ADVERTISEMENT

ದುರಸ್ತಿ ಕಾಣದ ಸೇತುವೆ ತಡೆಗೋಡೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:50 IST
Last Updated 14 ಸೆಪ್ಟೆಂಬರ್ 2011, 9:50 IST

ಶಿರಾ: ಕೆರೆ ಏರಿ ಮೇಲಿನ ರಸ್ತೆ ಹಾಗೂ ಸೇತುವೆಗಳಿಗೆ ತಡೆಗೋಡೆಗಳಿಲ್ಲದೆ ವಾಹನಗಳು ಅಪಘಾತಕ್ಕೀಡಾಗಿ ಜನ ಸಾವನ್ನಪ್ಪುತ್ತಿರುವುದು  ಸಾಮಾನ್ಯವಾಗಿದೆ. ದುರಂತದ ಸಂದರ್ಭದಲ್ಲಿ ಅಧಿಕಾರಿಗಳು ಜನರ ಕಣ್ಣೋರೆಸುವ ತಂತ್ರ ಎಂಬಂತೆ ತಡೆಗೋಡೆ ನಿರ್ಮಿಸುವ ಭರವಸೆ ನೀಡಿ ನಂತರ ಮರೆತು ಬಿಡುತ್ತಾರೆ.

ಶಿರಾ- ಅಮರಾಪುರ ರಸ್ತೆ ಮುಷ್ಠಿಗರಹಳ್ಳಿ ಸಮೀಪದ ಸೇತುವೆಯ ಮುರಿದ ತಡೆಗೋಡೆ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಇಲ್ಲಿ ಬಸ್ ಅಪಘಾತ ಸಂಭವಿಸಿದ ಪರಿಣಾಮ ತಡೆಗೋಡೆ ಮುರಿದು ಬಿದ್ದು ವರ್ಷಗಳೇ ಉರುಳಿವೆ. ಆದರೆ ಈವರೆಗೂ ಸೇತುವೆ ಮೇಲಿನ ತಡೆಗೋಡೆ ಪುನರ್ ನಿರ್ಮಾಣ ಕಾರ್ಯ ನಡೆದಿಲ್ಲ.
ಅಂದು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆಯ ತಡೆಗೋಡೆ ಕಳಪೆ ಕಾಮಗಾರಿಯಿಂದ ಕೂಡಿದ್ದೇ ಮುರಿದು ಬೀಳಲು ಕಾರಣ. ಶೀಘ್ರ ತಡೆಗೋಡೆಯನ್ನು ಪುನರ್ ನಿರ್ಮಿಸುವುದಾಗಿ ಭರವಸೆ ನೀಡಿ ಹೋಗಿದ್ದರು.

ಆದರೆ ಈವರೆಗೂ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿಲ್ಲ. ಕರ್ನಾಟಕ- ಆಂಧ್ರಪ್ರದೇಶಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಮುಂದೆ ಮತ್ತೊಂದು ದೊಡ್ಡ ದುರಂತ ಸಂಭವಿಸುವವರೆಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.