ADVERTISEMENT

ದಾವೆ ವಜಾ, 10 ಸಾವಿರ ದಂಡ

ಶಿರಾ ಜಾಮಿಯಾ ಮಸೀದಿ ಅಂಗಡಿ ಮಳಿಗೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:06 IST
Last Updated 10 ಡಿಸೆಂಬರ್ 2013, 9:06 IST

ತುಮಕೂರು: ಕೋಮು ಹಿಂಸೆಗೆ ಕಾರಣವಾಗಿದ್ದ ಶಿರಾ ಪಟ್ಟಣದ ಜಾಮೀಯಾ ಮಸೀದಿಗೆ  (ವಕ್ಛ್‌) ಸೇರಿದ್ದ ವಾಣಿಜ್ಯ ಮಳಿಗೆಗಳ ಸಂಬಂಧ ಜಿಲ್ಲಾಧಿಕಾರಿ ಆದೇಶದ ವಿರುದ್ಧ ಹೈಕೋರ್ಟ್‌ಗೆ ಸಲ್ಲಿಸಿದ್ದ ದಾವೆಯನ್ನು  ರದ್ದುಗೊಳಿಸಿದೆ. ದಾವೆ ಹೂಡಿದ ಎಸ್‌.ವಿ.ಕಾಂತರಾಜು ಅವರಿಗೆ ರೂ. 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಜಾಮೀಯ ಮಸೀದಿ ಅಧ್ಯಕ್ಷ ಚಾಂದ್ ಪಾಷ ತಿಳಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೋರ್ಟ್‌ ತೀರ್ಪು ಕುರಿತು ವಿವರ ನೀಡಿದರು. ಶೀಘ್ರವೇ ಅಂಗಡಿ ಮಳಿಗೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಒಟ್ಟು 112 ಮಳಿಗೆ ಇದ್ದು, ಇವುಗಳಲ್ಲಿ 33 ಮಳಿಗೆಯನ್ನು ಇತರೆ ಸಮುದಾಯಕ್ಕೆ ನೀಡಲಾಗಿದೆ. ಪ್ರತಿ ತಿಂಗಳು ರೂ. 1.12 ಲಕ್ಷ ಬಾಡಿಗೆ ಬರಲಿದೆ. ವಿವಾದದಿಂದಾಗಿ ಮಳಿಗೆ ಪಡೆದಿರುವ ಬಾಡಿಗೆದಾರರು ಮಳಿಗೆ­ಗಳನ್ನು ಇಲ್ಲಿಯವರೆಗೂ ತೆರೆಯಲು ಸಾಧ್ಯವಾಗಿರಲಿಲ್ಲ ಎಂದರು.

ವಕ್ಛ್‌ ಮಂಡಳಿಗೆ ಸೇರಿರುವ 10.10 ಎಕರೆ ಜಾಗದಲ್ಲಿ 1 ಎಕರೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಸರ್ಕಾರದ ಭೂ ಪರಿವರ್ತನೆಯ ಆದೇಶದ ನಂತರ ಜಿಲ್ಲಾಧಿಕಾರಿ ಆಗಸ್ಟ್‌ ತಿಂಗಳಲ್ಲಿ ಮಳಿಗೆಗಳನ್ನು ತೆರೆಯಲು ಆದೇಶ ನೀಡಿದ್ದರು. ಈ ಆದೇಶ ಪ್ರಶ್ನಿಸಿ ಶಿರಾ ಟೌನ್‌ ಡೆವಲಪ್‌ಮೆಂಟ್‌ ಅಂಡ್‌ ರೆವಲ್ಯೂಷನ್‌ ಫೋರಂನ ಎಚ್‌.ವಿ.­ಕಾಂತರಾಜು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು ಎಂದು ತಿಳಿಸಿದರು.

ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಕಾರಣಕ್ಕಾಗಿ ನ್ಯಾಯಾಲಯವು ರೂ. 10 ಸಾವಿರ ದಂಡ ವಿಧಿಸಿದ್ದು, ಅರ್ಜಿದಾರರು ರೂ. 5 ಸಾವಿರ ನ್ಯಾಯಾಲಯಕ್ಕೂ, ಉಳಿದ ಹಣವನ್ನು ವಕ್ಛ್‌ ಮಂಡಳಿಗೆ ನೀಡಬೇಕಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಕ್ಛ್‌ ಉಪಾಧ್ಯಕ್ಷ ಚೌದ್ರಿ ಷಹಾಬುದ್ದೀನ್‌, ಕಾರ್ಯದರ್ಶಿ ಶೇಖ್‌ ಅಬ್ದುಲ್‌ ಹುಸೇನ್, ಮುಖಂಡರಾದ ಖಲೀಂಖಾನ್‌, ಅಬ್ದುಲ್‌ ಖಾದರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.