ADVERTISEMENT

ತ್ರಿಶಂಕು ಸ್ಥಿತಿಯಲ್ಲಿ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 9:40 IST
Last Updated 10 ಅಕ್ಟೋಬರ್ 2011, 9:40 IST

ತುಮಕೂರು: ನಗರದ ಸಿದ್ದಿವಿನಾಯಕ ತರಕಾರಿ ಮಾರುಕಟ್ಟೆ ಇತ್ತ ಸ್ಥಳಾಂತರವೂ ಆಗದೆ, ಅತ್ತ ಮೂಲ ಸೌಲಭ್ಯವೂ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿಯೇ ಮುಂದುವರಿದಿದೆ. ಮಾರುಕಟ್ಟೆ ಸಮಸ್ಯೆ ಆಗರವಾಗಿದ್ದು, ಸಾರ್ವಜನಿಕರು ಒಳಗೆ ಕಾಲಿಡಲು ಯೋಚಿಸಬೇಕಾದ ಸ್ಥಿತಿ ಇದೆ.

ನಗರದ ಕೊರಟಗೆರೆ ರಸ್ತೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗಿದೆ. ಆದರೆ ಇನ್ನೂ ಕೆಲವು ಕಾಮಗಾರಿ ಬಾಕಿ ಇರುವುದರಿಂದ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ. ಈ ಕಾರಣಕ್ಕಾಗಿ ಸಿದ್ದಿವಿನಾಯಕ ಮಾರುಕಟ್ಟೆಗೆ ಮೂಲಸೌಲಭ್ಯ ಕಲ್ಪಸಲು ಸಹ ಸಾಧ್ಯವಾಗುತ್ತಿಲ್ಲ.

ಮಾರುಕಟ್ಟೆ ಸಂಪೂರ್ಣ ಗಲೀಜಾಗಿದ್ದು, ಕೊಳೆತ ಹಣ್ಣು ಮತ್ತು ತರಕಾರಿ ವಾಸನೆ ಮೂಗಿಗೆ ಬಡಿಯುತ್ತದೆ. ಅಲ್ಲಿನ ವ್ಯಾಪಾರಿಗಳು, ಗ್ರಾಹಕರು ಮತ್ತು ಮಾರಾಟ ಮಾಡಲು ಬರುವ ರೈತರಿಗೆ ನಗರ ಪಾಲಿಕೆ ಮೂಲಸೌಲಭ್ಯ ಕಲ್ಪಿಸಲು ಇದುವರೆಗೆ ಮುಂದಾಗಿಲ್ಲ.

ವ್ಯಾಪಾರಿಗಳು ಸಹ ಮಾರುಕಟ್ಟೆ ಸ್ವಚ್ಛತೆ ಕಾಪಾಡಲು ಮುಂದಾಗುತ್ತಿಲ್ಲ. ಬೇಡವಾದ, ಕೊಳೆತ ತರಕಾರಿ, ಹಣ್ಣು, ಹೂವನ್ನು ಅಲ್ಲಿಯೇ ಹಾಕುತ್ತಾರೆ. ಅದೆಲ್ಲಾ ಸರಿಯಾದ ಸಮಯಕ್ಕೆ ಸಾಗಣೆ ಆಗದೆ ಅಲ್ಲಿಯೇ ಕೊಳೆಯುತ್ತದೆ. ಅದೇ ದುರ್ವಾಸನೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಗ್ರಾಹಕರಿಗೆ ಈ ವಾತಾವರಣ ಅಸಹ್ಯಕರವಾಗಿ ಕಾಣುತ್ತದೆ.

ನಗರಪಾಲಿಕೆ ಮಾರುಕಟ್ಟೆ ಸ್ವಚ್ಛತೆ ಕಾಪಾಡಲು ಮುಂದಾಗುತ್ತಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದರೆ ಕಸವನ್ನು ಹೊರಗೆ ನಿರ್ದಿಷ್ಟ ಸ್ಥಳದಲ್ಲಿ ಹಾಕುವ ಕೆಲಸವನ್ನು ವ್ಯಾಪಾರಿಗಳು ಮಾಡುತ್ತಿಲ್ಲ ಎಂದು ಗ್ರಾಹಕರು ದೂರುತ್ತಾರೆ.

