ADVERTISEMENT

ದಂಡಿನ ಮಾರಮ್ಮ ಜಾತ್ರೆಗೆ ಚಾಲನೆ: ವಿವಿಧೆಡೆ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 7:40 IST
Last Updated 17 ಮಾರ್ಚ್ 2011, 7:40 IST

ಮಧುಗಿರಿ: ಜಾತ್ರೆ ಏಕತೆ ಸಂಕೇತವಾಗಿದ್ದು, ಜನತೆ ತಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪ್ರಭಾರ ಉಪವಿಭಾಗಾಧಿಕಾರಿ ಅನುರಾಗ್ ತಿವಾರಿ ಸಲಹೆ ನೀಡಿದರು.ಪಟ್ಟಣದ ದಂಡಿನ ಮಾರಮ್ಮ ಜಾತ್ರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಮತ ಧರ್ಮಗಳ ಭೇದ ಇದ್ದರೂ; ಈ ನೆಲದಲ್ಲಿ ಸಹಬಾಳ್ವೆ, ಸೋದರತ್ವ ನೆಲೆಯೂರಿದೆ ಎಂದು ಶ್ಲಾಘಿಸಿದರು.

ಪುರಸಭಾ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಆರ್.ನಾಗರಾಜಶೆಟ್ಟಿ, ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ, ತಾಲ್ಲೂಕು ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಹಳ್ಳಿಕಾರ್ ಮುಖಂಡ ಚಿಕ್ಕಣ್ಣ, ಪ್ರಧಾನ ಅರ್ಚಕ ನಾಗಲಿಂಗಾಚಾರ್, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.
ಪುಟ್ಟನರಸಯ್ಯ ಸ್ವಾಗತಿಸಿದರು. ಗೋವಿಂದರಾಜು ವಂದಿಸಿದರು.

21ರಿಂದ ತಾತಯ್ಯ ಉತ್ಸವ
ಚಿಕ್ಕನಾಯಕನಹಳ್ಳಿ:
ನಗರದಲ್ಲಿರುವ ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಪವಾಡ ಪುರುಷ ಹಜರತ್ ಸೈಯದ್ ಮೊಹದ್ದೀನ್ ಷಾಖಾದ್ರಿ ಅವರ (ತಾತಯ್ಯ) 51ನೇ ವರ್ಷದ ಜಾತ್ರಾ ಮಹೋತ್ಸವ ಇದೇ 21ರಿಂದ ಮೂರು ದಿನ ನಡೆಯಲಿದೆ ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದ್ದು, 21ರ ರಾತ್ರಿ 8 ಗಂಟೆಗೆ ತಾತಯ್ಯನವರ ಉತ್ಸವವು ಅಲಂಕೃತ ಹೂವಿನ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಲಿದೆ. ನಂತರ ‘ಪಾತಹಾಖಾನಿ’ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

22ರಂದು ರಾತ್ರಿ 8-30ಕ್ಕೆ ಪುರಸಭಾ ಮಾಜಿ ಅಧ್ಯಕ್ಷ ಸಿ.ಬಸವರಾಜು ಪ್ರಾಯೋಜಕತ್ವದಲ್ಲಿ ಮುಜಫರ್ ಪುರದ ಅಸ್ಲಂ ಅಕ್ರಮ್‌ಸಾಬ್ರಿ ಪಾರ್ಟಿ ಮತ್ತು ನಾಗಪುರದ ಕರಿಷ್ಮಾತಾಜ್ ಪಾರ್ಟಿಯವರಿಂದ ಜಿದ್ದಾಜಿದ್ದಿನ ‘ಖವ್ವಾಲಿ’ ಏರ್ಪಡಿಸಿದೆ.23ರಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹಾಗೂ ಅಭಿಮಾನಿ ಬಗಳಗದಿಂದ ಎಸ್.ಪಿ. ಬಾಲಸುಬ್ರಹ್ಮಣ್ಯಂ ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಗೋರಿ ಕಮಿಟಿ ಸದಸ್ಯರಾದ ಟಿ.ರಾಮಯ್ಯ, ಮಹಮದ್ ಖಲಂದರ್, ಸಿ.ಎಂ.ರಂಗಸ್ವಾಮಿ, ಗನ್ನಿಸಾಬ್ ಮುಂತಾದವರಿದ್ದರು.

