ADVERTISEMENT

ನಗರಸಭೆ: ಅಧಿಕಾರ ಗದ್ದುಗೆಗೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:20 IST
Last Updated 14 ಸೆಪ್ಟೆಂಬರ್ 2013, 6:20 IST

ತುಮಕೂರು: ನಗರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಪೈಪೋಟಿ ಆರಂಭವಾಗಿದೆ. ಎರಡೂ ಪಕ್ಷಗಳು ತಮಗೆ ಬೆಂಬಲ ನೀಡು­ವವರ ಹುಡುಕಾಟದಲ್ಲಿ ತೊಡ­ಗಿದ್ದು, ಅಧಿಕಾರ ಗದ್ದುಗೆಗೆ ಗುದ್ದಾಟ ನಡೆಸಿವೆ.

ಕಾಂಗ್ರೆಸ್‌– ಜೆಡಿಎಸ್‌ ಸೇರಿ ಅಧಿಕಾರ ಹಿಡಿಯುವ ಬಗ್ಗೆ ಆರಂಭದಲ್ಲಿ ಮಾತು­ಕತೆ ನಡೆಯುತ್ತಿತ್ತು. ಆದರೆ ಅಧ್ಯಕ್ಷ ಸ್ಥಾನ ಯಾರಿಗೆ ಎಂಬ ವಿಚಾರದಲ್ಲಿ ಎರಡು ಪಕ್ಷಗಳಲ್ಲಿ ಒಮ್ಮತವಿಲ್ಲ. ಒಬ್ಬರನ್ನು ಬದಿಗಿಟ್ಟು ಇತರರ ಜೊತೆ ಸೇರಿದರೆ ಅಧ್ಯಕ್ಷ– ಉಪಾಧ್ಯಕ್ಷ ಎರಡೂ ಸ್ಥಾನಗಳು ತಮಗೇ ದೊರೆಯುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

ತುಮಕೂರು ನಗರಸಭೆಯಲ್ಲಿ ಯಾರಿಗೂ ಬಹುಮತವಿಲ್ಲ. ಒಟ್ಟು 35 ಸದಸ್ಯರಿದ್ದು, ಜೆಡಿಎಸ್‌ 13, ಕಾಂಗ್ರೆಸ್ 12, ಬಿಜೆಪಿ 3, ಕೆಜೆಪಿ 5 ಮತ್ತು ಪಕ್ಷೇತರ ಇಬ್ಬರು ಸದಸ್ಯರು ಇದ್ದಾರೆ. ಅಲ್ಲದೆ ಶಾಸಕ, ಸಂಸದ ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಮತ ಚಲಾಯಿ­ಸುವ ಹಕ್ಕು ಇದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ನಲ್ಲಿ ತಲಾ ಒಬ್ಬರು ಸದಸ್ಯರು ಮಾತ್ರ ಇದ್ದಾರೆ.

ಕಾಂಗ್ರೆಸ್‌ ಅಥವಾ ಜೆಡಿಎಸ್‌ ಇತರ ಯಾರ ಜೊತೆಗೆ ಹೊಂದಾಣಿಕೆ ಮಾಡಿ­ಕೊಂಡರೂ ಉಪಾಧ್ಯಕ್ಷ ಸ್ಥಾನ ಬಿಟ್ಟು­ಕೊಡ­ಬೇಕಾಗಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿದರೆ ಸಾಕು. ಹೀಗಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂ­ಡರು ಪರಸ್ಪರ ಪೈಪೋಟಿ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕಾಂಗ್ರೆಸ್‌ ಮುಖಂಡರು ಕೆಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಕೆಜೆಪಿ ಸಹ ಮೈತ್ರಿಗೆ ಸಿದ್ಧವಾಗಿದೆ. ಅಲ್ಲದೆ ಜೆಡಿಎಸ್‌ ಕೆಜೆಪಿ ಮತ್ತು ಬಿಜೆಪಿ ಸದಸ್ಯರನ್ನು ತಮ್ಮೊಂದಿಗೆ ಬರುವಂತೆ ಕೋರಿದ್ದಾರೆ ಎನ್ನಲಾಗಿದೆ. ಇಬ್ಬರು ಪಕ್ಷೇತರ ಸದಸ್ಯರಿಗೂ ಸಹ ಈ ಸಂದರ್ಭ ಬೇಡಿಕೆ ಬಂದಿದೆ.

ಅಧಿಕಾರವೇ ಮುಖ್ಯ
‘ನಗರಸಭೆಯಲ್ಲಿ ಅತಿ ಹೆಚ್ಚು ಸದಸ್ಯ ಸ್ಥಾನವನ್ನು ಜೆಡಿಎಸ್‌ ಹೊಂದಿದೆ. ಅಧಿಕಾರ ಸಿಗುವುದಾದರೆ ಯಾರೊಂದಿಗೆ ಬೇಕಾದರೂ ಮೈತ್ರಿಗೆ ಸಿದ್ಧ. ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟರೆ ಕಾಂಗ್ರೆಸ್‌ನೊಂದಿಗೆ ಸಹ ಮಾತನಾಡಲು ಸಿದ್ಧ. ಈ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್‌.­ಹುಲಿನಾಯ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.