ADVERTISEMENT

ತುರುವೇಕೆರೆ: ಸತ್ಯ ಗಣಪತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:56 IST
Last Updated 26 ಡಿಸೆಂಬರ್ 2012, 5:56 IST

ತುರುವೇಕೆರೆ: ಪಟ್ಟಣದ ವೈ.ಟಿ.ರಸ್ತೆಯ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಸೆಪ್ಟೆಂಬರ್‌ನಲ್ಲಿ ಪ್ರತಿಷ್ಠಾಪಿಸಿದ್ದ ಸತ್ಯಗಣಪತಿ ಸ್ವಾಮಿಯವರ ಉತ್ಸವ ಸೋಮವಾರ ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ನೆರವೇರಿತು.

ರಾತ್ರಿ 9.30ಕ್ಕೆ ಆಸ್ಥಾನ ಮಂಟಪದಿಂದ ದೀಪಾಲಂಕೃತಗೊಂಡ ಭವ್ಯವಾದ ಪುಷ್ಪಮಂಟಪಕ್ಕೆ ಸತ್ಯಗಣಪತಿಯ ರಥಾರೋಹಣವಾದ ಕೂಡಲೇ ವಡೋರಹಳ್ಳಿ ಪರಮೇಶಾಚಾರ್ ತಂಡದವರ ಅಮೋಘ ಮದ್ದಿನ ಪ್ರದರ್ಶನ ಅರ್ಧಗಂಟೆಗೂ ಹೆಚ್ಚು ಕಾಲ ಆಗಸದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು. ಹಲ ಜನಪದ ಕಲಾ ತಂಡಗಳು ಉತ್ಸವಕ್ಕೆ ವಿಶೇಷ ಕಳೆ ತಂದು ಕೊಟ್ಟವು.

ಉತ್ಸವದುದ್ದಕ್ಕೂ ಪಾಲ್ಗೊಂಡ ಡೆಂಕಣಿಕೋಟೆ ಸಿದ್ದಲಿಂಗಯ್ಯನವರ ಶಿವಶಕ್ತಿ ಕೀಲುಕುದುರೆ ನೃತ್ಯ, ನಯ್ಯೊಂಡಿ ನೃತ್ಯ, ಕರಗ, ಗಣೇಶನ ಕುಣಿತ, ನವಿಲು ಕುಣಿತ, ಬಸವನ ಕುಣಿತ, ಗರುಡ ಕುಣಿತ, ಕಾವಡಿ, ವೀರಗಾಸೆ, ಪಂಡರಿ ಭಜನೆ, ಸೋಮನ ಕುಣಿತ, ಕೋಲಾಟ ಮೊದಲಾದ ಜನಪದ ಪ್ರದರ್ಶನ ನೆರೆದಿದ್ದ ಜನರ ಮನಸೂರೆಗೊಂಡವು. ಚಿತ್ರದುರ್ಗ ಹಾಗೂ ಪತ್ರೆಮತ್ತಿಘಟ್ಟದ ಲಿಂಗದವೀರರ ಕುಣಿತ ಆಕರ್ಷಕವೆನಿಸಿತ್ತು.

ಪ್ರತಿ ವರ್ಷದಂತೆ ಜಾತ್ರೆ ಅಂಗವಾಗಿ ಹಾಕಿದ್ದ ಹಲ ಮೋಜಿನ ಆಟಗಳು, ಬೀದಿ ಬದಿ ಅಂಗಡಿಗಳು ವಿಶೇಷ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಆದಾಗ್ಯೂ ಸಾವಿರಾರು ಜನ ಈ ಬಾರಿ ಉತ್ಸವದ ಜೊತೆ ಜೊತೆಯಾಗಿ ಹೆಜ್ಜೆ ಹಾಕಿ ಜನಪದ ತಂಡಗಳ ಸೊಗಡನ್ನು ಸವಿದದ್ದು ಸದಭಿರುಚಿಯ ರಸಾಸ್ವಾದವೆನಿಸಿತ್ತು. ಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಹಾಕಿದ್ದ ಪುಸ್ತಕದ ಮಳಿಗೆಯಲ್ಲಿ ಜನ ಗಿಜಿಗುಟ್ಟುವಂತೆ ನೆರೆದಿದ್ದರು. ನೂರಾರು ಜನ ಜಾತ್ರೆಯಲ್ಲೂ ಪುಸ್ತಕ ಕೊಳ್ಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ರಾತ್ರಿಯಿಡೀ ಪಟ್ಟಣದಲ್ಲಿ ಸಾಗಿದ ಉತ್ಸವ ಮಂಗಳವಾರ ಬೆಳಿಗ್ಗೆ ಪಟ್ಟಣದ ಹೊರವಲಯದ ಹೇಮಾವತಿ ಬಡಾವಣೆ, ಶಕ್ತಿನಗರ, ಹೊರಪೇಟೆಯಲ್ಲಿ ಸಂಚರಿಸಿತು. ಮಂಗಳವಾರ ಸಂಜೆ ಕೆರೆಯಲ್ಲಿ ತೆಪ್ಪೋತ್ಸವ ಏರ್ಪಡಿಸಿ ವಿಸರ್ಜಿಸಲಾಯಿತು. ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಕಾರ್ಯದರ್ಶಿ ಟಿ.ಎನ್.ನಾಗರಾಜ್, ಸಹ ಕಾರ್ಯದರ್ಶಿ ಟಿ.ಎ.ನಟರಾಜ್, ರವಿರಾಜು, ರಾಜು, ಶಶಿ, ನರಸಿಂಹಯ್ಯ ನೇತೃತ್ವದಲ್ಲಿ ನೂರಾರು ಭಕ್ತರು ಉತ್ಸವದ ನಿರ್ವಹಣೆ ಮಾಡಿದರು.

ಸತ್ಯಗಣಪತಿ ಉತ್ಸವದ ಜತೆ ವಿಶಿಷ್ಟ ರೀತಿಯಲ್ಲಿ ಮುತ್ತಿನಲ್ಲಿ ಅಲಂಕೃತಗೊಂಡಿದ್ದ ಗ್ರಾಮದೇವತೆ ಉಡುಸಲಮ್ಮ ಉತ್ಸವ ಜಾತ್ರೆಗೆ ವಿಶೇಷ ಕಳೆ ಕಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.