ಮಳೆ ಬಂದರೆ ಮಾರುಕಟ್ಟೆ ಒಳಗೆ ಕಾಲಿಡಲು ಸಾಧ್ಯವಿಲ್ಲ. ಇಡೀ ವಾತಾವರಣ ಕೆಸರು ಗದ್ದೆಯಂತಾಗಿರುತ್ತದೆ. ಮಳೆ ನೀರನ್ನು ಹೊರ ಹಾಕಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಸಮರ್ಪಕ ಮಳಿಗೆಗಳು ಸಹ ಇಲ್ಲ. ಪ್ರತಿ ಬುಧವಾರ ಮಾರುಕಟ್ಟೆಗೆ ರಜೆ ಇದ್ದು, ಈ ಸಂದರ್ಭದಲ್ಲಾದರೂ ಸ್ವಚ್ಛಗೊಳಿಸುವ ಕಾರ್ಯ ನಿಯಮಿತವಾಗಿ ನಡೆಯುತ್ತಿಲ್ಲ.

ಆದರೆ ನಗರದ ಬಡಾವಣೆಗಳ ತರಕಾರಿ ಅಂಗಡಿಗಳಲ್ಲಿ ಒಂದಕ್ಕೆ ಎರಡು ಪಟ್ಟು ಬೆಲೆಗೆ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವುದರಿಂದ ಗ್ರಾಹಕರು ಅನಿವಾರ್ಯವಾಗಿ ಮಾರುಕಟ್ಟೆ ಒಳಗೆ ಕಾಲಿಡುತ್ತಿದ್ದಾರೆ. ಆದರೆ ಕೊರಟಗೆರೆ ರಸ್ತೆಯ ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡರೆ ಸಾಮಾನ್ಯ ಗ್ರಾಹಕರಿಗೆ ಹೋಗಿಬರಲು ಸಹ ಸಮಸ್ಯೆಯಾಗುತ್ತದೆ.

ಮಧ್ಯವರ್ತಿಗಳ ಹಾವಳಿ: ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ ಎಂದು ರೈತರು ದೂರುತ್ತಾರೆ. ರೈತರು ತಾವು ಬೆಳೆದ ಹಣ್ಣು, ತರಕಾರಿ ಮತ್ತು ಹೂವನ್ನು ಇಲ್ಲಿ ಹರಾಜು ಮಾಡ ಲಾಗುತ್ತದೆ.

ಮಳಿಗೆಗಳ ಮಾಲೀಕರಿಗೆ ಶೇ.10 ಕಮೀಷನ್ ಕೊಡಬೇಕು. ಅಲ್ಲದೆ ಸಾಗಣೆ ವೆಚ್ಚ, ಹೊತ್ತು ತರುವ ಕೂಲಿ ಎಲ್ಲ ಸೇರಿ ರೈತರಿಗೆ ವಿಪರೀತ ಖರ್ಚು ಬರುತ್ತದೆ. ಆದರೆ ವ್ಯಾಪಾರಿಗಳು ಒಗ್ಗಟ್ಟಾಗಿ ಕಡಿಮೆ ಬೆಲೆಗೆ ಹರಾಜು ಕೂಗುತ್ತಾರೆ. ನಂತರ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ತರಕಾರಿ, ಹೂವು, ಹಣ್ಣು ಇದೆಲ್ಲಾ ಬೇಗ ಕೆಟ್ಟು ಹೋಗುವುದರಿಂದ ಬೆಲೆ ಬಾರದಿದ್ದರೆ ರೈತರು ಅದನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಅಲ್ಲದೆ ಶೀತಲ ಗೃಹದ ವ್ಯವಸ್ಥೆ ಸಹ ಇಲ್ಲ. ಬಂದಷ್ಟು ಬೆಲೆಗೆ ಮಾರಿ ಹೋಗಬೇಕಾದ ದುಃಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.