ADVERTISEMENT

ತಿಮ್ಲಾಪುರ, ಸಿ.ಎನ್.ದುರ್ಗದಲ್ಲಿ ಔಷಧಿ ವನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 9:42 IST
Last Updated 1 ಆಗಸ್ಟ್ 2013, 9:42 IST

ತುಮಕೂರು: ಔಷಧಿ ಗಿಡಮೂಲಿಕೆಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರ ಆರಂಭಿಸಿರುವ `ಔಷಧಿ ವನ ಸಂರಕ್ಷಣಾ' ಯೋಜನೆಯು ಮಧುಗಿರಿ, ಕೊರಟಗೆರೆಯಲ್ಲಿ ಕಾರ್ಯಾರಂಭ ಮಾಡಿದೆ.

2012-13ರಲ್ಲಿ ಆರಂಭಗೊಂಡ ಮೂರು ವರ್ಷಗಳ ಈ ಯೋಜನೆ 2014-15ಕ್ಕೆ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರ ಯೋಜನೆಗೆ ರೂ. 60 ಲಕ್ಷ ಅನುದಾನ ಮೀಸಲಿರಿಸಿದೆ. ರಕ್ಷಿತಾರಣ್ಯದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಗಿಡಮೂಲಿಕೆಗಳನ್ನು ಸಂರಕ್ಷಿಸಿ, ಔಷಧಿ ತಯಾರಿಕೆಗೆ ಬಳಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಮಧುಗಿರಿ ತಾಲ್ಲೂಕಿನ ತಿಮ್ಲಾಪುರ ಹಾಗೂ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಒಟ್ಟು 400 ಎಕರೆ ಪ್ರದೇಶದಲ್ಲಿ ಔಷಧಿ ವನ ಸಂರಕ್ಷಣಾ ಯೋಜನೆ ಆರಂಭಿಸಲಾಗಿದೆ. ಯೋಜನೆಗೆ ಮೊದಲ ಕಂತಿನಲ್ಲಿ ರೂ. 24 ಲಕ್ಷ ಬಿಡುಗಡೆಯಾಗಿದೆ. ಅನುದಾನವನ್ನು ಔಷಧಿ ವನದ ಸಂರಕ್ಷಣೆಗೆ ಬಳಸಲಾಗುತ್ತದೆ. ಅರಣ್ಯ ಕಾವಲು ಸಿಬ್ಬಂದಿ, ತಂತಿ ಬೇಲಿ ನಿರ್ಮಾಣ, ಗ್ರಾಮೀಣ ಅರಣ್ಯ ಸಮಿತಿಗಳ ನೇಮಕಕ್ಕೆ ಈ ಹಣ ವಿನಿಯೋಗಿಸಲಾಗುತ್ತದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ತಿಳಿಸಿದರು.

ಔಷಧಿ ಸಂರಕ್ಷಣಾ ವನದಲ್ಲಿ ಸಾರ್ವಜನಿಕರಿಗೆ ನಿಷೇಧ ಇರುವುದರಿಂದ ಮಣ್ಣು, ನೀರಿನ ಸಂರಕ್ಷಣೆಯೂ ಸಾಧ್ಯ. ಇದರಿಂದ ಗಿಡಮೂಲಿಕೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಔಷಧಿಯ ಗಿಡಮೂಲಿಕೆಗಳ ಅಧ್ಯಯನದ ಸಲುವಾಗಿ ವಿದ್ಯಾರ್ಥಿಗಳು, ಸಂಶೋಧಕರಿಗೆ ಮಾತ್ರ ಪ್ರವೇಶ ಒದಗಿಸಲಾಗಿದೆ. ರಾಜ್ಯದ 33,365 ಹೆಕ್ಟೇರ್ (ಶೇ 18.4ರಷ್ಟು) ಅರಣ್ಯ ಪ್ರದೇಶದಲ್ಲಿ ಸಹಸ್ರಾರು ಸಂಖ್ಯೆಯ ಔಷಧಿ ಗುಣವುಳ್ಳ ಗಿಡಮೂಲಿಕೆಗಳಿವೆ. ಅದರಲ್ಲೂ ಪಶ್ಚಿಮ ಘಟ್ಟ ಹಾಗೂ ಪೂರ್ವಘಟ್ಟಗಳಲ್ಲೇ 3500-4500ರಷ್ಟು ವಿವಿಧ ಪ್ರಬೇಧದ ಗಿಡಮೂಲಿಕೆಗಳಿವೆ. ಔಷಧಿವನದ ಉಸ್ತುವಾರಿಯನ್ನು ಗ್ರಾಮೀಣ ಅರಣ್ಯ ಸಮಿತಿಗಳು ನಿರ್ವಹಿಸಲಿದ್ದು, ಮೇಲ್ವಿಚಾರಣೆಯನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ.