ಶೆಟ್ಟಿಕೆರೆ ಜಾತ್ರೆ 21ರಿಂದ
ಚಿಕ್ಕನಾಯಕನಹಳ್ಳಿ:
ತಾಲ್ಲೂಕಿನ ಶೆಟ್ಟಿಕೆರೆಯ ಕಾಲಭೈರವಸ್ವಾಮಿ ಜಾತ್ರಾ ಮಹೋತ್ಸವ ಇದೇ 21ರಿಂದ 30ರವರೆಗೆ ನಡೆಯಲಿದೆ.21ರಂದು ಪ್ರಥಮೋತ್ಸವ, 22ರಂದು ಭೂತೋತ್ಸವ, 23ರಂದು ಅಶ್ವಾರೋಹಣೋತ್ಸವ, 24ರಂದು ವ್ಯಾಘ್ರೋತ್ಸವ, 25 ರಂದು ಸರ್ಪೋತ್ಸವ, 26ರಂದು ಸಾಸಲು ಭಕ್ತರಿಂದ ಗಜಾರೋಹಣೋತ್ಸವ, 27 ರಂದು ಧ್ವಜಾರೋಹಣ, ವೃಷಭೋತ್ಸವ, ರುದ್ರಾಭಿಷೇಕ, ಮಹಾಮಂಗಳಾರತಿ ಕಾರ್ಯವು ಗ್ರಾಮದ ಬ್ರಾಹ್ಮಣ ಸಮಾಜದವರಿಂದ ನಡೆದು, ಸಂಜೆ ಹೂವಿನ ಚಪ್ಪರೋತ್ಸವ ಮತ್ತು ಮಂಗಳ ಸೂತ್ರಧಾರಣೋತ್ಸವವು ವಡೇರಹಳ್ಳಿ ಭಕ್ತರಿಂದ ನಡೆಯಲಿದೆ.

28ರಂದು ಗ್ರಾಮದ ವೀರಶೈವ ಭಕ್ತರಿಂದ ಗಂಗಾಸ್ನಾನ, ಮಧ್ಯಾಹ್ನ ಬ್ರಾಹ್ಮಣ ಸಮಾಜದವರಿಂದ ಬ್ರಹ್ಮ ರಥೋತ್ಸವ ಮತ್ತು ಸಂಜೆ ಗ್ರಾಮಸ್ಥರಿಂದ ರಥೋತ್ಸವ ನಡೆಯಲಿದ್ದು, ನಂದಿಕೋಲು ಕುಣಿತ, ವೀರಭದ್ರ ಕುಣಿತವನ್ನು ಎಂ.ಬಿ. ರಾಜೇಂದ್ರಕುಮಾರ್ ನಡೆಸಿಕೊಡುವರು. 29ರಂದು ಅಡ್ಡಪಲ್ಲಕ್ಕಿ ಉತ್ಸವ ಹಾಗೂ 30ರಂದು ವಸಂತೋತ್ಸವ ಮತ್ತು ಉಯ್ಯಾಲೋತ್ಸವ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಜೆ. ಕೃಷ್ಣಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಿಯಮ್ಮಜಾತ್ರೆ ನಾಳೆಯಿಂದ
ಚಿಕ್ಕನಾಯಕನಹಳ್ಳಿ:
ತಾಲ್ಲೂಕಿನ ಹಂದನಕೆರೆ ಹೋಬಳಿ ಮಲ್ಲಿಗೆರೆಯ ಕರಿಯಮ್ಮ ದೇವಿಯವರ ಜಾತ್ರಾ ಮಹೋತ್ಸವವು ಇದೇ 18ರಿಂದ ಐದು ದಿನ ನಡೆಯಲಿದೆ.
ಇದೇ 18ರಂದು ಧ್ವಜಾರೋಹಣ ಹಾಗೂ ಮಡ್ಲಕ್ಕಿಸೇವೆ, 19 ರಂದು ಬೆಳಿಗ್ಗೆ 8 ಗಂಟೆಗೆ  ಬಾನದ ಸೇವೆ, 20ರಂದು ಮಧ್ಯಾಹ್ನ 12 ಗಂಟೆಗೆ ‘ಸಿಡಿಸೇವೆ’ ನಡೆಯಲಿದೆ. ರಾತ್ರಿ 9 ಗಂಟೆಗೆ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯವರಿಂದ ‘ಶ್ರೀಕೃಷ್ಣ ಸಂಧಾನ’ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಸಿಕೊಡುವರು.

