ADVERTISEMENT

ದಂಡಿನ ಮಾರಮ್ಮನ ಕೊಂಡ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 7:51 IST
Last Updated 10 ಮಾರ್ಚ್ 2018, 7:51 IST
ಮಧುಗಿರಿಯಲ್ಲಿ ನಡೆದ ದಂಡಿನ ಮಾರಮ್ಮ ದೇವಿಯ ಜಾತ್ರೆಯ ಅಂಗವಾಗಿ ಅಗ್ನಿಕುಂಡ ಹಾಯ್ದರು
ಮಧುಗಿರಿಯಲ್ಲಿ ನಡೆದ ದಂಡಿನ ಮಾರಮ್ಮ ದೇವಿಯ ಜಾತ್ರೆಯ ಅಂಗವಾಗಿ ಅಗ್ನಿಕುಂಡ ಹಾಯ್ದರು   

ಮಧುಗಿರಿ: ದಂಡಿನ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಬೆಳಿಗ್ಗೆ ನಡೆದ ಅಗ್ನಿಕುಂಡವನ್ನು ಸಾವಿರಾರು ಭಕ್ತರು ಹಾಯುವ ಮೂಲಕ ಹರಕೆ ಸಲ್ಲಿಸಿದರು.

ರಾಜ್ಯ ಹಾಗೂ ನೆರೆ ರಾಜ್ಯ ಸೀಮಾಂಧ್ರ ಪ್ರದೇಶದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆರತಿ ತಲೆಯ ಮೇಲೆ ಹೊತ್ತು ಅಗ್ನಿಕುಂಡ ಹಾಯುವ ಮೂಲಕ ತಮ್ಮ ಇಷ್ಟಾರ್ಥ ಈಡೇರಲಿ ಎಂದು ಹರಕೆ ಕಟ್ಟಿಕೊಳ್ಳುತ್ತಿದ್ದರು.

ದೇವಿ ಮಡಿಲಿಗೆ ಕೆಂಡ ಕಟ್ಟಿದ ನಂತರ ದೇವಿಯನ್ನು ಹೊತ್ತವರು ಹಾಗೂ ಅರ್ಚಕರು ಮೊದಲಿಗೆ ಅಗ್ನಿಕುಂಡ ಹಾಯುವರು. ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ, ತಹಶೀಲ್ದಾರ್ ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಎಲ್.ರಾಧ, ಪ್ರಧಾನ ಅರ್ಚಕರಾದ ನಾಗಲಿಂಗಚಾರ್, ಮುರಳೀಧರ್, ಲಕ್ಷ್ಮಿಕಾಂತ ಆಚಾರ್, ಹರೀಶ್, ಅರುಣ್, ಗ್ರಾಮ ಲೆಕ್ಕಿಗ ಶಿವರಾಮ್ ಇದ್ದರು.

ADVERTISEMENT

ತೆಪ್ಪೋತ್ಸವ

ಹುಲಿಯೂರುದುರ್ಗ: ಹಳೇವೂರು ಹುಲಿಯೂರಮ್ಮನಜಾತ್ರೆ ಉಯ್ಯಾಲೋತ್ಸವ ಹಾಗೂ ತೆಪ್ಪೋತ್ಸವಗಳೊಂದಿಗೆ ಮುಕ್ತಾಯಗೊಂಡಿತು.

ದೇವಾಲಯದ ಮುಂದಿನ ಪ್ರಾಂಗಣದಲ್ಲಿ ನಿರ್ಮಿಸಿದ್ದ ಅಲಂಕೃತ ಉಯ್ಯಾಲೆಯಲ್ಲಿ ಹುಲಿಯೂರಮ್ಮನ ಉಯ್ಯಾಲೆ ಆಡಿಸಿ ಜನರು ಸಂಭ್ರಮಿಸಿದರು.

ಹಳೇವೂರಿನ ತುಂಬಿದ ಕೆರೆಯಲ್ಲಿ ಹುಲಿಯೂರಮ್ಮ ಹಾಗೂ ಕಾಳಮ್ಮ ದೇವತಾ ಮೂರ್ತಿಗಳ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಒಂದು ಕಿ.ಮೀ ಉದ್ದದ ಕೆರೆಯ ಏರಿಯ ಉದ್ದಕ್ಕೂ ಜನರು ನಿಂತು ಸಮಾರೋಪ ಉತ್ಸವ ಕಣ್ತುಂಬಿಕೊಂಡರು.

ಅಗ್ನಿಕೊಂಡ
ತುರುವೇಕೆರೆ: ತಾಲ್ಲೂಕಿನ ಸೂಳೆಕೆರೆ ವೀರಭದ್ರೇಶ್ವರ ಸ್ವಾಮಿಯ ಅಗ್ನಿಕೊಂಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ವೀರಭದ್ರಸ್ವಾಮಿ ದೇವಾಲಯ ಮತ್ತು ದೇವರನ್ನು ವಿದ್ಯುತ್ ದೀಪ ಹಾಗೂ ಹೂಮಾಲೆಗಳಿಂದ ಅಲಂಕರಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ. ಅಲಂಕೃತಗೊಂಡ ದೇವರನ್ನು ಲಿಂಗದಬೀರ, ಡೊಳ್ಳುಕುಣಿತ, ತಾಳೆ ವಾದ್ಯ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರದೊಂದಿಗೆ ಮೆರವಣಿಗೆ ನಡೆಸಲಾಯಿತು.

ಭಕ್ತರಿಗೆ ಅನ್ನಸಂತರ್ಪನೆ ಏರ್ಪಡಿಸಲಾಗಿತ್ತು. ಅಗ್ನಿಕೊಂಡ ನೋಡಲು ತುರುವೇಕೆರೆ, ದಬ್ಬೇಘಟ್ಟ, ಹಾವಾಳ, ಬೆಂಗಳೂರು, ಮೈಸೂರು ಬೇರೆ ತಾಲ್ಲೂಕಿನಿಂದ ಭಕ್ತರು ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.