ಹಾಕಿ ಚರ್ಚೆ ಮಾಡಿ ಓಲೈಸುತ್ತಿದ್ದಾರೆ.

ಹೋಬಳಿವಾರು ಮುಖಂಡರ ಸಭೆಗಳಲ್ಲಿ ನಾಗರಾಜಯ್ಯ ಕಾಲದ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ನೀಡುತ್ತಿರುವುದ್ದಲ್ಲದೆ ಬಿಜೆಪಿ ಮುಖಂಡ (ತಮ್ಮ ಚಿಕ್ಕಪ್ಪ) ಮತ್ತು ಸಂಸದರ ಬಣದ ಕಾರ್ಯವೈಖರಿ ಬಗ್ಗೆ ಟೀಕೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಹೋಬಳಿವಾರು ಸಂಘಟನೆ ಸಭೆಗಳ ಬಳಿಕ ತಾಲ್ಲೂಕು ಮಟ್ಟದ ಸಮಾವೇಶ ಮಾಡುವುದಾಗಿ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ, ಪ್ರಾದೇಶಿಕ ಪಕ್ಷದಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ, ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರಬೇಕಾದರೆ ಕುಣಿಗಲ್ ಕ್ಷೇತ್ರದಲ್ಲಿಯೂ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಬಿ.ಎನ್.ಜಗದೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.