ADVERTISEMENT

ತುರುವೇಕೆರೆ: ಹೇಮಾವತಿ ನೀರು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:42 IST
Last Updated 20 ಸೆಪ್ಟೆಂಬರ್ 2013, 8:42 IST

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಮೂಲಕ ಹಾದು ಹೋಗುವ ಡಿ.8 ಮತ್ತು ಡಿ.10 ನಾಲೆಗಳಲ್ಲಿ ಮಂಗಳವಾರದಿಂದ ಹರಿ­ಸು­ತ್ತಿದ್ದ ನೀರನ್ನು ಗುರುವಾರ ಸ್ಥಗಿತ­ಗೊಳಿಸಲಾಯಿತು. ಆಕ್ರೋಶ­ಗೊಂಡ ನೂರಾರು ರೈತರು ನೀರು ನಿಲ್ಲಿಸ­ಬಾ­ರದೆಂದು ಒತ್ತಾಯಿಸಿ ಮಿನಿ ವಿಧಾನ­ಸೌಧದ ಮುಂದೆ ಧರಣಿ ನಡೆಸಿದರು.

ಹೇಮಾವತಿ ನಾಲಾ ವಲಯದ ಎಂಜಿನಿಯರ್‌ಗಳು ಪೊಲೀಸರ ಬೆಂಗಾ­ವಲಿ­ನೊಂದಿಗೆ ದುಂಡ ಅಮ್ಮಸಂದ್ರ ಹಾಗೂ ಎ.ಹೊಸಹಳ್ಳಿ ಸಮೀಪದ ನಾಲೆಗಳ ತೂಬು ಮುಚ್ಚಿ ನಾಲೆಯಲ್ಲಿ ಹರಿಯತ್ತಿದ್ದ ನೀರು ನಿಲ್ಲಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶ­ಗೊಂಡ ನೂರಾರು ರೈತರು ಮಿನಿ ವಿಧಾನಸೌಧದ ಮುಂದೆ ಜಮಾಯಿಸಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ನೀರು ಬಿಡುವಂತೆ ಒತ್ತಾಯಿಸಿ ಧರಣಿ ಕೂತರು.
ಸ್ಥಳಕ್ಕೆ ಧಾವಿಸಿದ ಎಂ.ಟಿ.ಕೃಷ್ಣಪ್ಪ ನಾಲೆಗಳಲ್ಲಿ ಹರಿಯುತ್ತಿದ್ದ ನೀರನ್ನು ನಿಲ್ಲಿಸಿದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿ­ಗಳು ವೇಳಾಪಟ್ಟಿ ಬದಲಾಗಿದೆ ಎಂದು  ಸಮಜಾಯಿಷಿ ನೀಡಲು ಹೋದಾಗ ಸಿಟ್ಟಿಗೆದ್ದ ಶಾಸಕರು ‘ನನ್ನ ಗಮನಕ್ಕೂ ತರದೆ ಹೇಗೆ ವೇಳಾಪಟ್ಟಿ ಬದಲಿಸಿದಿರಿ? ಐಸಿಸಿ ಸಭೆಗೂ ಆಹ್ವಾನ ನೀಡುತ್ತಿಲ್ಲ. ಸರ್ಕಾರದ ಕೈಗೊಂಬೆಗಳಾಗಿ ಜನರ ಹಿತಾಸಕ್ತಿಯನ್ನು ನಿರ್ಲಕ್ಷಿಸುತ್ತಿದ್ದೀರಿ’ ಎಂದು ಹರಿಹಾಯ್ದರು.

ಅಧಿಕಾರಿಗಳು ಅಕ್ಟೋಬರ್ 6ರಿಂದ 15 ದಿನಗಳ ಕಾಲ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಆಶ್ವಾಸನೆ ನೀಡಿದಾಗ ರೈತರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಕೂಡಲೇ ನೀರು ಬಿಡಬೇಕೆಂದು ಹಠ ಹಿಡಿದರು. ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಸ್.ರುದ್ರಪ್ಪ ಪ್ರತಿಭಟ­ನಾಕಾರ­ರೊಂ­ದಿಗೆ ಸಂಧಾನ ನಡೆಸಿ ಅಧಿಕಾರಿಗಳು 15 ದಿನದ ಬದಲು ಅಕ್ಟೋಬರ್ ತಿಂಗಳು ಪೂರಾ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಬೇಕು ಎಂಬ ಷರತ್ತು ಮುಂದಿಟ್ಟರು. ಅಧಿಕಾರಿಗಳು ಈ ಸಂಧಾನ ಸೂತ್ರಕ್ಕೆ ಒಪ್ಪಿಗೆ ಕೊಟ್ಟ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಧರಣಿ ಹಿಂದೆ ಪಡೆದರು.

ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವ­ನಾಥ್, ಬಿಜೆಪಿ ಮುಖಂಡ ಬೋರೇ­ಗೌಡ, ರೈತ ಮುಖಂಡ ಲಕ್ಷ್ಮಣಯ್ಯ, ರಾಮಚಂದ್ರಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.