21ರಂದು ಮಧ್ಯಾಹ್ನ 12-30ಕ್ಕೆ ‘ಉಚಿತ ಸಾಮೂಹಿಕ ವಿವಾಹ’ ನಡೆಯಲಿದೆ. ಸಂಜೆ 7 ಗಂಟೆಗೆ ಸುಧಾ ಬರಗೂರು ತಂಡದಿಂದ ಹಾಸ್ಯ ಸಂಜೆ ಹಮ್ಮಿಕೊಳ್ಳಲಾಗಿದೆ. 22 ರಂದು ಮಧ್ಯಾಹ್ನ 3 ಗಂಟೆಗೆ ಉಯ್ಯಾಲೋತ್ಸವ ನಡೆಯಲಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.

ಮಡೆ ಮಹೋತ್ಸವ ಇಂದು
ತುರುವೇಕೆರೆ:
ಪಟ್ಟಣದ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಮುನ್ನಾ ದಿನವಾದ ಗುರುವಾರ ವಿಶಿಷ್ಟವಾದ ಮಡೆ ಮಹೋತ್ಸವ ನಡೆಯಲಿದ್ದು, ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.ಪುರಾತನ ಕಾಲದಿಂದಲೂ ಇಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಮಾದರಿಯಲ್ಲಿ ಮಡೆ ಉತ್ಸವ ಹಾಗೂ ಉರುಳು ಸೇವೆ ನಡೆದುಕೊಂಡು ಬಂದಿದೆ. ನಾಡಿನ ಮೂಲೆ ಮೂಲೆಗಳಿಂದ ಹರಕೆ ಕಟ್ಟಿಕೊಂಡು ಆಗಮಿಸುವ ನೂರಾರು ಭಕ್ತರು ಉರುಳು ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. 

ಮಧ್ಯಾಹ್ನ 2 ಗಂಟೆ ನಂತರ ಪವಿತ್ರ ತೀರ್ಥ ಸ್ನಾನ ಮಾಡುವ ಭಕ್ತರು ದೇವಾಲಯದ ಸುತ್ತ ಮೂರು ಸುತ್ತು ಉರುಳುವ ಮೂಲಕ ತಮ್ಮ ಹರಕೆ ತೀರಿಸುವುದು ವಾಡಿಕೆ. ಇದರಿಂದ ಚರ್ಮ ರೋಗಗಳು, ಮನೋವ್ಯಾಧಿ, ಸ್ನಾಯು ಸೆಳೆತ ಮುಂತಾದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ.

ಶುಕ್ರವಾರ ಮಧ್ಯಾಹ್ನ ಮಘಾ ನಕ್ಷತ್ರದಲ್ಲಿ ಬೇಟೆರಾಯಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ತಹಶೀಲ್ದಾರ್ ಟಿ.ಆರ್.ಶೋಭಾ ಹಾಗೂ ಇತರೆ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಧಾನ ಲೀಲೋತ್ಸವ, ಉಪ್ಪರಿಗೆ ವಾಹನೋತ್ಸವ, ಕೀಲುಕುದುರೆ ಉತ್ಸವ, ಚಂಪಕೋತ್ಸವಗಳು ಮುಂದಿನ ಐದು ದಿನಗಳಲ್ಲಿ ಜರುಗಲಿದ್ದು, ಮಾರ್ಚ್ 24ರಂದು ವಿಜಯೋತ್ಸವದೊಂದಿಗೆ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.