ADVERTISEMENT

ತೆರಿಗೆ ಹೆಚ್ಚಳ: ಸದಸ್ಯರ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 8:20 IST
Last Updated 9 ಸೆಪ್ಟೆಂಬರ್ 2011, 8:20 IST

ಶಿರಾ: ಈಗಾಗಲೇ ನಗರದ ಜನತೆಗೆ ವಿಧಿಸಿರುವ ವಿವಿಧ ತೆರಿಗೆಗಳ ಹೊರೆಯೇ ಭಾರವಾಗಿದ್ದು, ಮುಂದಿನ ಮಾರ್ಚ್‌ವರೆಗೆ ಯಾವುದೇ ತೆರಿಗೆ ಏರಿಕೆ ಮಾಡಬಾರದು ಎಂದು ನಗರಸಭೆ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದರು.

ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ 2011- 12ನೇ ಸಾಲಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪರಿಷ್ಕರಿಸಿ ಹೆಚ್ಚಿಸುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯರು, 2009- 10ನೇ ಸಾಲಿನಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಸದಸ್ಯರ ಗಮನಕ್ಕೆ ತಾರದೆ ಶೇ. 40ರಷ್ಟು ಹೆಚ್ಚಳ ಮಾಡಲಾಗಿದೆ. ಕುಡಿವ ನೀರಿಗೆ ಮಾಸಿಕ 75 ರೂ. ತೆರಿಗೆ ಹಾಕಲಾಗುತ್ತಿದೆ ಎಂದು ಸದಸ್ಯರಾದ ಪಾರ್ವತಮ್ಮ ದಾಸಪ್ಪ, ಆರ್.ರಾಮು, ಎಂ.ಎನ್.ರಾಜು, ರಾಜು, ಸರೋಜಮ್ಮ, ಶ್ರಿಧರ್ ವಿರೋಧಿಸಿದರು.

ಇದುವರೆಗೂ ವಾಣಿಜ್ಯ ಉದ್ದೇಶಿತ ನೀರಿನ ಸಂಪರ್ಕ ಗುರುತಿಸಿಲ್ಲ. ಹೋಟೆಲ್, ಲಾಡ್ಜ್, ವಾಟರ್ ಸರ್ವಿಸ್ ಸ್ಟೇಷನ್ ಮುಂತಾದ ವಾಣಿಜ್ಯ ಉದ್ದೇಶಿತ ನೀರಿನ ಸಂಪರ್ಕ ಗುರುತಿಸಿ ಪ್ರತ್ಯೇಕ ತೆರಿಗೆ ವಿಧಿಸುವುದಾಗಿ ಪೌರಾಯುಕ್ತ ರಂಗಸ್ವಾಮಿ ಹೇಳಿದರು.

ಗುತ್ತಿಗೆದಾರರು ಪೌರಕಾರ್ಮಿಕರಿಗೆ ಕನಿಷ್ಠ ವೇತನ ರೂ. 164 ನೀಡದೆ ಕೇವಲ 110 ನೀಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಧ್ಯಕ್ಷ ಟಿ.ರಘು ಹೇಳಿದರು.

ಪೌರಕಾರ್ಮಿಕರಿಂದ ದೂರು ಬಂದರೆ ಪರಿಶೀಲಿಸುವುದಾಗಿ ಪೌರಾಯುಕ್ತ ಹೇಳಿದರು.

ಸದಸ್ಯ ಆರ್.ಉಗ್ರೇಶ್ ಮಾತನಾಡಿ, ಕುಂದುಕೊರತೆ ವಿಭಾಗದ ನೌಕರರು ದಿನದ 24 ಗಂಟೆ ಇರಬೇಕು ಎಂಬ ನಿಯಮವಿದೆ. ಆದರೆ ಇರುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.

ಹೆಲ್ಪ್‌ಲೈನ್ ಸೌಲಭ್ಯ ಇರುವ ಕಾರಣ ದಿನದ 24 ಗಂಟೆಯೂ ನೌಕರರು ಇರಬೇಕಾಗುತ್ತದೆ. ಹೀಗಾಗಿ ರಾತ್ರಿ ಬೇರೊಬ್ಬರು ಬರುತ್ತಾರೆ ಎಂದು ಪೌರಾಯುಕ್ತರು ಸಮಜಾಯಿಸಿ ನೀಡಿದರು.

ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗುವುದನ್ನು ಕಡ್ಡಾಯ ಗೊಳಿಸಲು ತಮ್ಮ ಹೆಬ್ಬೆಟ್ಟು ಹೊತ್ತುವ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಅಲ್ಲದೆ ಸಿಸಿ ಕ್ಯಾಮರ ಅಳವಡಿಸಲಾ ಗುತ್ತಿದೆ ಎಂದು ಹೇಳಿದರು. ಅಧ್ಯಕ್ಷ ಟಿ.ರಘು ಅಧ್ಯಕ್ಷತೆ ವಹಿಸಿದ್ದರು.

ಜಾತ್ಯತೀತ ಸ್ಮಶಾನಕ್ಕೆ ಸಲಹೆ: ನಗರದ ಸಮೀಪ ಹೈಟೆಕ್ ಜಾತ್ಯತೀತ ಸ್ಮಶಾನ ನಿರ್ಮಿಸುವಂತೆ ಶಾಸಕ ಟಿ.ಬಿ.ಜಯಚಂದ್ರ ನಗರಸಭೆಗೆ ಸೂಚಿಸಿದರು.

ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆ ಹುಲಿಕೋಟಿಯಲ್ಲಿ ಎಲ್ಲ ಜಾತಿ, ಧರ್ಮದ ಮೃತರನ್ನು ಸಮಾಧಿ ಮಾಡಲಾಗುತ್ತದೆ. ಅಂಥದ್ದೇ ಮಾದರಿಯ ಸ್ಮಶಾನ ನಿರ್ಮಿಸಬೇಕು. ಸಾಧ್ಯವಾದರೆ ನಗರಸಭೆ ಸದಸ್ಯರು ಅಲ್ಲಿಗೆ ಒಮ್ಮೆ ಭೇಟಿ ನೀಡಿ ಬನ್ನಿ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.