ಔಷಧಿ ಗಿಡಮೂಲಿಕೆಗಳ ಮಾರಾಟದಿಂದ ಬರುವ ಆದಾಯದಲ್ಲಿ ಶೇ 50ರಷ್ಟು ಗ್ರಾಮೀಣ ಅರಣ್ಯ ಸಮಿತಿಗಳಿಗೆ, ಉಳಿದ ಶೇ 50ರಷ್ಟು ಆದಾಯ ಸರ್ಕಾರಕ್ಕೆ ಸೇರಲಿದೆ. ಗ್ರಾಮೀಣ ಅರಣ್ಯ ಸಮಿತಿಗೆ ಬರುವ ಶೇ 50ರಷ್ಟು ಆದಾಯದಲ್ಲಿ ಶೇ 25ನ್ನು ವನ ಪೋಷಣೆಗೆ, ಉಳಿದ ಶೇ 25ರಷ್ಟನ್ನು ಸದಸ್ಯರಿಗೆ ಲಾಭಾಂಶ ರೂಪದಲ್ಲಿ ನೀಡಲಾಗುತ್ತದೆ.

ಸಿದ್ದರಬೆಟ್ಟಕ್ಕೆ ಸಿಗದ ಮಾನ್ಯತೆ: ಸಿದ್ದರಬೆಟ್ಟವನ್ನು ಔಷಧಿ ವನ ಸಂರಕ್ಷಣಾ ಯೋಜನೆಯಡಿ ಸೇರಿಸಬೇಕೆಂಬ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಬೆಟ್ಟದಲ್ಲಿ ಸಿಗುವ ಗಿಡಮೂಲಿಕೆಗಳ ಸಂರಕ್ಷಣೆಗೆ ಕೋಟ್ಯಂತರ ರೂಪಾಯಿ ಹಣದ ಅವಶ್ಯಕತೆ ಇರುವುದರಿಂದ ಅನುದಾನ ನೀಡಲು ಸರ್ಕಾರ ಹಿಂದೇಟು ಹಾಕಿದೆ.

ಸಿದ್ದರಬೆಟ್ಟವನ್ನು ಔಷಧಿ ವನವನ್ನಾಗಿ ಮಾಡುವ ಯೋಜನೆಗೆ ರೂ. 200 ಕೋಟಿ ಅಗತ್ಯವಿದೆ. ಆದರೆ ಇಷ್ಟೊಂದು ಅನುದಾನ ನೀಡಲು ರಾಜ್ಯ, ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಹಾಗಾಗಿ ಯೋಜನೆಗೆ ಅನುಮೋದನೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಗಿಡಮೂಲಿಕೆ ಪ್ರಬೇಧಗಳು: ಮಧುನಾಶಿನಿ, ಆಡುಮುಟ್ಟದ ಬಳ್ಳಿ, ಬೇಲಾ, ಗುಲಗಂಜಿ, ಕಕ್ಕೆ, ಸೊಗಡೆ ಬಾರು, ಸೀತಾಫಲ, ಶ್ರೀಗಂಧ, ಅಥಿ, ಥಾರೆ, ಜ್ಯೋತಿಸ್ಮೃತಿ, ಶಥಾವರಿ, ಹಾಲೆ, ಮಾಕಲಿ ಬೇರು, ಅಮೃತಬಳ್ಳಿ, ಎಕ್ಕಾ, ಮುತುಗಾ, ಮಂಗರಬಳ್ಳಿ, ಲಂಟಾನ, ಲೋಳೆಸರ, ತುಳಸಿ, ನೆಲಬೇವು, ಲಕ್ಕಿಸೊಪ್ಪು, ಕಾರೆ ಗಿಡ, ಜಾಲಾರಿ, ಗೋಣಿಮರ, ತಂಗಡಿ, ತುಂಬೆ, ಬಂದ್ರೆ ಸೊಪ್ಪು, ಬಂಬೂ, ಬಾವು, ಕಲ್ನಾರು, ನೆಲತಂಗಡಿ, ಉಥ್ರಾಣಿ, ದಾಗಡಿ ಬಳ್ಳಿ, ನೆಗ್ಗಿಲಮುಳ್ಳು ಸೇರಿದಂತೆ 50 ಪ್ರಬೇಧದ ಗಿಡಮೂಲಿಕೆಗಳು ತಿಮ್ಲಾಪುರ ಹಾಗೂ ಚನ್ನರಾಯನದುರ್ಗ ಅರಣ್ಯದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.